ಟೆಹ್ರಾನ್: ಇರಾನ್ – ಅಮೆರಿಕ ನಡುವಿನ ಯುದ್ಧ (Iran, America War) ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಇದೇ ಹೊತ್ತಲ್ಲಿ 9/11 ಮಾದರಿ ದಾಳಿ (9/11 Attack) ನಡೆಸಲು ಎಪ್ಸ್ಟೀನ್ ಜಾಲ (Epstein Network) ಪ್ಲ್ಯಾನ್ ಮಾಡುತ್ತಿದೆ. ಈ ದಾಳಿಗೆ ನಮ್ಮನ್ನು ಹೊಣೆ ಮಾಡಲು ಜಾಲ ಮುಂದಾಗಿದೆ ಎಂದು ಇರಾನ್‌ನ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿ ಅಲಿ ಲಾರಿಜಾನಿ ಆರೋಪಿಸಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಅವರು ಪೋಸ್ಟ್ ಮಾಡಿದ್ದಾರೆ. ಪೋಸ್ಟ್‌ನಲ್ಲಿ 9/11 ರಂತೆಯೇ ದಾಳಿ ಮಾಡಲು ಸಂಚು ರೂಪಿಸಲಾಗಿದೆ. ಅದಕ್ಕೆ ಇರಾನ್ ದೂಷಿಸಲು ಪಿತೂರಿ ರೂಪಿಸಿದ್ದಾರೆ ಎಂಬುದು ನಮ್ಮ ಗಮನಕ್ಕೆ ಬಂದಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಅಣ್ವಸ್ತ್ರ ಸಾಮರ್ಥ್ಯದ ರಾಕೆಟ್ ಲಾಂಚರ್ ಪರೀಕ್ಷಿಸಿದ ಉತ್ತರ ಕೊರಿಯಾ
ಟೆಹ್ರಾನ್ ಭಯೋತ್ಪಾದನೆಯನ್ನು ಬಲವಾಗಿ ವಿರೋಧಿಸುತ್ತದೆ. ಅಮೇರಿಕದ ಸಾರ್ವಜನಿಕರನ್ನು ತನ್ನ ಶತ್ರುವೆಂದು ನಾವು ಪರಿಗಣಿಸುವುದಿಲ್ಲ. ಅಮೇರಿಕನ್ ಜನರೊಂದಿಗೆ ಯಾವುದೇ ಯುದ್ಧವನ್ನು ಮಾಡಲು ಬಯಸುವುದಿಲ್ಲ ಎಂದು ಅವರು ಹೇಳಿದ್ದಾರೆ.
ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಸಮಯದಲ್ಲಿ ಅವರು ಈ ಹೇಳಿಕೆ ನೀಡಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ. ಅಮೆರಿಕ ಮತ್ತು ಇಸ್ರೇಲ್, ಇರಾನಿನ ಮೇಲೆ ದಾಳಿಗಳನ್ನು ಮುಂದುವರಿಸಿವೆ. ಇಸ್ರೇಲ್ ಲೆಬನಾನ್‌ನಲ್ಲಿರುವ ಹೆಜ್ಬೊಲ್ಲಾ ವಿರುದ್ಧವೂ ದಾಳಿಗಳನ್ನು ಪ್ರಾರಂಭಿಸಿದೆ. ಪ್ರತಿಯಾಗಿ, ಇರಾನ್, ಇಸ್ರೇಲ್ ಕಡೆಗೆ ಹಲವಾರು ಕ್ಷಿಪಣಿಗಳ ದಾಳಿ ನಡೆಸಿದೆ. ಇರಾಕ್ ಮತ್ತು ಕುವೈತ್‌ನಲ್ಲಿರುವ ಅಮೆರಿಕದ ನೆಲೆಗಳ ಮೇಲೆ ದಾಳಿಗಳನ್ನು ನಡೆಸಿದ್ದಾಗಿ ಹೇಳಿಕೊಂಡಿದೆ.
3,000 ಜನರನ್ನು ಬಲಿಪಡೆದಿದ್ದ 9/11 ದಾಳಿ
2001ರ ಸೆಪ್ಟೆಂಬರ್ 11 ರ ದಾಳಿ ಆಧುನಿಕ ಇತಿಹಾಸದಲ್ಲಿ ಅತ್ಯಂತ ಮಾರಕ ಭಯೋತ್ಪಾದಕ ದಾಳಿಗಳಲ್ಲಿ ಒಂದಾಗಿದೆ. ಅಲ್-ಖೈದಾಗೆ ಸಂಬಂಧಿಸಿದ 19 ಅಪಹರಣಕಾರರು ಅಮೆರಿಕದಲ್ಲಿ ನಾಲ್ಕು ಪ್ರಯಾಣಿಕ ವಿಮಾನಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡು, ಆ ವಿಮಾನಗಳಲ್ಲಿ ಎರಡು ವಿಮಾನಗಳನ್ನು ನೇರವಾಗಿ ನ್ಯೂಯಾರ್ಕ್ ನಗರದ ವಿಶ್ವ ವ್ಯಾಪಾರ ಕೇಂದ್ರದ ಅವಳಿ ಗೋಪುರಗಳಿಗೆ ಡಿಕ್ಕಿ ಹೊಡೆಸಿದ್ದರು. ಈ ದಾಳಿಯಲ್ಲಿ ಸುಮಾರು 3,000 ಜನರು ಪ್ರಾಣ ಕಳೆದುಕೊಂಡಿದ್ದರು. ಇದನ್ನೂ ಓದಿ: ಸೌದಿ ಅರೇಬಿಯಾದಲ್ಲಿರುವ ಅಮೆರಿಕದ ವಾಯುನೆಲೆಯ ಮೇಲೆ ಇರಾನ್ ದಾಳಿ

