ಬೆಂಗಳೂರು: ನಾನು ರಾಜಕೀಯ ಕ್ಷೇತ್ರದಲ್ಲಿ ಹತ್ತಾರು ವರ್ಷಗಳ ಕಾಲ ಇದ್ದಿದ್ದರಿಂದ ಹಲವರು ಪರಿಚಯ ಇದ್ದಾರೆ. ಆದರೆ ಪರಿಚಯಸ್ಥರೆಲ್ಲಾ ನನ್ನ ಬೆಂಬಲಿಗರು ಆಗಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಸ್‍ಎಂ ಕೃಷ್ಣ ಹೇಳಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿಎಎಸ್ ಯಡಿಯೂರಪ್ಪರನ್ನು ತಮ್ಮ ಮನೆಯಲ್ಲಿ ಭೇಟಿ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಎಸ್.ಎಂ.ಕೃಷ್ಣ ಮಾತನಾಡಿದರು. ಕಾಂಗ್ರೆಸ್ ಪಕ್ಷದಲ್ಲಿ ನನ್ನ ಬೆಂಬಲಿಗರು ಎಂದು ಯಾರು ಇಲ್ಲ. ಎಲ್ಲಾ ಕಡೆ ನನಗೆ ಬಹಳ ಜನ ಪರಿಚಯಿಸ್ಥರು ಇದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಪರಿಚಯಸ್ಥರು ಕೇವಲ ವಿಶ್ವಾಸಕ್ಕೆ ಮಾತ್ರ ಸಿಮೀತರಾಗಿದ್ದು, ಪರಿಚಯಸ್ಥರೆಲ್ಲರೂ ಬೆಂಬಲಿಗರಾಗಲೂ ಸಾಧ್ಯವಿಲ್ಲ. ಡಿಕೆ ಶಿವಕುಮಾರ್ ಅವರು ಕೂಡ ಹೊಸ ವರ್ಷದ ಶುಭಾಶಯ ತಿಳಿಸಲು ಆಗಮಿಸಿದ್ದರು ಅಷ್ಟೇ ಎಂದು ತಿಳಿಸಿದರು.
Advertisement
Advertisement
ಹೊಸ ವರ್ಷ ಎಲ್ಲರಿಗೂ ಒಳ್ಳೆಯದು ಮಾಡಲಿ. ಹೊಸ ವರ್ಷದ ಶುಭಾಶಯ ತಿಳಿಸಲು ಬಿಎಸ್‍ವೈ ಅವರಿಗೆ ಫೋನ್ ಮಾಡಿದ್ದೆ. ಆದರೆ ಅವರು ನಾನೇ ನಿಮ್ಮ ಮನೆಗೆ ಬರುತ್ತೇನೆ ಎಂದು ಹೇಳಿ ಬಂದರು. ಮುಂದಿನ ಲೋಕಸಭಾ ಚುನಾವಣೆ, ಪಕ್ಷದ ಕಾರ್ಯದ ಬಗ್ಗೆ ಇಂದು ಚರ್ಚೆ ನಡೆಸಲಾಯಿತು. ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ಆದರೆ ಚುನಾವಣೆಯ ಪ್ರಚಾರ ಕಾರ್ಯದಲ್ಲಿ ಮಾತ್ರ ಭಾಗವಹಿಸುತ್ತೇನೆ. ದೆಹಲಿ ಸೇರಿದಂತೆ ಹಲವು ಕಡೆ ಭಾಗವಹಿಸುವ ಚಿಂತನೆ ಮಾಡಿದ್ದೇನೆ ಎಂದು ತಿಳಿಸಿದರು. ಇದೇ ವೇಳೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಪುತ್ರಿ ಶಾಂಭವಿ ಹೆಸರು ಮುನ್ನೆಲೆ ಬಂದ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಶಾಂಭವಿ ಹೆಸರನ್ನ ನಿಮ್ಮ ಬಾಯಿಂದಲೇ ಕೇಳುತ್ತಿರುವುದು, ಆ ರೀತಿ ಇಲ್ಲ ಎಂದು ನಗೆ ಬೀರಿದರು.
