ಬೆಂಗಳೂರು: ಅದೆಂಥಾ ಕನಸೇ ಆಗಿದ್ದರೂ ಸರಿಯಾದ ಪೋಷಣೆ ಸಿಗದಿದ್ದಾಗ ಕಮರಿ ಹೋಗೋ ಅಪಾಯವಿದೆ. ಫೇಸ್ ಟು ಫೇಸ್ ಚಿತ್ರದ ನಿರ್ದೇಶಕ ಸಂದೀಪ್ ಜನಾರ್ಧನ್ ಕೂಡಾ ವರ್ಷಾಂತರಗಳ ಕಾಲ ಸಿನಿಮಾ ನಿರ್ದೇಶನ ಮಾಡಬೇಕೆಂದಿದ್ದ ಕನಸು ಕಮರುವ ಅಂಚಿನಲ್ಲಿದ್ದರು. ಒಂದು ಚೆಂದದ ಕಥೆ ರೆಡಿ ಮಾಡಿಕೊಂಡು, ಎಲ್ಲ ರೂಪುರೇಷೆ ಪಕ್ಕಾ ಇದ್ದರೂ ನಿರ್ಮಾಪಕರನ್ನು ಹುಡುಕೋದೇ ದೊಡ್ಡ ತಲೆ ನೋವಾಗಿತ್ತು.
ಪ್ರತಿಭಾವಂತ ನಿರ್ದೇಶಕರೆಲ್ಲರೂ ಒಂದಲ್ಲ ಒಂದು ಹಂತದಲ್ಲಿ ಇಂಥಾ ಸ್ಥಿತಿಯನ್ನು ದಾಟಿಕೊಂಡೇ ಬಂದಿರುತ್ತಾರೆ. ನವ ನಿರ್ದೇಶಕರೆಂದ ಮೇಲೆ ನಿರ್ಮಾಪಕರ ಸಮಸ್ಯೆ ಹುಟ್ಟಿಕೊಳ್ಳೋದು ಮಾಮೂಲು. ಅದೆಷ್ಟೋ ವರ್ಷಗಳ ಕಾಲ ನಿರ್ದೇಶನ ವಿಭಾಗದಲ್ಲಿ ಸೈಕಲ್ಲು ಹೊಡೆಯುತ್ತಿದ್ದ ಮಗನ ಒಳತೋಟಿಯನ್ನು ಅರ್ಥ ಮಾಡಿಕೊಂಡು ಸಂದೀಪ್ ಅವರ ತಾಯಿ ಆಗಮಿಸದೇ ಹೋಗಿದ್ದರೆ ಫೇಸ್ ಟು ಫೇಸ್ ಇಷ್ಟು ಬೇಗ ಟೇಕಾಫ್ ಆಗುತ್ತಿರಲಿಲ್ಲ.
ಹಾಗೆ ಮಗನ ಕನಸಿಗೆ ನಿರ್ಮಾಪಕಿಯಾಗಿ ಒತ್ತಾಸೆಯಾದವರು ಅವರ ತಾಯಿ ಸುಮಿತ್ರಾ ಜನಾರ್ಧನ್. ಇವರ ಪಾಲಿಗೆ ನಿರ್ಮಾಣ ಹೊಸದು. ಆದರೆ ಮಗನ ಮೂಲಕವೇ ಸಿನಿಮಾ ಕ್ಷೇತ್ರವನ್ನು ಪರಿಚಯ ಮಾಡಿಕೊಂಡಿರೋ ಅವರು ಕೂಡಾ ಅಂತಿಮವಾಗಿ ಚಿತ್ರ ಮೂಡಿ ಬಂದಿರೋ ರೀತಿ ಕಂಡು ಖುಷಿಯಾಗಿದ್ದಾರಂತೆ. ಸಂದೀಪ್ ಪಾಲಿಗೆ ಅಮ್ಮನ ಖುಷಿಯಲ್ಲಿಯೇ ಗೆಲುವೊಂದು ಕಣ್ಣು ಮಿಟುಕಿಸಿದಂತೆ ಭಾಸವಾಗುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv