ನೆಲಮಂಗಲ: ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಅಸಾಧಾರಣ ಪ್ರತಿಭೆಗಳಿದ್ದು, ಉತ್ತಮ ವೇದಿಕೆ ಸಿಕ್ಕರೆ ಸಾಧಕರ ಸಾಲಿನಲ್ಲಿ ನಿಲ್ಲುತ್ತಾರೆ ಎಂದು ನೆಲಮಂಗಲ ಶಾಸಕ ಡಾ.ಕೆ ಶ್ರೀನಿವಾಸಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ತಾಲೂಕಿನ ಸೊಂಡೆಕೊಪ್ಪ ರಸ್ತೆಯ ವೆಂಕಟಪುರದಲ್ಲಿನ ಎಮರಾಲ್ಡ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಆಯೋಜಿಸಲಾಗಿದ್ದ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ್ದಾರೆ. ಸಮಾಜದ ಪ್ರತಿ ಮಗು ಶಿಕ್ಷಣದ ಜೊತೆ ಮಾನವೀಯತೆಯ ಗುಣಗಳನ್ನು ಬೆಳೆಸಿಕೊಳ್ಳಬೇಕು. ಮಕ್ಕಳು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಬಾರದು. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಎಮರಾಲ್ಡ್ ಶಾಲೆಯಂತಹ ಉತ್ತಮ ವಾತಾವರಣದ ಶಾಲೆಗಳು ಅನಿವಾರ್ಯ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಹೈಟೆಕ್ ಸೌಲಭ್ಯವಿರುವ ವೇದಿಕೆ ನಿರ್ಮಾಣ ಮಾಡಿರುವ ಈ ಶಾಲೆಯ ಮಾಲೀಕರಿಗೆ ಶ್ಲಾಘಿಸುತ್ತೇನೆ. ಯಾವ ಶಿಕ್ಷಕರು ಕೆಟ್ಟವರಲ್ಲ, ಮಕ್ಕಳ ಭವಿಷ್ಯದ ಉನ್ನತಿಗೆ ಶ್ರಮಿಸುತ್ತಾರೆ. ಪ್ರತಿಯೊಂದು ನೋವು ಪಾಠವಾಗುತ್ತದೆ, ಮನುಷ್ಯನ ಕೆಟ್ಟವಿಚಾರಗಳನ್ನು ಬದಲಿಸುತ್ತದೆ. ತೃಪ್ತಿ ಸಿಗುವುದು ಕಾಯಕದಲ್ಲಿ, ಆದ್ದರಿಂದ ಮಕ್ಕಳಿಗೆ ತೃಪ್ತಿ ಗಳಿಸುವಂತೆ ಶಿಕ್ಷಣ ಕಲಿಸಿ ಎಂದರು.
ಎಮರಾಲ್ಡ್ ಇಂಟರ್ ನ್ಯಾಷನಲ್ ಶಾಲೆಯ ಅಧ್ಯಕ್ಷ ಎಮ್. ಲೋಕೇಶ್ ರೆಡ್ಡಿ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶಿಕ್ಷಣ ನೀಡುವ ಸುವರ್ಣಾವಕಾಶ ನಮಗೆ ಲಭ್ಯವಾಗಿದೆ. ಮಕ್ಕಳಲ್ಲಿ ಶಿಕ್ಷಣದ ಕಲಿಕೆಯಲ್ಲದೆ ಕ್ರೀಡೆ, ಸಾಂಸ್ಕೃತಿಕವಾಗಿ ಉತ್ತಮ ಪ್ರತಿಭೆಯನ್ನು ಹೊಂದಿರುತ್ತಾರೆ. ಆದ್ದರಿಂದ ಶಿಕ್ಷಣದ ಜೊತೆ ವಿವಿಧ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಮೂಲಕ ತರಬೇತಿಗೆ ವಿಶಾಲ ಮೈದಾನ, ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮ ಶಿಕ್ಷಣ, ತರಬೇತಿ ನೀಡಿದರೆ ಅತ್ಯುತ್ತಮ ಸಾಧನೆ ಮಾಡುತ್ತಾರೆ ಎಂಬುದಕ್ಕೆ ನಮ್ಮ ಶಾಲೆ ಸಾಕ್ಷಿಯಾಗಿದೆ ಎಂದರು.
ಶಾಲೆಯ ಪ್ರಸ್ತುತ ವರ್ಷದಲ್ಲಿ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ, ಸ್ಪರ್ಧೆಯಲ್ಲಿ ವಿಜೇತರಾದವರಿಗೆ, ಹೆಚ್ಚು ಅಂಕಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿರುವ ಪ್ರೀ ನರ್ಸರಿಯಿಂದ ಪ್ರೌಢಶಾಲಾ ಮಕ್ಕಳು ನೃತ್ಯ, ನಾಟಕ, ಸುಗಮಸಂಗೀತ, ಕರಾಟೆ ಸೇರಿದಂತೆ ಅನೇಕ ಪ್ರದರ್ಶನಗಳನ್ನು ನಡೆಸಲಾಯಿತು.