-ಸಿದ್ದರಾಮಯ್ಯಗೆ ಕುಂದಾನಗರಿಯ ಸಾರಥ್ಯ
ಬೆಂಗಳೂರು: ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅನರ್ಹಗೊಂಡಿರುವ ಎಲ್ಲ ಶಾಸಕರನ್ನು ಚುನಾವಣೆಯ ರಣರಂಗದಲ್ಲಿ ಎದುರಾಗುತ್ತೇನೆ. ಅಲ್ಲಿಯೇ ನಮ್ಮ-ನಿಮ್ಮ ಮುಖಾಮುಖಿ ಎಂದು ಸವಾಲು ಹಾಕಿದ್ದರು. ಆದರೆ ಇದೀಗ ತಿಹಾರ್ ಜೈಲು ಸೇರಿರುವ ಡಿಕೆ ಶಿವಕುಮಾರ್ ಉಪ ಚುನಾವಣೆಯಿಂದ ದೂರ ಉಳಿಯುವಂತಾಗಿದೆ. ಡಿ.ಕೆ.ಶಿವಕುಮಾರ್ ಗೆ ಸವಾಲು ಹಾಕಿದ್ದ ಬೆಳಗಾವಿ ಸಾಹುಕಾರ ರಮೇಶ್ ಜಾರಕಿಹೊಳಿಯನ್ನು ಸೋಲಿಸಲು ಮಾಜಿ ಸಿಎಂ ಸಿದ್ದರಾಮಯ್ಯ ಪಣ ತೊಟ್ಟಿದ್ದಾರೆ. ಹೀಗಾಗಿ ಸಿದ್ದರಾಮಯ್ಯರಿಗೆ ಸತೀಶ್ ಜಾರಕಿಹೊಳಿ ಸಾಥ್ ನೀಡಿದ್ದಾರೆ.
Advertisement
ಸರ್ಕಾರ ಪತನಕ್ಕೆ ರಮೇಶ್ ಜಾರಕಿಹೊಳಿ ಕಾರಣ ಎಂದು ಡಿಕೆಶಿ ಬಹಿರಂಗವಾಗಿಯೇ ಸವಾಲು ಹಾಕಿದ್ದರು. ಡಿಕೆಶಿ ಅನುಪಸ್ಥಿತಿಯಲ್ಲಿ ಸಿದ್ದರಾಮಯ್ಯ ಗೋಕಾಕ್ ಅಖಾಡದ ಸಾರಥ್ಯವನ್ನು ವಹಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಈಗಾಗಲೇ ಚುನಾವಣೆ ಪ್ರಕ್ರಿಯೆ ಆರಂಭಗೊಂಡಿದ್ದು, ಗೋಕಾಕ್ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ಸಿನಿಂದ ಲಖನ್ ಜಾರಕಿಹೊಳಿ ಅಖಾಡಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಈ ನಿಟ್ಟಿನಲ್ಲಿ ಲಖನ್ ಜಾರಕಿಹೊಳಿ ಪರ ಕೈ ಕಾರ್ಯಕರ್ತರು ಪ್ರಚಾರ ನಡೆಸುತ್ತಿದ್ದಾರೆ.
Advertisement
Advertisement
ಪಕ್ಷ ತೊರೆದು ಸರ್ಕಾರ ಬೀಳಿಸಿದ್ದರಿಂದ ಸಹಜವಾಗಿ ರಮೇಶ್ ಜಾರಕಿಹೊಳಿ ಮೇಲೆ ಮುನಿಸಿಕೊಂಡಿರುವ ಸತೀಶ್ ಜಾರಕಿಹೊಳಿ ಸೋದರನ ವಿರುದ್ಧ ಬಿರುಸಿನ ಪ್ರಚಾರದ ಪ್ಲಾನ್ ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಬಹಿರಂಗ ಸಮಾವೇಶಗಳನ್ನು ಆಯೋಜಿಸುವ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರೆ. ಈ ಬಾರಿಯ ಉಪ ಚುನಾವಣೆಯಲ್ಲಿ ರಮೇಶ್ ಜಾರಕಿಹೊಳಿಯನ್ನ ಸೋಲಿಸುವ ಜವಾಬ್ದಾರಿ ಸಿದ್ದರಾಮಯ್ಯ ಹಾಗೂ ಸತೀಶ್ ಜಾರಕಿ ಹೊಳಿಯವರಿಗೆ ಹೈಕಮಾಂಡ್ ನೀಡಿದೆ ಎಂದು ತಿಳಿದು ಬಂದಿದೆ.
Advertisement
ಬಂಡೆಗೆ ಸವಾಲ್ ಹಾಕಿದ ಸಾಹುಕಾರನಿಗೆ ಈಗ ಹೊಸ ಸವಾಲು ಎದುರಾಗಿದೆ. ಒಂದು ಕಡೆ ರಾಜಕೀಯ ಗುರು ಮತ್ತೊಂದು ಕಡೆ ಸಹೋದರ ಇಬ್ಬರ ಸವಾಲನ್ನ ಒಟ್ಟೊಟ್ಟಿಗೆ ರಮೇಶ್ ಜಾರಕಿಹೊಳಿ ಎದುರಿಸಬೇಕಾಗಿದೆ. ಎರಡೂ ಸವಾಲನ್ನ ಒಟ್ಟಿಗೆ ಎದುರಿಸಿ ಸಾಹುಕಾರ ಸೈ ಅನ್ನಿಸಿಕೊಳ್ಳುತ್ತಾರಾ ಅಥವಾ ಸೋತು ಕೈ ಚೆಲ್ತಾರಾ ಅನ್ನೋದೇ ಸದ್ಯದ ಕುತೂಹಲವಾಗಿದೆ.