ಬೆಂಗಳೂರು: ಸಂದೀಪ್ ಜನಾರ್ಧನ್ ನಿರ್ದೇಶನದ ಫೇಸ್ ಟು ಫೇಸ್ ಚಿತ್ರ ತೆರೆ ಕಂಡಿದೆ. ರಿಯಲ್ ಸ್ಟಾರ್ ಉಪೇಂದ್ರ ಗರಡಿಯಲ್ಲಿ ಪಳಗಿಕೊಂಡಿರೋ ಸಂದೀಪ್ ಆರಂಭದಲ್ಲಿಯೇ ಈ ಚಿತ್ರದಲ್ಲೇನೋ ವಿಶೇಷವಿದೆ ಅನ್ನೋ ಸುಳಿವು ಬಿಟ್ಟುಕೊಟ್ಟಿದ್ದರು. ಆ ನಂತರ ಹೊರಬಂದ ಹಾಡು, ಟ್ರೈಲರ್ ಗಳೆಲ್ಲವೂ ಕುತೂಹಲವನ್ನ ಉದ್ದೀಪಿಸುವಂತೆಯೇ ಇದ್ದವು. ಇದೀಗ ಫೇಸ್ ಟು ಫೇಸ್ ಪ್ರೇಕ್ಷಕರನ್ನೂ ಮುಖಾಮುಖಿಯಾಗಿದೆ. ಪ್ರೀತಿ, ಪ್ರೇಮ, ಸಂಬಂಧಗಳ ಕಥಾನಕವನ್ನೂ ಕೂಡಾ ಥ್ರಿಲ್ಲರ್ ಕಥೆಗಳಂಥಾದ್ದೇ ಗಾಢವಾದ ಕುತೂಹಲದೊಂದಿಗೆ ನೋಡಿಸಿಕೊಂಡು ಹೋಗುವಲ್ಲಿ ಈ ಚಿತ್ರ ಯಶ ಕಂಡಿದೆ.
ನಿರ್ದೇಶಕ ಸಂದೀಪ್ ಜನಾರ್ಧನ್ ಫೇಸ್ ಟು ಫೇಸ್ ಚಿತ್ರದಲ್ಲಿ ಸ್ಕ್ರೀನ್ ಪ್ಲೇ ಬೆರಗಿದೆ ಅಂತೊಂದು ಮಾತು ಹೇಳಿದ್ದರು. ಅದು ಪ್ರತೀ ಪ್ರೇಕ್ಷಕರ ಅನುಭವಕ್ಕೂ ಬಂದಿದೆ. ಈ ಜಾದೂ ದೆಸೆಯಿಂದಲೇ ಫೇಸ್ ಟು ಫೇಸ್ ರೋಚಕ ಅನುಭವವನ್ನೂ ಕೊಡಮಾಡಿದೆ. ನೋಡುಗರು ಒಂದು ಅಂದುಕೊಂಡರೆ ಮತ್ತೇನೋ ಘಟಿಸುವ, ಹೋ ಹೀಗಾ ಅಂತ ನಿರಾಳವಾಗುವ ಹೊತ್ತಿನಲ್ಲಿ ಯಾವುದೂ ಹಾಗಲ್ಲ ಅನ್ನಿಸುತ್ತಲೇ ಇಡೀ ಚಿತ್ರವನ್ನು ಬೇರೆಯದ್ದೇ ರೀತಿಯಲ್ಲಿ ಕಟ್ಟಿ ಕೊಡಲಾಗಿದೆ.
Advertisement
Advertisement
ನಾಯಕ ಸಂತೋಷ್ ಪಾತ್ರವನ್ನು ರೋಹಿತ್ ಭಾನುಪ್ರಕಾಶ್ ನಿರ್ವಹಿಸಿದ್ದರೆ, ಸ್ನೇಹಾ ಆಗಿ ದಿವ್ಯಾ ಉರುಡಗ ಮತ್ತು ಪ್ರೀತಿಯಾಗಿ ಪೂರ್ವಿ ಜೋಶಿ ನಟಿಸಿದ್ದಾರೆ. ನಾಯಕನಿಗೆ ಆರಂಭದಲ್ಲಿ ಪ್ರೀತಿಯೊಂದಿಗೆ ಪ್ರೀತಿ ಚಿಗುರಿಕೊಂಡಿರುತ್ತೆ. ಆದರೆ ಅದಕ್ಕೂ ಮೊದಲೇ ಸಂತೋಷ್ ಸ್ನೇಹಾಳನ್ನು ಪ್ರೀತಿಸಿರುತ್ತಾನೆ. ಆದರಾಕೆ ನೆನಪುಗಳೆಲ್ಲ ಅಳಿಸಿ ಹೋದಂಥಾ ಸ್ಥಿತಿಯಲ್ಲಿ ದೂರಾಗಿ ಬಿಟ್ಟಿರುತ್ತಾಳೆ.
