ಮೊಟ್ಟೆ, ಮಾಂಸ ತಿನ್ನುವ ಮಕ್ಕಳು ನರ ಭಕ್ಷಕರಾಗುತ್ತಾರೆ – ಬಿಜೆಪಿ ಶಾಸಕ

Public TV
2 Min Read
boiled egg 2

ಭೋಪಾಲ್: ಮಾಂಸ ತಿನ್ನುವ ಮಕ್ಕಳು ಮುಂದೆ ನರ ಭಕ್ಷಕರಾಗಿ ಬೆಳೆಯಬಹುದು ಎಂದು ಮಧ್ಯಪ್ರದೇಶದ ಬಿಜೆಪಿ ನಾಯಕ ಅಲ್ಲಿನ ವಿರೋಧ ಪಕ್ಷದ ನಾಯಕರೂ ಆಗಿರುವ ಗೋಪಾಲ್ ಭಾರ್ಗವ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ನೀಡಲಾಗುತ್ತಿರುವ ಆಹಾರದ ಜೊತೆಗೆ ಮೊಟ್ಟೆಗಳನ್ನು ನೀಡುವ ಸರ್ಕಾರದ ಚಿಂತನೆಯನ್ನು ಬಿಜೆಪಿಯ ಹಲವು ನಾಯಕರು ಟೀಕಿಸಿದ್ದಾರೆ. ಪಕ್ಷದ ನಾಯಕ ಕೈಲಾಶ್ ವಿಜಯವರ್ಗಿಯ ಅವರು ಬುಧವಾರ ಈ ಕುರಿತು ವಿರೋಧ ವ್ಯಕ್ತಪಡಿಸಿದ ನಂತರ ಭಾರ್ಗವ ಅವರು ಈ ಹೇಳಿಕೆ ನೀಡಿದ್ದಾರೆ. ಮೊಟ್ಟೆ ನೀಡುವುದರಿಂದ ನಮ್ಮ ಧಾರ್ಮಿಕತೆಗೆ ಹಾಗೂ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಯಾಗುತ್ತದೆ ಎಂದು ಟೀಕಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಭಾರ್ಗವ, ಮುಖ್ಯಮಂತ್ರಿ ಕಮಲ್ ನಾಥ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಮೊಟ್ಟೆ ಮತ್ತು ಮಾಂಸ ತಿನ್ನುವಂತೆ ಮಕ್ಕಳನ್ನು ಒತ್ತಾಯಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಈ ಸರ್ಕಾರದಿಂದ ಇನ್ನೇನನ್ನು ನಿರೀಕ್ಷಿಸಬಹುದು, ಮಕ್ಕಳಿಗೆ ಮೊಟ್ಟೆಗಳನ್ನು ಕೊಡುತ್ತಾರೆ, ತಿನ್ನದವರಿಗೆ ಒತ್ತಾಯಿಸುತ್ತಾರೆ. ಮೊಟ್ಟೆಯನ್ನು ತಿನ್ನದವರಿಗೆ ಕೋಳಿ, ಮಟನ್ ಆಹಾರ ನೀಡುತ್ತಾರೆ. ನಮ್ಮ ಭಾರತೀಯ ಸಂಸ್ಕøತಿಯಲ್ಲಿ ಮಾಂಸಹಾರವನ್ನು ಅನುಮತಿಸುವುದಿಲ್ಲ. ಇದನ್ನು ಬಾಲ್ಯದಿಂದಲೇ ತಿಂದಿದ್ದರೆ ದೊಡ್ಡವರಾದ ಮೇಲೆ ನಾವು ನರಭಕ್ಷಕರಾಗುತ್ತಿದ್ದೆವೇನೋ ಗೊತ್ತಿಲ್ಲ. ಅಲ್ಲದೆ ನಮ್ಮ ಜಾತಿಯ ನಿಯಮದ ಪ್ರಕಾರ ಬೆಳ್ಳುಳ್ಳಿ ಹಾಗೂ ಈರುಳ್ಳಿ ತಿನ್ನುವುದನ್ನು ಸಹ ತ್ಯಜಿಸಿದ್ದೇನೆ ಎಂದು ಭಾರ್ಗವ ತಿಳಿಸಿದರು.

boiled egg 1 1

ಅಂಗನವಾಡಿ ಮಕ್ಕಳಿಗೆ ಆಹಾರದ ಜೊತೆಗೆ ಮೊಟ್ಟೆಗಳನ್ನೂ ನೀಡುವ ಕುರಿತ ಆಲೋಚನೆಯನ್ನು ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಇಮಾರ್ತಿ ದೇವಿ ಮುಂದಿಟ್ಟಿದ್ದಾರೆ. ಮಕ್ಕಳಲ್ಲಿ ಪೌಷ್ಠಿಕಾಂಶವನ್ನು ಹೆಚ್ಚಿಸುವ ದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ದೇವಿ ಹೇಳಿದ್ದಾರೆ.

ಈ ಯೋಜನೆಗೆ ಪ್ರತಿಪಕ್ಷ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಮೊಟ್ಟೆ ನೀಡುವುದರಿಂದ ನಮ್ಮ ಧಾರ್ಮಿಕತೆಗೆ ಹಾಗೂ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಯಾಗುತ್ತದೆ ಎಂದು ಶಾಸಕ ವಿಜಯವರ್ಗಿಯಾ ಟೀಕಿಸಿದರೆ, ರಾಮೇಶ್ವರ ಶರ್ಮಾ ಹಲವು ಮಕ್ಕಳು ಹಾಗೂ ಅವರ ತಾಯಂದಿರು ಮೊಟ್ಟೆಯನ್ನು ಇನ್ನೂ ಮುಟ್ಟಿಯೇ ಇಲ್ಲ ಎಂದು ತಿಳಿಸಿದ್ದಾರೆ.

chicken 65

ಆದರೆ ಈ ಟೀಕೆಯನ್ನು ದೇವಿ ಅಲ್ಲಗಳೆದಿದ್ದು, ಬಿಜೆಪಿ ಪ್ರತಿಭಟನೆಗೆ ನಾವು ಹೆದರುವುದಿಲ್ಲ. ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿರುವ ಬ್ಲಾಕ್‍ಗಳಲ್ಲಿ ನಾವು ಮೊಟ್ಟೆ ವಿತರಿಸುತ್ತೇವೆ. ಮೊಟ್ಟೆಯಲ್ಲಿ ಅನೇಕ ಪೋಷಕಾಂಶಗಳಿವೆ. ನಾನು ಮೊಟ್ಟೆ ತಿನ್ನುವುದರಿಂದಲೇ ತುಂಬಾ ಆರೋಗ್ಯವಾಗಿದ್ದೇನೆ ಎಂದು ದೇವಿ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *