ಬೆಂಗಳೂರು: ಯುಗಾದಿ ಹಬ್ಬದ ಬೆನ್ನಲ್ಲೇ ಸರ್ಕಾರದಿಂದ ಜನರಿಗೆ ಶಾಕ್ ಕಾದಿದೆ. ಏಪ್ರಿಲ್ 1ರಿಂದ ವಿದ್ಯುತ್ ದರ ಹೆಚ್ಚಳ ಮಾಡಲು ಸರ್ಕಾರ ನಿರ್ಧರಿಸಿದೆ. ಮಾರ್ಚ್ 31ಕ್ಕೆ ಕೆಇಆರ್‍ಸಿಯಿಂದ (ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ)ದರ ಪ್ರಕಟವಾಗಲಿದ್ದು, ಈ ಪರಿಷ್ಕೃತ ದರ ಏಪ್ರಿಲ್ 1ರಿಂದಲೇ ಜಾರಿಯಾಗಲಿದೆ.
ಎಸ್ಕಾಂಗಳು ಕಳೆದ ಡಿಸೆಂಬರ್‍ನಲ್ಲಿ ದರ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿದ್ದವು. ಪ್ರಸ್ತಾವನೆಯಲ್ಲಿ ಯೂನಿಟ್ ಗೆ 1.40ಪೈಸೆ ಹೆಚ್ಚಳ ಮಾಡುವಂತೆ ಮನವಿ ಸಲ್ಲಿಸಿತ್ತು.
Advertisement
ದರ ಏರಿಕೆ ಅನಿವಾರ್ಯ: ವಿದ್ಯುತ್ ದರ ಏರಿಕೆ ಅನಿವಾರ್ಯ ಎಂದು ಫೆ. 20ರಂದು ಇಂಧನ ಸಚಿವ ಡಿಕೆ ಶಿವಕುಮಾರ್ ಹೇಳಿದ್ದರು. ಈ ಬಗ್ಗೆ 5 ವಿದ್ಯುತ್ ಸರಬರಾಜು ಕಂಪೆನಿಗಳಿಂದ ಪ್ರಸ್ತಾವನೆ ಬಂದಿದ್ದು, ಪ್ರತಿ ಯೂನಿಟ್‍ಗೆ 1 ರೂಪಾಯಿ 48 ಪೈಸೆ ಹೆಚ್ಚಳಕ್ಕೆ ಬೇಡಿಕೆ ಇಟ್ಟಿವೆ ಎಂದು ತಿಳಿಸಿದ್ದರು. ಕಳೆದ ವರ್ಷ ಮಾರ್ಚ್‍ನಲ್ಲಿ ವಿದ್ಯುತ್‍ದರ ಏರಿಕೆ ಮಾಡಲಾಗಿತ್ತು.
Advertisement
ಕಳೆದ ಬಾರಿ ಎಷ್ಟು ಹೆಚ್ಚಳ ಮಾಡಲಾಗಿತ್ತು?: ನಗರದ ಗೃಹಬಳಕೆ ಗ್ರಾಹಕರಿಗೆ ಮೊದಲ 30 ಯೂನಿಟ್‍ಗೆ 30 ಪೈಸೆ, 31ರಿಂದ 100 ಯೂನಿಟ್‍ಗೆ 40 ಪೈಸೆ ಹೆಚ್ಚಿಸಲಾಗಿತ್ತು. 100 ಯೂನಿಟ್‍ಗೆ ಮೇಲ್ಪಟ್ಟ ಬಳಕೆಗೆ ಪ್ರತಿ ಹಂತದಲ್ಲಿ ತಲಾ 50 ಪೈಸೆ ಏರಿಸಲಾಗಿತ್ತು. ಗ್ರಾಮೀಣ ಗೃಹಬಳಕೆದಾರರಿಗೂ ಇಷ್ಟೇ ದರ ಹೆಚ್ಚಳವಾಗಿತ್ತು. ಎಲ್ಲ ಗ್ರಾಹಕರನ್ನು ಪರಿಗಣಿಸಿ ಲೆಕ್ಕ ಹಾಕಿದರೆ ಪ್ರತಿ ಯೂನಿಟ್ ವಿದ್ಯುತ್ ದರದಲ್ಲಿ 48 ಪೈಸೆಯಷ್ಟು ಏರಿಕೆ ಮಾಡಿದಂತಾಗಿತ್ತು. ಇದು ಕಳೆದ ಒಂದು ದಶಕದಲ್ಲಾದ ಅತ್ಯಧಿಕ ಪ್ರಮಾಣದ ದರ ಏರಿಕೆಯಾಗಿತ್ತು. ವಿದ್ಯುತ್ ಸರಬರಾಜು ಕಂಪೆನಿಗಳು (ಎಸ್ಕಾಂ) ಪ್ರತಿ ಯೂನಿಟ್‍ಗೆ 1.02 ರೂ. ಹೆಚ್ಚಳಕ್ಕೆ ಅನುಮೋದನೆ ನೀಡುವಂತೆ ಪ್ರಸ್ತಾವನೆ ಸಲ್ಲಿಸಿತ್ತು.