ಇಂದಿನ ಜಮಾನದಲ್ಲಿ ಅದೆಷ್ಟೇ ವೆರೈಟಿ ಆಭರಣಗಳು ಬಂದರೂ ಮುತ್ತಿನ ಹಾರಕ್ಕೆ ಇರುವ ಬೇಡಿಕೆ ಇದ್ದೇ ಇದೆ. ಟ್ರೆಂಡ್‌ಗೆ ತಕ್ಕಂತೆ ಹೊಸ ರೂಪ ಪಡೆದು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಲೇ ಇರುತ್ತದೆ. ಇದನ್ನೂ ಓದಿ:ಪ್ರಿಯಾಂಕ ಚೋಪ್ರಾ ಹುಟ್ಟು ಹಬ್ಬಕ್ಕೆ ಪತಿ ಕೊಟ್ಟ ಸರ್ಪ್ರೈಸ್ ಗಿಫ್ಟ್
ಮುತ್ತಿನ ಹಾರಗಳು (Pearl Necklace) ಇದೀಗ ಫ್ಯಾಷನ್ ಟಚ್ ಪಡೆದು ಹೊಸ ಲುಕ್‌ನಲ್ಲಿ ಎಂಟ್ರಿ ನೀಡಿವೆ. ಈ ಹಿಂದೆ ಮಹಿಳೆಯರು ಸಿಂಗರಿಸುಕೊಳ್ಳುತ್ತಿದ್ದ, ಬಗೆಬಗೆಯ ಮುತ್ತಿನ ಆಭರಣಗಳು ಹಳೆಯ ಕಾಲದ ಟ್ರೆಡಿಷನಲ್ ಲುಕ್‌ನಿಂದ ಮುಕ್ತಿ ಪಡೆದು, ಇದೀಗ ನಯಾ ಜಮಾನದ ಯುವತಿಯರಿಗೂ ಪ್ರಿಯವಾಗುವಂತಹ ಹೊಸ ಡಿಸೈನ್‌ನಲ್ಲಿ ಬಿಡುಗಡೆಗೊಂಡಿದ್ದು, ಫ್ಯಾಷನ್ ಜ್ಯುವೆಲರಿಗಳ ಟಾಪ್ ಲಿಸ್ಟ್‌ಗೆ ಸೇರಿಕೊಂಡಿವೆ.
ಮುತ್ತಿನ ಹಾರಗಳು ಬಹುತೇಕ ಮಹಿಳೆಯರ ಫೆವರೇಟ್ ಆಭರಣಗಳು. ಹಳೆ ಜನರೇಷನ್ ಮಹಿಳೆಯರ ಜ್ಯುವೆಲರಿ ಸಂಗ್ರಹಗಳಲ್ಲಿ ತಮ್ಮದೇ ಆದ ಸ್ಥಾನವನ್ನು ಗಳಿಸಿವೆ. ಟ್ರೆಡಿಷನಲ್ ಡಿಸೈನ್‌ನಲ್ಲಿ ಸಾಕಷ್ಟು ಪ್ರಚಲಿತದಲ್ಲಿದ್ದವು. ಬರುಬರುತ್ತಾ ಈ ಮುತ್ತಿನ ಹಾರಗಳು ಜ್ಯುವೆಲ್ ಡಿಸೈನರ್‌ಗಳ ಕೈ ಸೇರಿ ನಾನಾ ಬಗೆಯ ವಿನ್ಯಾಸಕ್ಕೆ ಒಳಪಟ್ಟು, ಹೊಸ ರೂಪ ಪಡೆದಿದೆ.
