ಚಾಮರಾಜನಗರ: ಬಹಿರ್ದೆಸೆಗೆಂದು ತೆರೆಳಿದ್ದ ವೃದ್ಧೆ ಮನೆಗೆ ಮರಳುವಾಗ ದಾರಿ ಮಧ್ಯೆ ಆನೆ ತುಳಿದು ಆಕೆ ಸಾವನ್ನಪ್ಪಿರುವ ದುರ್ಘಟನೆ ಜಿಲ್ಲೆಯ ಮಹಂತಾಳಪುರ ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಮಹಂತಾಳಪುರ ಗ್ರಾಮದ ನಿವಾಸಿ ಶಿವಮ್ಮ(65) ಆನೆ ದಾಳಿಗೆ ಬಲಿಯಾದ ವೃದ್ಧೆ. ಮಹಾಂತಾಳಪುರದ ಸುತ್ತಮುತ್ತ ಕಾಣಿಸಿಕೊಂಡಿದ್ದ ಕಾಡಾನೆಗಳನ್ನು ಓಡಿಸುವ ವೇಳೆ ಬಹಿರ್ದೆಸೆಗೆಂದು ತೆರೆಳಿದ್ದ ಗ್ರಾಮದ ಶಿವಮ್ಮ ಎಂಬ ವೃದ್ಧೆಯನ್ನು ಕಾಡಾನೆಗಳು ತುಳಿದು ಸಾಯಿಸಿವೆ. ಮೂರು ಕಾಡಾನೆಗಳು ಮೂರು ದಿನಗಳಿಂದ ಈ ಭಾಗದಲ್ಲಿ ಬೀಡು ಬಿಟ್ಟಿವೆ. ಆದರೆ ಅವುಗಳನ್ನು ಸಮರ್ಪಕ ರೀತಿಯಲ್ಲಿ ಕಾಡಿಗಟ್ಟುವಲ್ಲಿ ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದ್ದೆ ಈ ಘಟನೆಗೆ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
Advertisement
Advertisement
ಅಷ್ಟೇ ಅಲ್ಲದೆ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ರಸ್ತೆ ತಡೆ ನಡೆಸಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೂರು ದಿನಗಳ ಹಿಂದೆ ಯಳಂದೂರು ಸುತ್ತಮುತ್ತ ಕಾಣಿಸಿಕೊಂಡಿದ್ದ ಈ ಕಾಡಾನೆಗಳು ನಿನ್ನೆ ಮಹಾಂತಾಳಪುರದ ಕಡೆಗೆ ಬಂದು ಇಲ್ಲಿನ ಜಾಲಿಮುಳ್ಳಿನ ಪೊದೆಯಲ್ಲಿ ಬೀಡು ಬಿಟ್ಟಿದ್ದವು. ಗ್ರಾಮಸ್ಥರ ಕೂಗಾಟ ಅರಚಾಟದಿಂದ ಗಾಬರಿಯಾಗಿದ್ದ ಈ ಕಾಡಾನೆಗಳನ್ನು ಅರಣ್ಯ ಸಿಬ್ಬಂದಿ ನಿನ್ನೆ ಸಂಜೆ ಓಡಿಸುವ ಕಾರ್ಯಾಚರಣೆ ನಡೆಸಿದರು. ಆದರೆ ಈ ಸಂದರ್ಭದಲ್ಲಿ ಗ್ರಾಮದ ಕೆರೆಯ ಬಳಿ ವೃದ್ಧೆ ಶಿವಮ್ಮ ಮೇಲೆ ಕಾಡಾನೆಗಳು ದಾಳಿ ನಡೆಸಿ ಹೋಗಿವೆ.
Advertisement
Advertisement
ಇಂದು ಬೆಳಗ್ಗೆ ಈ ಘಟನೆ ಬೆಳಕಿಗೆ ಬಂದಿದ್ದು, ಗ್ರಾಮದ ಕೆರೆಯ ಬಳಿ ಶಿವಮ್ಮ ಅವರ ಶವ ಪತ್ತೆಯಾಗಿದೆ. ಘಟನೆ ನಡೆದು ಸಾಕಷ್ಟು ಸಮಯವಾದರೂ ಅರಣ್ಯಾಧಿಕಾರಿಗಳು ಇತ್ತ ತಲೆ ಹಾಕದ ಕಾರಣ ಆಕ್ರೋಶಗೊಂಡ ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ. ಬಳಿಕ ಎಚ್ಚೆತ್ತ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮೃತ ವೃದ್ಧೆಯ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv