ಬೆಂಗಳೂರು: ಜೈಲಿನಿಂದ ರಿಲೀಸ್ ಆಗಿರುವ ಮಾಜಿ ಸಚಿವ ಹೆಚ್.ಡಿ ರೇವಣ್ಣ (HD Revanna) ಅವರು ನೇರವಾಗಿ ಪದ್ಮನಾಭನಗರದಲ್ಲಿರುವ ದೇವೆಗೌಡರ ನಿವಾಸಕ್ಕೆ ತೆರಳಿದ್ದಾರೆ. ಅಲ್ಲಿ ತಂದೆ-ತಾಯಿ ಜೊತೆ ಮಾತನಾಡಿ ಹೊರಡುವ ಸಂದರ್ಭದಲ್ಲಿ ರೇವಣ್ಣ ಅವರು ದೇವೇಗೌಡರ ನಿವಾಸದ ಎದುರು ಕಾರ್ಯಕರ್ತರನ್ನು ಭೇಟಿಯಾದರು.
ನೆರೆದಿದ್ದ ಕಾರ್ಯಕರ್ತರನ್ನು ಕಂಡು ಕಣ್ಣೀರು ಹಾಕಿದ ರೇವಣ್ಣ ಅವರನ್ನು ಸಮಾಧಾನಪಡಿಸಿದರು. ನೀವು ಅಳಬೇಡಿ ಕಣಣ್ಣ ಎಂದು ಡಿಕೆಶಿ ವಿರುದ್ಧ ಕಾರ್ಯಕರ್ತರು ಕಿಡಿಕಾರಿದರು. ಈ ವೇಳೆ ರೇವಣ್ಣ ಅವರು, ಹಂಗೆಲ್ಲ ಮಾತನಾಡಬಾರದು ಅಂದಾಗ ಯಾಕಣ್ಣ ಮಾತಾಡಬಾರದು ಎಂದು ಕಾರ್ಯಕರ್ತರು ರೊಚ್ಚಿಗೆದ್ದರು. ರೇವಣ್ಣ ಜೊತೆ ಕೆಲ ಕಾರ್ಯಕರ್ತರು ಕೂಡ ಕಣ್ಣೀರು ಹಾಕಿದ್ದಾರೆ. ಬಳಿಕ ಅಲ್ಲಿಂದ ತೆರಳಿದರು. ಇದನ್ನೂ ಓದಿ: ಜೈಲುವಾಸದಿಂದ ಮುಕ್ತಿ- ಪರಪ್ಪನ ಅಗ್ರಹಾರದಿಂದ ಹೊರಬಂದ ರೇವಣ್ಣ
ಕೆ.ಆರ್.ನಗರ ಸಂತ್ರಸ್ತೆಯನ್ನು ಅಪಹರಣ ಮಾಡಿಸಿದ ಆರೋಪದ ಮೇಲೆ ಪರಪ್ಪನ ಅಗ್ರಹಾರ ಜೈಲು ಸೇರಿರುವ ಮಾಜಿ ಸಚಿವ ಹೆಚ್‍ಡಿ ರೇವಣ್ಣಗೆ (HD Revanna) ಕಡೆಗೂ ತಾತ್ಕಾಲಿಕ ರಿಲೀಫ್ ಸಿಕ್ಕಿದ್ದು, ಇಂದು ಬಿಡುಗಡೆಯಾದರು. ಸೋಮವಾರ ಬೆಳಗ್ಗೆಯಿಂದ ಸಂಜೆ 4 ಗಂಟೆಯವರೆಗೆ ಜಾಮೀನು ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಸಂಜೆ 6:30ಕ್ಕೆ ರೇವಣ್ಣಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಸಂಜೆಯಾದ ಕಾರಣ ಕೋರ್ಟ್ ಸಮಯ ಮುಗಿದಿದ್ದರಿಂದ ಷರತ್ತು ಪೂರೈಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಇಂದು ಮಧ್ಯಾಹ್ನ ಎಲ್ಲಾ ಪ್ರಕ್ರಿಯೆ ಮುಗಿಸಿ ರೇವಣ್ಣ ಬಿಡುಗಡೆಯಾದರು.