ಅದಷ್ಟೇ ಅಲ್ಲ, ಮುತ್ತಿನ ಹಾರಗಳು ಇಂತಹ ರೂಪ ಪಡೆಯಬಹುದೇ ಎನ್ನುವಷ್ಟರ ಮಟ್ಟಿಗೆ ಹೊಸ ಡಿಸೈನ್‌ಗಳಲ್ಲಿ ಇದೀಗ ಬಿಡುಗಡೆಗೊಳ್ಳಲಾರಂಭಿಸಿವೆ. ಒಂದಕ್ಕಿಂತ ಒಂದು ಹೊಸ ಹೊಸ ಡಿಸೈನ್‌ನಲ್ಲಿ ಎಂಟ್ರಿ ನೀಡಲಾರಂಭಿಸಿವೆ. ಪರಿಣಾಮ ಈ ಜನರೇಷನ್‌ನ ಯುವತಿಯರು ಕೂಡ ಇವುಗಳತ್ತ ಆಕರ್ಷಿತರಾಗತೊಡಗಿದ್ದಾರೆ. ಮುತ್ತಿನ ಹಾರಗಳಿಗೆ ಅದರದ್ದೇ ಆದ ಹಿಸ್ಟರಿ ಇದೆ. ಕಾಲ ಬದಲಾದಂತೆ ತಮ್ಮ ರೂಪ ಬದಲಿಸಿಕೊಂಡಿವೆ ಅಷ್ಟೇ.
ಬಿಗ್ ಪೆಂಡೆಂಟ್‌ನ ಮುತ್ತಿನ ಹಾರ, ಪ್ರಿಶಿಯಸ್ ಸ್ಟೋನ್ಸ್ ಮಿಕ್ಸ್ ಮ್ಯಾಚ್ ಹೊಂದಿದ ಮುತ್ತಿನ ಹಾರ, ಲಾಂಗ್ ಚೈನ್ ಹೊಂದಿದ ಮುತ್ತಿನ ಹಾರ, ನಾಗರ, ನವಿಲು ಹೀಗೆ ನಾನಾ ಡಿಸೈನ್‌ನ ಅಗಲವಾದ ಪೆಂಡೆಂಟ್ ಹೊಂದಿರುವ ಹಾರ, ಟೈನಿ ಮುತ್ತಿನ ಎಳೆಗಳನ್ನು ಹೊಂದಿರುವ ಹಾರ, ಬಿಗ್ ಪರ್ಲ್ನ ವಿಕ್ಟೋರಿಯಾ ಸೆಟ್, ಜಿರ್ಕೊನಿ ಡಿಸೈನ್ ಪೆಂಡೆಂಟ್‌ನ ಹಾರ ಸೇರಿದಂತೆ ನಾನಾ ಬಗೆಯ ಮುತ್ತಿನ ಹಾರಗಳು ಟ್ರೆಂಡ್‌ನಲ್ಲಿವೆ.
ಇದೀಗ ಫ್ಯಾಷನ್ ಜ್ಯುವೆಲರಿಗಳಲ್ಲಿ ಮುತ್ತಿನ ಹಾರದ ರಿಪ್ಲೀಕಾಗಳು ಬಂದಿವೆ. ಹೆಚ್ಚು ಬೆಲೆ ಇರದ ಫೇಕ್ ಮುತ್ತಿನಿಂದ ತಯಾರಿಸಲಾದ ಈ ಹಾರಗಳು ಕೂಡ ಟ್ರೆಂಡ್‌ನಲ್ಲಿವೆ. ಹೆಚ್ಚು ಬೆಲೆ ತೆತ್ತುಕೊಳ್ಳಲಾಗದವರು ಇವನ್ನು ಧರಿಸಿ ಸಮಾಧಾನಪಟ್ಟುಕೊಳ್ಳಬಹುದು. ಇದು ನಾನಾ ರೀತಿಯಲ್ಲಿ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಜೊತೆಗೆ ಬೇಡಿಕೆ ಕೂಡ ಹೆಚ್ಚಾಗಿದೆ.
*ಬಿಗ್ ಸ್ಟೋನ್ ಪೆಂಡೆಂಟ್ ಮುತ್ತಿನ ಹಾರ ಚಾಲ್ತಿಯಲ್ಲಿದೆ.
*ಎಳೆಎಳೆಯಾಗಿರುವಂತಹ ಮುತ್ತಿನ ಹಾರಗಳು ಬೇಡಿಕೆ ಪಡೆದುಕೊಂಡಿವೆ.
*ನೂರರಲ್ಲಿ ಹತ್ತು ಮಹಿಳೆಯರ ಬಳಿ ಒಂದಲ್ಲ ಒಂದು ಮುತ್ತಿನ ಹಾರ ಇದ್ದೇ ಇರುತ್ತದಂತೆ.