Advertisement
ಇದೇ ವೇಳೆ ಸಾಲಮನ್ನಾ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಾಲಮನ್ನಾ ಮಾಡುವ ಪ್ರಕ್ರಿಯೆ ವೈಜ್ಞಾನಿಕವಾಗಿರಬೇಕು. ಸಹಕಾರಿ ಕ್ಷೇತ್ರದ ಲೋನ್ ರಿನಿವೇಬಲ್ ಲೋನ್ಸ್, ಬುಕ್ ಆಡ್ಜಸ್ಟ್ ಮೆಂಟ್ ರೀತಿಯ ಸಾಲಮನ್ನಾ ಆದರೆ ರೈತರಿಗೆ ಅನುಕೂಲ ಆಗಲ್ಲ. ಆದ್ದರಿಂದ ರೈತರ ಸಾಲಮನ್ನಾ ವೈಜ್ಞಾನಿಕ ಚೌಕಟ್ಟಿನಲ್ಲಿ ಮಾತ್ರ ಮಾಡಬೇಕು. ಸಾಲಮನ್ನಾ ಮಾಡುವ ಮುನ್ನ ಬ್ಯಾಂಕುಗಳ ಜೊತೆ ಒಪ್ಪಂದ ಮಾಡಿಕೊಂಡು ಮುಂದುವರಿದರೆ ಮಾತ್ರ ರೈತರಿಗೆ ಅನುಕೂಲ ಆಗುತ್ತೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
Advertisement
ಎಸ್‍ಎಂ ಕೃಷ್ಣ ಅವರ ಭೇಟಿ ಬಳಿಕ ಮಾತನಾಡಿದ ಬಿಎಸ್ ಯಡಿಯೂರಪ್ಪ ಅವರು, ಕೃಷ್ಣ ಅವರನ್ನು ಭೇಟಿ ಮಾಡಿ ಬಹಳ ಸಮಯವಾಗಿತ್ತು. ಸದ್ಯ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗಳಸುವ ಯೋಜನೆ ಇದ್ದು, ಅವರ ಸಹಕಾರ ಪಡೆಯುವ ಬಗ್ಗೆ ಭೇಟಿ ನೀಡಿದ್ದೆ. ಚುನಾವಣೆಯ ಹಿನ್ನೆಲೆಯಲ್ಲಿ ಕೃಷ್ಣ ಅವರ ಬೆಂಬಲ ನಮಗೆ ಪ್ರಮುಖವಾಗಿದ್ದು, ಹಲವು ಕ್ಷೇತ್ರಗಳಲ್ಲಿ ಪ್ರಚಾರ ಸೇರಿದಂತೆ ಪಕ್ಷ ಸಂಘಟನೆ ಬಗ್ಗೆ ಚರ್ಚೆ ನಡೆಸಲಾಯಿತು ಎಂದರು.
ಇತ್ತ ಬಿಎಸ್ ಯಡಿಯೂರಪ್ಪ ಅವರ ಭೇಟಿಗೂ ಮುನ್ನ ಜೆಡಿಎಸ್ ಶಾಸಕ ಮಂಜುನಾಥ್ ಅವರು ಭೇಟಿ ಮಾಡಿ ಚರ್ಚೆ ನಡೆಸಿದರು. ಈ ವೇಳೆ ಮಾತನಾಡಿದ ಮಂಜುನಾಥ್ ಅವರು ಸಾಹೇಬ್ರಿಗೆ ಶುಭಾಶಯ ತಿಳಿಸಲು ಬಂದಿದ್ದೆ. ಅಷ್ಟೇ ಎಂದು ತಿಳಿಸಿದರು. ಬಿಎಸ್‍ವೈ ಭೇಟಿಗೂ ಮುನ್ನವೇ ಜೆಡಿಎಸ್ ಶಾಸಕರು ಭೇಟಿ ನೀಡಿದ್ದು ಕುತೂಹಲ ಮೂಡಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv