ಮಡಿಕೇರಿ: ಹುಲ್ಲು ಮೇಯುತ್ತಾ ತನ್ನ ಭೂಮಿಯೊಳಗೆ ನುಗ್ಗಿದ ಕಾರಣಕ್ಕೇ ಎಸ್ಟೇಟ್ ಮಾಲೀಕ 2 ಹಸುಗಳನ್ನು (Cow) ಗುಂಡಿಟ್ಟು (Gunshot) ಕೊಂದಿರುವ ಘಟನೆ ಕೊಡಗು (Kodagu) ಜಿಲ್ಲೆಯ ವಿರಾಜಪೇಟೆ ತಾಲೂಕಿನ ಗುಹ್ಯ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಎಸ್ಟೇಟ್ ಮಾಲೀಕ ನರೇಂದ್ರ ನಾಯ್ಡು 2 ಹಸುಗಳನ್ನು ಗುಂಡಿಕ್ಕಿ ಕೊಂದಿರುವ ಆರೋಪಿ. ಹಸುಗಳ ಮಾಲೀಕ ಮಣಿ ಹಲವು ಹಸುಗಳನ್ನು ಸಾಕಿದ್ದು, ಹಾಲು ಮಾರಾಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಕಳೆದ ರಾತ್ರಿ ಮಣಿಯವರ 3 ಹಸುಗಳು ಮೇಯ್ದು ಮನೆಗೆ ಹಿಂತಿರುಗಿರಲಿಲ್ಲ. ಆದರೆ ಒಂದು ಹಸು ತಡರಾತ್ರಿ ಮನೆಗೆ ಮರಳಿದ್ದು, ಅದು ಗಂಭೀರವಾಗಿ ಗಾಯಗೊಂಡಿರುವುದನ್ನು ಮಣಿ ಗಮನಿಸಿದ್ದಾರೆ. ಹಸುವಿಗೆ ಸೂಕ್ತ ಚಿಕಿತ್ಸೆ ನೀಡಿ, ಮರುದಿನ ಇತರ 2 ಹಸುಗಳ ಹುಡುಕಾಟಕ್ಕೆ ಮಣಿ ತೆರಳಿದ್ದಾರೆ. ಇದನ್ನೂ ಓದಿ: ಕೊತ್ತಂಬರಿ ಸೊಪ್ಪಿನ ಹಾರ ಹಾಕಿ ಹೆಚ್‍ಡಿಕೆಯನ್ನು ಬರಮಾಡಿಕೊಂಡ ಗ್ರಾಮಸ್ಥರು
ಮಣಿ ತನ್ನ ಇತರ 2 ಹಸುಗಳು ಪಕ್ಕದ ಎಸ್ಟೇಟ್‌ನಲ್ಲಿ ಸತ್ತು ಬಿದ್ದಿರುವ ಬಗ್ಗೆ ಮಾಹಿತಿ ಪಡೆದಿದ್ದಾರೆ. ಮಣಿ ಹುಡುಕಾಟಕ್ಕೆ ಹೋದಾಗ ನರೇಂದ್ರ ನಾಯ್ಡು ಒಡೆತನದ ಎಸ್ಟೇಟ್‌ನಲ್ಲಿ ಹಸುಗಳ ಮೃತದೇಹ ಪತ್ತೆಯಾಗಿದೆ. ಹಸುಗಳ ದೇಹದ ಮೇಲೆ ಗುಂಡೇಟಿನ ಗುರುತುಗಳು ಕಂಡುಬಂದಿದ್ದು, ನರೇಂದ್ರ ನಾಯ್ಡು ತನ್ನ ಹಸುಗಳನ್ನು ಗುಂಡಿಟ್ಟು ಕೊಂದಿದ್ದಾನೆ ಎಂದು ಮಣಿ ಆರೋಪಿಸಿದ್ದಾರೆ. ಇದನ್ನೂ ಓದಿ: ಕಲಾಪದ ವೇಳೆ ಫೇಸ್‌ಬುಕ್ ಲೈವ್ ಮಾಡಿದ ಶಾಸಕ ವಿಧಾನ ಸಭೆಯಿಂದ ಅಮಾನತು
ಘಟನೆಗೆ ಸಂಬಂಧಿಸಿದಂತೆ ಮಣಿ ಅವರು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಎಸ್ಟೇಟ್ ಮಾಲೀಕ ಆರೋಪಿ ನರೇಂದ್ರ ತಲೆಮರೆಸಿಕೊಂಡಿದ್ದು, ಪೊಲೀಸರು ಆರೋಪಿಯ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.