Advertisement
ಇಂಥಾದ್ದೊಂದು ಕ್ಲೀನ್ ಪಿಕ್ಚರ್ ಆರಂಭದಲ್ಲಿಯೇ ಪ್ರೇಕ್ಷಕರಿಗೆ ತಿಳಿಸಿ ನಂತರ ಗೊಂದಲ ಮಾಡುತ್ತಲೇ ಕುತೂಹಲ ಹುಟ್ಟಿಸುವ ಮಾರ್ಗವನ್ನು ನಿರ್ದೇಶಕರು ಆರಿಸಿಕೊಂಡಿದ್ದಾರೆ. ಒಂದೇ ಸಲಕ್ಕೆ ಕರಾವಳಿ ಮತ್ತು ಚಿಕ್ಕಮಗಳೂರು ಪ್ರದೇಶದ ಮಲೆನಾಡಿನಲ್ಲಿ ಕಥೆ ಚಲಿಸುತ್ತೆ. ಇದ್ದಕ್ಕಿದ್ದಂತೆ ಕಥೆ ಪಥ ಬದಲಿಸಿ ಎಲ್ಲವನ್ನೂ ಗೊಂದಲಕ್ಕೆ ತಳ್ಳುತ್ತಲೇ ಮತ್ತೆ ದಾರಿಗೆ ಮರಳುತ್ತೆ. ಟ್ವಿಸ್ಟಿನ ಹಿಂದೆ ಟ್ವಿಸ್ಟು. ಹೋ ಇದಾ ವಿಷ್ಯ ಅಂತ ಪ್ರೇಕ್ಷಕರು ನಿರಾಳವಾಗೋ ಹೊತ್ತಿಗೇ ಸೀನುಗಳೆಲ್ಲವೂ ಉಲ್ಟಾಪಲ್ಟಾ… ಫೇಸ್ ಟು ಫೇಸ್ ಅನುಭವವನ್ನು ರೋಚಕವಾಗಿಸೋದು ಇದೇ ಅಂಶ!
Advertisement
ಆರಂಭದಿಂದ ಕಡೇಯವರೆಗೂ ಈ ಚಿತ್ರ ಕಣ್ಣೆವೆ ಮಿಟುಕಿಸದಂತೆ ನೋಡಿಸಿಕೊಂಡು ಹೋಗುತ್ತದೆ. ಪ್ರೀತಿ ಪ್ರೇಮ, ತಾಯಿ ಸೆಂಟಿಮೆಂಟು, ಸಂಬಂಧ ಸೂಕ್ಷ್ಮ ಹೊಂದಿರೋ ಈ ಚಿತ್ರದಲ್ಲಿ ಒಂದು ಮರ್ಡರ್ ಮಿಸ್ಟರಿಯೂ ಇದೆ. ಆದರೆ ಚೂರೇ ಚೂರು ಎಚ್ಚರ ತಪ್ಪಿದರೂ ಸಿಕ್ಕು ಸಿಕ್ಕಾಗುವಂಥಾ ಅಪಾಯವನ್ನ ನಿರ್ದೇಶಕರು ಜಾಣ್ಮೆಯಿಂದಲೇ ಮೀರಿಕೊಂಡಿದ್ದಾರೆ. ಗೊಂದಲಕ್ಕೆಲ್ಲ ಸೂಕ್ತ ಪರಿಹಾರಗಳನ್ನೂ ಕಲ್ಪಿಸಿದ್ದಾರೆ. ಇನ್ನುಳಿದಂತೆ ರೋಹಿತ್ ಭಾನುಪ್ರಕಾಶ್ ನಟನೆಯಲ್ಲಿ ಭರವಸೆ ಹುಟ್ಟಿಸುತ್ತಾರೆ. ನಾಯಕಿಯರಾದ ಪೂರ್ವಿ ಮತ್ತು ದಿವ್ಯಾ ಪೈಪೋಟಿಗೆ ಬಿದ್ದಂತೆ ನಟಿಸಿದ್ದಾರೆ. ಎಲ್ಲ ಪಾತ್ರವರ್ಗಗಳೂ ಇದಕ್ಕೆ ಪೂರಕವಾಗಿವೆ.
ಪ್ರತೀ ಫ್ರೇಮಿನಲ್ಲಿಯೂ ಪ್ರೇಕ್ಷಕರನ್ನು ಹಿಡಿದಿಡೋ ಈ ಚಿತ್ರ ಎಲ್ಲ ವರ್ಗದವರಿಗೂ ಇಷ್ಟವಾಗುವಂತಿವೆ. ಟ್ವಿಸ್ಟುಗಳ ಸರಮಾಲೆಯೇ ಇದ್ದರೂ ಕಡೆಗೂ ಒಂದು ಭಯಾನಕ ಟ್ವಿಸ್ಟ್ ಇದ್ದೇ ಇದೆ. ಅದು ಕ್ಲೈಮ್ಯಾಕ್ಸ್ ಅನ್ನೂ ಕಾಡುವಂತೆ ಮಾಡಿದೆ. ಒಟ್ಟಾರೆಯಾಗಿ ಒಂದು ರೋಚಕ ಅನುಭವ ನೀಡೋ ಅಪರೂಪದ ಈ ಚಿತ್ರವನ್ನು ನೀವೊಮ್ಮೆ ನೋಡಬೇಕಿದೆ.
ರೇಟಿಂಗ್: 4/5
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv