ಮಡಿಕೇರಿ: ಪ್ರವಾಸಿಗರ ಸ್ವರ್ಗ, ಹಚ್ಚ ಹಸಿರ ಬೆಟ್ಟ ಗುಡ್ಡಗಳ ಸುಂದರ ಪ್ರಕೃತಿಯ ತವರು ಕೊಡಗಿನಲ್ಲಿ(Kodagu) ಮೂರನೇ ಸಾಕಾನೆ ಶಿಬಿರ(Elephant Camp)ಲೋಕಾರ್ಪಣೆಗೊಂಡಿದೆ.
ಜಿಲ್ಲೆಯಲ್ಲಿ ಇಲ್ಲಿಯವರೆಗೆ ದುಬಾರೆ ಹಾಗೂ ಮತ್ತಿಗೋಡಿನಲ್ಲಿ ಸಾಕಾನೆ ಶಿಬಿರಗಳಿದ್ದವು. ಈ ಸಾಲಿಗೆ ಈಗ ಹಾರಂಗಿ(Harangi) ಸಾಕಾನೆ ಶಿಬಿರವೂ ಸೇರ್ಪಡೆಗೊಂಡಿದೆ.
Advertisement
Advertisement
ದುಬಾರೆ ಸಾಕಾನೆ ಶಿಬಿರದಲ್ಲಿ(Dubare Elephant Camp) ಬರೋಬ್ಬರಿ 32 ಸಾಕಾನೆಗಳಿತ್ತು. ಆದರೆ ಇಷ್ಟೊಂದು ಆನೆಗಳ ಒತ್ತಡ ತಡೆದುಕೊಳ್ಳಲು ಆ ಶಿಬಿರಕ್ಕೆ ಸಾಧ್ಯವಾಗುತ್ತಿರಲಿಲ್ಲ. ಅಷ್ಟೇ ಅಲ್ಲದೇ ಸಾಕಾನೆ ಶಿಬಿರದಲ್ಲಿ ಇಂತಿಷ್ಟೇ ಆನೆಗಳಿರಬೇಕು ಎಂಬ ಸುಪ್ರಿಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಹೊಸ ಸಾಕಾನೆ ಶಿಬಿರವನ್ನು ತೆರೆಯಲಾಗಿದೆ. ಈಗಾಗಲೇ ದುಬಾರೆಯಿಂದ 7 ಸಾಕಾನೆಗಳನ್ನು ಶಿಫ್ಟ್ ಮಾಡಲಾಗಿದೆ.
Advertisement
Advertisement
ಮತ್ತಿಗೋಡು, ದುಬಾರೆ ಸಾಕಾನೆ ಶಿಬಿರಗಳಿಗಿಂತ ವಿಭಿನ್ನವಾಗಿದೆ ಈ ಹಾರಂಗಿ ಸಾಕಾನೆ ಶಿಬಿರ. ಈ ಸಾಕಾನೆ ಶಿಬಿರ ಹಾರಂಗಿ ಜಲಾಶಯದ ಹಿನ್ನೀರಿನ ಸುಂದರ ಪ್ರಕೃತಿಯ ಮಡಿಲಲ್ಲಿ ಇರುವುದು ವಿಶೇಷ. ಸುಮಾರು 2 ಸಾವಿರ ಎಕ್ರೆ ವಿಶಾಲವಾದ ಅರಣ್ಯ ಪ್ರದೇಶದಲ್ಲಿ ಈ ಶಿಬಿರವನ್ನು ತೆರೆಯಲಾಗಿದೆ. ಇದನ್ನೂ ಓದಿ: ಅಂದು ಬ್ರಿಟಿಷರ ತರಕಾರಿ ತೋಟ, ಇಂದು ವಿಶ್ವ ಪ್ರಸಿದ್ಧ ಪ್ರವಾಸಿ ಗಾರ್ಡನ್
ಹಿನ್ನೀರು ಪ್ರದೇಶದಲ್ಲಿ ಆನೆಗಳ ಮಜ್ಜನ, ಆನೆಗಳ ಆಹಾರ, ಆನೆ ಸವಾರಿ ಮೊದಲಾದ ಚಟುವಟಿಕೆಗಳಿವೆ. ಶಿಬಿರದಲ್ಲಿ ಬಗೆ ಬಗೆಯ ಮರಗಳ ವೃಕ್ಷೋಧ್ಯಾನ ತಲೆ ಎತ್ತುತ್ತಿದೆ. ಜೊತೆಗೆ ಮಕ್ಕಳಿಗೆ ಆಡವಾಡಲು ಪ್ರತ್ಯೇಕ ಆಟದ ಸ್ಥಳಾವಕಾಶವಿದೆ. ಅಷ್ಟೇ ಅಲ್ಲದೇ ಬೋಟಿಂಗ್ ಅನುಭವ ಕೂಡ ಇಲ್ಲಿ ಸಿಗಲಿದೆ.
ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಕುಳಿತು ಸೂರ್ಯಾಸ್ತಮಾನದ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು. ಈ ನೂತನ ಶಿಬಿರದಿಂದ ಸ್ಥಳೀಯ ವ್ಯಾಪಾರ ಉದ್ಯಮಕ್ಕೂ ಪುನಶ್ಚೇತನ ಸಿಗಲಿದೆ. ಕೊಡಗು ಪ್ರವಾಸೋದ್ಯಮಕ್ಕೆ(Kodagu Tourism) ಮತ್ತೊಂದು ಗರಿ ಎಂಬಂತೆ ಸೇರ್ಪಡೆಯಾಗಿರುವ ಹಾರಂಗಿ ಸಾಕಾನೆ ಶಿಬಿರ ಮತ್ತಷ್ಟು ಪ್ರವಾಸಿಗರನ್ನು ಆಕರ್ಷಿಸುವುದರಲ್ಲಿ ಎರಡು ಮಾತಿಲ್ಲ.