– ಕೈಯಲ್ಲಿ ಕಂಜರ ಬಾರಿಸುತ್ತಾ ಭಕ್ತಿಗೀತೆ ಆನಂದಿಸಿದ ಮೋದಿ
ನವದೆಹಲಿ: ಭಾರತೀಯ ಜನಸಂಘದ ಪ್ರಮುಖ ನಾಯಕ, ಬಿಜೆಪಿ ಸಿದ್ಧಾಂತವಾದಿ ಪಂಡಿತ್ ದೀನದಯಾಳ್ ಉಪಾಧ್ಯಾಯರ 110ನೇ ಜನ್ಮದಿನದ ಅಂಗವಾಗಿ ಶುಕ್ರವಾರ ನವದೆಹಲಿಯ ದೀನ್ ದಯಾಳ್ ಉಪಾಧ್ಯಾಯ ಉದ್ಯಾನದಲ್ಲಿ ನಡೆದ ‘ಭಜನ್ ಕ್ಲಬ್ಬಿಂಗ್’ (Bhajan Clubbing) ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಭಾಗವಹಿಸಿದರು.
ಭಕ್ತಿಗೀತೆಗಳ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಪ್ರೇಕ್ಷಕರ ಮಧ್ಯೆ ಕುಳಿತು ಕಲಾವಿದರೊಂದಿಗೆ ಚಪ್ಪಾಳೆ ತಟ್ಟುತ್ತಾ ಕಾರ್ಯಕ್ರಮ ಆನಂದಿಸಿದರು. ಭಗವಾನ್ ಶ್ರೀರಾಮನ ಕುರಿತ ಭಜನೆಯೊಂದರ ವೇಳೆ ಅವರು ಕಂಜರ ವಾದ್ಯ ನುಡಿಸುತ್ತಾ ಸಂತಸ ಪಟ್ಟರು. ಕಾರ್ಯಕ್ರಮದಲ್ಲಿ ಜೆನ್-ಝೀ ಸಮೂಹ ದೊಡ್ಡ ಸಂಖ್ಯೆಯ ಉಪಸ್ಥಿತಿ ಕಂಡುಬಂದಿದ್ದು, ಅವರೂ ಸಹ ಗಾಯಕರೊಂದಿಗೆ ಸೇರಿ ಭಜನೆ ಮಾಡುತ್ತಾ, ಶಿಳ್ಳೆ ಚಪ್ಪಾಳೆ ಮಳೆಗರೆದು ಸಂಭ್ರಮಿಸಿದರು.
Bhajan Clubbing in Delhi.
Spectacular! pic.twitter.com/BujBa4lzk7
— Narendra Modi (@narendramodi) September 25, 2026
ಕಾರ್ಯಕ್ರಮ ಸ್ಥಳಕ್ಕೆ ಆಗಮಿಸಿದ ವೇಳೆ ಪ್ರಧಾನಿ ಮೋದಿ ಅವರು ಅಲ್ಲಿದ್ದ ಜನರತ್ತ ಕೈಬೀಸಿ ಶುಭಾಶಯ ಕೋರಿದರು. ಇದಕ್ಕೂ ಮುನ್ನ ಅವರು ದೀನದಯಾಳ್ ಉಪಾಧ್ಯಾಯರಿಗೆ ಗೌರವ ನಮನ ಸಲ್ಲಿಸಿ, ಅವರ ‘ಅಂತ್ಯೋದಯ’ ತತ್ವದ ಕುರಿತು ಮಾತನಾಡಿದ್ದರು.
ಏನಿದು ‘ಭಜನೆ ಕ್ಲಬ್ಬಿಂಗ್’?
‘ಭಜನೆ ಕ್ಲಬ್ಬಿಂಗ್’ ಎಂದರೆ ಸಂಗೀತ ಕಛೇರಿ ಮಾದರಿಯಲ್ಲೇ ಆಯೋಜಿಸಲಾಗುವ ಭಕ್ತಿಗೀತೆಗಳ ಕಾರ್ಯಕ್ರಮ. ಇಂತಹ ಕಾರ್ಯಕ್ರಮಗಳಲ್ಲಿ ಯುವಸಮೂಹ ಒಟ್ಟಾಗಿ ಸೇರಿ ಭಜನೆ ಗೀತೆಗಳನ್ನ ಹಾಡುತ್ತಾರೆ ಮತ್ತು ಆಲಿಸುತ್ತಾರೆ. ಲೈವ್ ಬ್ಯಾಂಡ್ಗಳು, ಆಧುನಿಕ ಸಂಗೀತ ಸಂಯೋಜನೆ, ಬೆಳಕಿನ ಅಲಂಕಾರ ಮತ್ತು ಉತ್ಸಾಹಭರಿತ ವಾತಾವರಣ ಇವುಗಳೊಂದಿಗೆ ಸಾಂಪ್ರದಾಯಿಕ ಭಕ್ತಿಗೀತೆಗಳನ್ನು ಹೊಸ ರೀತಿಯಲ್ಲಿ ಪ್ರಸ್ತುತಪಡಿಸಲಾಗುತ್ತದೆ.
ಸಾಮಾನ್ಯ ಸಂಗೀತ ಕಾರ್ಯಕ್ರಮಗಳಿಗಿಂತ ಇವು ಭಿನ್ನವಾಗಿರುತ್ತವೆ, ಭಕ್ತಿಗೀತೆಗಳ ಕೇಂದ್ರೀಕೃತವಾಗಿ ಈ ಕಾರ್ಯಕ್ರ ಇರುತ್ತದೆ.
ಟ್ರೆಂಡ್ ಬಗ್ಗೆ ಮೋದಿ ಹಿಂದೆಯೇ ಮೆಚ್ಚುಗೆ
ಪ್ರಧಾನಿ ನರೇಂದ್ರ ಮೋದಿ ಅವರು ಈ ವರ್ಷದ ಆರಂಭದಲ್ಲೇ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ‘ಭಜನೆ ಕ್ಲಬ್ಬಿಂಗ್’ ನಂತಹ ಬೆಳೆಯುತ್ತಿರುವ ಪ್ರವೃತ್ತಿಯ ಕುರಿತು ಮಾತನಾಡಿದ್ದರು. ಜನವರಿಯಲ್ಲಿ ಅವರು ಯುವಜನರಲ್ಲಿ ಹೆಚ್ಚುತ್ತಿರುವ ಈ ಆಸಕ್ತಿಯು ಆಧ್ಯಾತ್ಮಿಕತೆ, ಸಂಸ್ಕೃತಿ ಮತ್ತು ಆಧುನಿಕತೆಯ ಸಮ್ಮಿಲನವನ್ನ ತೋರಿಸುತ್ತದೆ ಎಂದು ಶ್ಲಾಘಿಸಿದ್ದರು.

