ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಮತ್ತೊಂದು ‘ಮೊಟ್ಟೆ ದಾಳಿ’ ನಡೆದಿದೆ. ಶನಿವಾರ ಹೂಗ್ಲಿಯಲ್ಲಿ ಗುಂಪೊಂದು ಮಮತಾ ಬ್ಯಾನರ್ಜಿ (Mamata Banerjee) ಅವರ ತೃಣಮೂಲ ಕಾಂಗ್ರೆಸ್ ಬಣದ ಶಾಸಕ ಕುನಾಲ್ ಘೋಷ್ (Kunal Ghosh) ಅವರ ಕಾರಿನ ಮೇಲೆ ಕಲ್ಲು ಮತ್ತು ಮೊಟ್ಟೆಗಳನ್ನು ಎಸೆದಿದೆ.
ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ರ್ಯಾಲಿಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದಾಗ ಘೋಷ್ ಅವರ ಮೇಲೆ ದಾಳಿ ನಡೆಯಿತು. ಇದನ್ನೂ ಓದಿ: ಜೆನ್-ಝೀ ಜೊತೆ ಮೋದಿ `ಭಜನೆ’ – ದೀನದಯಾಳ್ ಉಪಾಧ್ಯಾಯರ ಜನ್ಮದಿನದಂದು ‘ಭಜನ್ ಕ್ಲಬ್ಬಿಂಗ್’ನಲ್ಲಿ ಪ್ರಧಾನಿ ಭಾಗಿ
ಘಟನೆ ದೃಶ್ಯದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಿಟ್ಟಿಗೆದ್ದ ಗುಂಪೊಂದು ಶಾಸಕರ ಕಾರನ್ನು ತಡೆದು ಅದರ ಮೇಲೆ ಮೊಟ್ಟೆಗಳನ್ನು ಎಸೆದಿದೆ. ಗುಂಪು ಕಾರಿನ ಮೇಲೆ ಬಡಿಯುತ್ತಾ, ಮೊಟ್ಟೆ ಹಾಗೂ ಕಲ್ಲುಗಳನ್ನು ಎಸೆಯುತ್ತಾ , ‘ಕುನಾಲ್ ಘೋಷ್ ವಾಪಸ್ ಹೋಗಿ’ ಎಂದು ಘೋಷಣೆಗಳನ್ನು ಕೂಗಿತು. ಕುನಾಲ್ ಘೋಷ್ ಅವರು ಕಾರಿನೊಳಗೆ ಕುಳಿತಿರುವ ದೃಶ್ಯವನ್ನು ಈ ವಿಡಿಯೋ ತೋರಿಸುತ್ತದೆ. ಶಾಸಕರ ಕಾರಿನ ಹಿಂಭಾಗದ ಗಾಜು ಪುಡಿಯಾಗಿರುವುದನ್ನೂ ಈ ವಿಡಿಯೋದಲ್ಲಿ ಕಾಣಬಹುದು.
ತಮ್ಮ ವಾಹನ ಜಖಂಗೊಂಡ ನಂತರ ಕುನಾಲ್ ಘೋಷ್ ಅವರು ಕೋಲ್ಕತ್ತಾಗೆ ಮರಳಬೇಕಾಯಿತು. ಈ ಘಟನೆಯ ಕುರಿತು ಪ್ರತಿಕ್ರಿಯಿಸಿದ ಘೋಷ್, ಇದು ಜಂಗಲ್ ರಾಜ್ ಆಡಳಿತ. ಅವರು ಕಲ್ಲು ಮತ್ತು ಮೊಟ್ಟೆಗಳನ್ನು ಎಸೆದು ನನ್ನ ಕಾರಿನ ಮೇಲೆ ದಾಳಿ ನಡೆಸಿದರು. ಅಲ್ಲಿ ಯಾವುದೇ ಪೊಲೀಸ್ ಸಿಬ್ಬಂದಿ ಇರಲಿಲ್ಲ. ನಾನು ಈಗ ಕೋಲ್ಕತ್ತಾಗೆ ಮರಳುತ್ತಿದ್ದು, ದೂರು ದಾಖಲಿಸಲು ನೇರವಾಗಿ ಲಾಲ್ ಬಜಾರ್ ಅಥವಾ ಭವಾನಿ ಭವನಕ್ಕೆ ಹೋಗಲಿದ್ದೇನೆ ಎಂದು ತಿಳಿಸಿದ್ದಾರೆ.
ದಾಳಿಯಲ್ಲಿ ಕಾರಿನ ಹಿಂಭಾಗದ ಗಾಜು ಒಡೆದುಹೋಗಿದೆ ಎಂದು ಶಾಸಕ ಆರೋಪಿಸಿದ್ದಾರೆ. ಈ ಘಟನೆಯು ಬಿಜೆಪಿಯ ಕೃತ್ಯ ಎಂದು ಟಿಎಂಸಿ ನಾಯಕರು ಆರೋಪಿಸಿದ್ದಾರೆ. ಇದನ್ನೂ ಓದಿ: ಸಂಸತ್ನಲ್ಲಿ ಎಸ್ಸಿ-ಎಸ್ಟಿ ಸಂಸದರಿಗೆ ಹೆಚ್ಚು ಮಾತನಾಡಲು ಅವಕಾಶ ನೀಡಿ – ಸ್ಪೀಕರ್ ಓಂ ಬಿರ್ಲಾಗೆ ಕೇಂದ್ರ ಸಚಿವ ಜಿತನ್ ರಾಮ್ ಮಾಂಝಿ ಪತ್ರ
ಕುನಾಲ್ ಘೋಷ್ ಅವರು ದಾಳಿಯ ಕುರಿತು ದೂರು ನೀಡಲು ಅಲಿಪುರದ ಡಿಜಿ (DG) ಪ್ರಧಾನ ಕಚೇರಿ ಭವಾನಿ ಭವನಕ್ಕೆ ತೆರಳಿದರಾದರೂ, ಅವರಿಗೆ ಪ್ರವೇಶ ನಿರಾಕರಿಸಲಾಯಿತು. ಬಳಿಕ ಅವರು ಇಮೇಲ್ ಮೂಲಕ ದೂರು ಸಲ್ಲಿಸಿದರು.

