ಬೆಂಗಳೂರು: ತೆನೆಹೊತ್ತ ಮಹಿಳೆಯನ್ನು ಕೊರಳಿಗೆ ಸುತ್ತಿಕೊಂಡಿದ್ದೇನೆ. ಇದು ಇಡೀ ರಾಜ್ಯಾದ್ಯಂತ ಸುತ್ತಿಕೊಳ್ಳುವಂತೆ ಆಗಬೇಕು ಎಂದು ಮಾಜಿ ಸಂಸದ ಎಚ್ ವಿಶ್ವನಾಥ್ ಹೇಳಿದ್ದಾರೆ.
ಜೆಡಿಎಸ್ ಪ್ರಧಾನ ಕಚೇರಿ ಜೆಪಿ ಭವನದಲ್ಲಿ ಜೆಡಿಎಸ್‍ಗೆ ಸೇರ್ಪಡೆಯಾದ ಬಳಿಕ ಮಾತನಾಡಿದ ಅವರು, ಪ್ರಾದೇಶಿಕ ಪಕ್ಷವಾದರೂ ಪ್ರಧಾನ ಮಂತ್ರಿಯನ್ನು ಕೊಟ್ಟ ಪಕ್ಷ ಜೆಡಿಎಸ್. ಮುಖ್ಯಮಂತ್ರಿಗಳನ್ನ ಮಾಡಿದ್ದು ಜೆಡಿಎಸ್. ಇದು ಹುಡುಗಾಟವಲ್ಲ. ಮುಂದೆ ದೇವೇಗೌಡರ ನೆರಳಾಗಿ, ಕುಮಾರಸ್ವಾಮಿ ಸ್ನೇಹಿತರಾಗಿ ನಿಮ್ಮಲ್ಲರ ಜೊತೆ ಹೆಜ್ಜೆ ಹಾಕುತ್ತೇವೆ ಎಂದು ತಿಳಿಸಿದರು.
Advertisement
ಹರಿಯುವ ನೀರು: ನನ್ನ 40 ವರ್ಷದ ರಾಜಕೀಯ ಇತಿಹಾಸದಲ್ಲಿ ಐತಿಹಾಸಿಕ ತಿರುವು ಇದು. ಬೆಳಗ್ಗೆ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಪೂಜೆ ಮಾಡಿ ಬಂದಿದ್ದೇನೆ. ಮುಂದೆ ಜೆಡಿಎಸ್ ಅಧಿಕಾರಕ್ಕೆ ಬರಲಿ ಅಂತ ದೇವರಲ್ಲಿ ಕೇಳಿಕೊಂಡಿದ್ದೇನೆ. ಹಾಗಾಗಿ ರಾಜಕಾರಣ ನಿಂತ ನೀರಲ್ಲ. ರಾಜಕಾರಣ ಹರಿಯುವ ನೀರು ಎಂದರು.
Advertisement
ಝಂಡಾ ಬದಲಾಗಿದೆ: ಸನ್ನಿವೇಶ, ಸಮಯಗಳು ನಡುವೆ ಹೊಸ ಮನೆಗೆ ಪಾದಾರ್ಪಣೆ ಮಾಡಿದ್ದೇನೆ. ರಾಷ್ಟ್ರೀಯ ಪಕ್ಷದಲ್ಲಿ ಕಲಿತ ಕೆಲಸ ಜೆಡಿಎಸ್‍ನಲ್ಲೂ ಮುಂದುವರೆಸುತ್ತೇನೆ. ಕರ್ನಾಟಕದಲ್ಲಿ ಜೆಡಿಎಸ್ ಅಧಿಕಾರಿಕ್ಕೆ ತರಲು ನಾನು ಎಲ್ಲ ಪ್ರಯತ್ನ ಮಾಡುತ್ತೇನೆ. ಇವತ್ತಿನಿಂದ ನನ್ನ ಝಂಡಾ ಬದಲಾಗಿದೆ. ತೆನೆ ಹೊತ್ತ ಮಹಿಳೆ ಝಂಡಾ ಹಿಡಿದುಕೊಂಡಿದ್ದೇನೆ. ಆದರೆ ನನ್ನ ಜಾತ್ಯಾತೀತ ಅಜೆಂಡಾವನ್ನು ಜೆಡಿಎಸ್ ನಲ್ಲೂ ಮುಂದುವರೆಸುತ್ತೇನೆ ಎಂದರು.
