ರಾಮನಗರ: ಮುರುಘಾ ಮಠದ ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ಚನ್ನಪಟ್ಟಣದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ಐದಾರು ತಿಂಗಳಿಂದ ಇಂತಹ ಆರೋಪಗಳ ಬಗ್ಗೆ ಚರ್ಚೆಯಾಗುತ್ತಿದೆ. ಈ ವಿಚಾರದ ಬಗ್ಗೆ ಆರಂಭಿಕ ಹಂತದಲ್ಲೇ ಮುಂಜಾಗ್ರತೆ ವಹಿಸಬೇಕು. ಇದರಿಂದ ಧಾರ್ಮಿಕ ಕ್ಷೇತ್ರಗಳ ಮೇಲೆ ಬೇರೆ ರೀತಿಯ ಪರಿಣಾಮ ಬೀರಬಾರದು ಎಂದು ಹೇಳಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿಸಂಘದ ಚುನಾವಣೆ – ಯುವತಿಯರ ಕಾಲಿಗೆ ಬಿದ್ದು ವೋಟು ಕೇಳಿದ ಯುವಕ
ಹಿಂದೆ ಹೊಸನಗರದ ಸ್ವಾಮೀಜಿಗಳ ವಿಷಯದಲ್ಲೂ ಇಂತಹದ್ದೇ ಆರೋಪ ಕೇಳಿಬಂದಿತ್ತು. ಈ ವಿಷಯಗಳಿಂದ ನಮ್ಮ ಭಾವನೆ, ಸಂಸ್ಕೃತಿಗೆ ಧಕ್ಕೆ ಆಗಬಾರದು. ಬಲವಂತವಾಗಿ ಇಂತಹ ಘಟನೆಗಳು ಜರುಗಿದ್ರೆ ಸರ್ಕಾರ ಕಾನೂನು ಕ್ರಮ ಜರುಗಿಸಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸೂರ್ಯ ಚಂದ್ರರಿರುವ ತನಕ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಆಗಲಿದೆ: ಲಹರಿ ವೇಲು
ಮೋದಿಗಿಂತ ಕಡಿಮೆಯಿಲ್ಲ ಅಂತ ತೋರಿಸೋಕೆ ಹೊರಟಿದ್ದಾರೆ:
ಇದೇ ವೇಳೆ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ವಿಚಾರದಲ್ಲಿ ಪ್ರತಾಪ್‌ಸಿಂಹ ಫೇಸ್ಬುಕ್ ಲೈವ್ ಕುರಿತು ಮಾತನಾಡಿದ ಅವರು, ಪ್ರತಾಪ್ ಸಿಂಹ ಪ್ರಧಾನಿ ಮೋದಿಗಿಂತ ಕಡಿಮೆ ಇಲ್ಲ ಎಂದು ತೋರಿಸೋಕೆ ಹೊರಟಿದ್ದಾರೆ ಎಂದು ಟೀಕಿಸಿದ್ದಾರೆ.
ಕಾಮಗಾರಿ ಬಗ್ಗೆ ಸರ್ಟಿಫಿಕೇಟ್ ಕೊಡುವ ಕೆಲಸ ಅವರದ್ದಲ್ಲ. ದೇವೇಗೌಡರು ಪ್ರಧಾನಿಯಾದ ಕಾಲದಲ್ಲಿ ಅಸ್ಸಾಂನಲ್ಲಿ ಒಂದು ಬ್ರಿಡ್ಜ್ ಕಟ್ಟಿಸಿದ್ರು. 1997ರಲ್ಲಿ ಬ್ರಿಡ್ಜ್ ಶಂಕುಸ್ಥಾಪನೆ ನೆರವೇರಿಸಿದ್ದರು. ಅದಾದ ಬಳಿಕ ಮೋದಿ ಅವರು ಇತ್ತೀಚೆಗೆ ಒಬ್ಬರೇ ನಡೆದುಕೊಂಡು ಹೋಗಿ ಉದ್ಘಾಟನೆ ಮಾಡಿದ್ರು. ಪ್ರತಾಪ್‌ಸಿಂಹ ಅವರೂ ಹಾಗೆಯೇ ಈ ರಸ್ತೆ ವಿಚಾರವಾಗಿ ಏಕಾಂಗಿಯಾಗಿ ಫೋಟೋ ತೆಗಿಸಿಕೊಳ್ಳುತ್ತಿದ್ದಾರೆ. ನಾನು ನಮ್ಮ ಪ್ರಧಾನ ಮಂತ್ರಿಗಳಿಗಿಂತ ಕಡಿಮೆ ಇಲ್ಲ, ಅವರಿಗಿಂತಲೂ ಕೆಲಸ ಮಾಡ್ತಿದ್ದೀನಿ ಅಂತಾ ತೋರಿಸಲು ಹೊರಟಿರಬಹುದು ಎಂದು ಕುಟುಕಿದ್ದಾರೆ.
ಚನ್ನಪಟ್ಟಣ ತಾಲ್ಲೂಕಿನಲ್ಲಿ ಮಳೆಹಾನಿ ಪ್ರದೇಶಕ್ಕೆ ಭೇಟಿ ಪರಿಶೀಲಿಸಿದ ಮಾಜಿ ಸಿಎಂ ಹೆಚ್‌ಡಿಕೆ, ತಡರಾತ್ರಿ ಸುರಿದ ಭಾರಿ ಮಳೆಗೆ ಮನೆಗಳು ಜಲಾವೃತವಾಗಿದ್ದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಬಳಿಕ ಸಂತ್ರಸ್ತರ ಅಹವಾಲು ಸ್ವೀಕರಿಸಿ ಕೂಡಲೇ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಕುರಿತು ಮಾತನಾಡಿ, ನಿನ್ನೆ ಭಾರೀ ಮಳೆ ಬಂದಿದೆ. ಹಲವಾರು ಕೆರೆ, ಕಟ್ಟೆಗಳು ಒಡೆದು ಕೋಡಿಹರಿದಿವೆ. ನಗರ ಪ್ರದೇಶದಲ್ಲಿಯೂ ದೊಡ್ಡ ಮಟ್ಟದಲ್ಲಿ ಹಾನಿಯಾಗಿದೆ. ಕಳೆದ ಬಾರಿ ಎಪಿಎಂಸಿಗಳಲ್ಲಿ ಮಳೆಯಿಂದಾಗಿ ಅನಾಹುತವಾಗಿತ್ತು. ಅಲ್ಲಿ ಅಗತ್ಯ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೆ. ಹಾಗಾಗಿ ಈ ಬಾರಿ ಎಪಿಎಂಸಿಗಳಲ್ಲಿ ಅಂತಹದ್ದೇನೂ ಡ್ಯಾಮೇಜ್ ಆಗಿಲ್ಲ. ಆದರೆ ಕೋಡಿ ಹರಿದು ರಸ್ತೆ ಬಿರುಕು ಬಿಟ್ಟಿದೆ. ಲೋಕೋಪಯೋಗಿ ಇಲಾಖೆ ಹಾಗೂ ನಗರ ಸಭೆ ಅಧಿಕಾರಿಗಳಿಗೆ ಶಾಶ್ವತ ಪರಿಹಾರ ಒದಗಿಸಲು ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.