Advertisement
ಲಾಭ ಇಲ್ಲ: ಪಕ್ಷ ಪರಿಸ್ಥಿತಿ ಸನ್ನಿವೇಶ ಇದನ್ನೇ ಪ್ರಶ್ನಿಸುತ್ತಿದ್ದರೆ ಯಾವ ಲಾಭವೂ ಇಲ್ಲ. ಇಂದು ಹೊಸ ಮನೆಗೆ ಬಂದಿದ್ದೇನೆ. ಯಾವ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ದುಡಿದ್ದೇನೋ ಅದೇ ಉತ್ಸಾಹದಿಂದ ಜೆಡಿಎಸ್ ನಲ್ಲಿ ದುಡಿಯುವೆ. 2006ರಲ್ಲಿ ಸಿಎಂ ಆಗಿದ್ದಾಗ ಕುಮಾರಸ್ವಾಮಿ ಬಗ್ಗೆ ವಿಧಾನಸೌಧದಲ್ಲಿ ಮೆಚ್ಚುಗೆ ಮಾತನಾಡಿದ್ದೆ. ಈಗ ಅವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ದೇವೇಗೌಡರು ದೇವರಲ್ಲಿ ಅಪಾರ ನಂಬಿಕೆ ಇಟ್ಟವರು. ಅಂತವರ ಜೊತೆ, ನಿಮ್ಮೆಲ್ಲರ ಜೊತೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಯೋಗ. ಮುಖಂಡರ ಜೊತೆ ಕುಳಿತು ಚರ್ಚಿಸಿ, ತಂತ್ರಗಾರಿಕೆ ಮಾಡಿ ಕರ್ನಾಟಕದಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂದು ಎಂದು ವಿಶ್ವನಾಥ್ ಹೇಳಿದರು.
Advertisement
ಪ್ರಾಮಾಣಿಕ ರಾಜಕಾರಣಿ: ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಿ ಎಚ್. ವಿಶ್ವನಾಥ್ ಪ್ರಾಮಾಣಿಕ ರಾಜಕಾರಣಿ. ತಮ್ಮ ಬೆಂಬಲಿಗರ ಜೊತೆ ಪಕ್ಷಕ್ಕೆ ಸೇರಿದ್ದಾರೆ. ಕಳೆದ ಹಲವಾರು ತಿಂಗಳಿನಲ್ಲಿ ಮಾಧ್ಯಮದವರು ವಿಶ್ವನಾಥ್ ಸೇರ್ಪಡೆ ಬಗ್ಗೆ ಕೇಳ್ತಿದ್ರು. ಈಗ ಅದಕ್ಕೆ ಉತ್ತರ ಸಿಕ್ಕಿದೆ. ವಿಶ್ವನಾಥ್ ಪಕ್ಷ ಸೇರಲು ಮೈಸೂರು ಜಿಲ್ಲೆಯ ನಮ್ಮ ಶಾಸಕರೇ ಕಾರಣ ಎಂದು ಹೇಳಿದರು.
10ರಲ್ಲಿ ಜಯ: ವಿಶ್ವನಾಥ್ ಅವರು ಮನಸ್ಸಿನಲ್ಲಿ ಎಷ್ಟು ನೊಂದಿದ್ದಾರೆ ಅನ್ನೊದು ನನಗೆ ಗೊತ್ತಿದೆ. 40 ವರ್ಷದ ದುಡಿಮೆ ಮಾಡಿಕೊಂಡ ಪಕ್ಷ ಬಿಟ್ಟು ಬೇರೆ ಪಕ್ಷಕ್ಕೆ ಬರೋದು ಎಷ್ಟು ಕಷ್ಟ ಗೊತ್ತು. ವಿಶ್ವನಾಥ್ ಸೇರ್ಪಡೆಯಿಂದ ಮೈಸೂರು ಭಾಗದ 11 ಕ್ಷೇತ್ರಗಳ ಪೈಕಿ 10 ಕ್ಷೇತ್ರದಲ್ಲಿ ಜಯಗಳಿಸುವ ವಿಶ್ವಾಸ ಇದೆ. ದೇವೇಗೌಡರಿಂದ ಅನೇಕ ಜನ ಬೆಳೆದಿದ್ದಾರೆ. ಪಕ್ಷದಲ್ಲಿ ಬೆಳೆದವರೇ ಪಕ್ಷ ನಾಶ ಮಾಡಬೇಕು ಅಂತ ಓಡಾಡುತ್ತಿದ್ದಾರೆ. ಇಂತಹವರಿಗೇ ನೀವೇ ಪಾಠ ಕಲಿಸಬೇಕು ಎಂದು ಹೇಳುವ ಮೂಲಕ ಜೆಡಿಎಸ್ ಬಂಡಾಯ ನಾಯಕರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ಜೆಡಿಎಸ್ ಪಕ್ಷದಲ್ಲಿ ಬೆಳೆದ ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಆದರು. ಅವರು ಕಾಂಗ್ರೆಸ್ ಸೇರಲು ಪ್ರೇರೇಪಿಸಿದ್ದು ವಿಶ್ವನಾಥ್. 130 ವರ್ಷಗಳ ಇತಿಹಾಸದ ಬಗ್ಗೆ ಇವತ್ತು ಮಾತನಾಡುತ್ತಿದ್ದಾರೆ. ಕುಮಾರಸ್ವಾಮಿ ಸಿಎಂ ಕನಸು ಕಾಣುತ್ತಿದ್ದಾರೆ ಎಂದು ವ್ಯಂಗ್ಯ ಮಾಡುತ್ತಾರೆ. ನಾನೇನು ಸಿಎಂ ಆಗುವ ಕನಸು ಕಾಣ್ತಿಲ್ಲ. ಅಧಿಕಾರದ ಆಸೆ ನಮಗೆ ಇಲ್ಲ. ರಾಜ್ಯದ ಜನರ ಹಿತ ಕಾಯಲು ಜೆಡಿಎಸ್ ಗೆ ಅಧಿಕಾರ ಬೇಕು ಅಷ್ಟೇ. ಇದು ಅಪ್ಪಮಕ್ಕಳ ಪಕ್ಷ ಅಲ್ಲ. ಎಲ್ಲ ಸಮುದಾಯದವರು ಇಲ್ಲಿ ನಾಯಕರಾಗಿದ್ದಾರೆ ಎಂದರು.
ಯಾರು ಏನೇ ಸಮೀಕ್ಷೆ ಮಾಡಲಿ. ಜೆಡಿಎಸ್ ಕೂಡಾ ಸಮೀಕ್ಷೆ ಮಾಡಿದೆ. ಜೆಡಿಎಸ್ ಪಕ್ಷದ ಶಕ್ತಿ ಏನು ಎಂಬುದು ಗೊತ್ತಿದೆ. ಈ ಬಾರಿ ಅಷ್ಟು ಸುಲಭವಲ್ಲ. ಜೆಡಿಎಸ್ ಬಗ್ಗೆ ಮುಂದಿನ ಚುನಾವಣೆಯಲ್ಲಿ ಗೊತ್ತಾಗುತ್ತದೆ ಎಂದು ಎಚ್‍ಡಿಕೆ ತಿಳಿಸಿದರು.
ಎಚ್.ವಿಶ್ವನಾಥ್ ಜೊತೆ ಅವರ ಹಲವು ಬೆಂಬಲಿಗರು, ಕಾಂಗ್ರೆಸ್ ಮುಖಂಡರು ಜೆಡಿಎಸ್‍ಗೆ ಸೇರ್ಪಡೆಯಾದರು. ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರು ಪಕ್ಷದ ಬಾವುಟ, ಪಕ್ಷದ ಶಾಲು ಹೊದಿಸಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು. ವಿಶ್ವನಾಥ್ ಅವರ ಮಗ ಅಮಿತ್ ವಿಶ್ವನಾಥ್ ಕೂಡಾ ಜೆಡಿಎಸ್ ಸೇರ್ಪಡೆಯಾಗಿದ್ದಾರೆ.
ಕಾರ್ಯಕ್ರಮದಲ್ಲಿ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಶ್ರೀಕಂಠೇಗೌಡ, ಶಾಸಕ ಜಿ.ಟಿ.ದೇವೆಗೌಡ, ಮಧು ಬಂಗಾರಪ್ಪ, ಮಾಜಿ ಶಾಸಕ ಬಂಡೇಪ್ಪ ಕಾಶಂಪುರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.