– ವಿಜಯೇಂದ್ರಗೆ ಬಸ್ಟ್ಯಾಂಡ್‍ನಲ್ಲಿ ಚೇರ್ ಹಾಕಿ ಕೊಡೋಣ
ಶಿವಮೊಗ್ಗ: ವಿಜಯೇಂದ್ರ (B.Y Vijayendra) ಸಿಎಂ ಬದಲಾವಣೆಗೆ ಮುಹೂರ್ತ ಇಡುತ್ತಿದ್ದರು. ಈಗ ಯಾರ ಬದಲಾವಣೆ ಆಗುತ್ತೆ ನೋಡೋಣ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಬಿಜೆಪಿ (BJP) ರಾಜ್ಯಾಧ್ಯಕ್ಷರ ಬದಲಾವಣೆಯ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ಶಿವಮೊಗ್ಗದಲ್ಲಿ (Shivamogga) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ವಿಜಯೇಂದ್ರ ಅವರು ಹೊಸ ವರ್ಷಕ್ಕೆ ಹೊಸ ಸಿಎಂ ಎನ್ನುತ್ತಿದ್ದರು. ಸೊಕ್ಕಿನ ಮಾತುಗಳನ್ನು ಆಡುತ್ತಿದ್ದರು. ಯಾರು ಯಾರಿಗೆ ಮುಹೂರ್ತ ಇಡುತ್ತಾರೆ ನೋಡೋಣ. ನಾನು ಯತ್ನಾಳ್ ಅವರಿಗೆ ಅಭಿನಂದನೆ ಹೇಳ್ತಿನಿ ಎಂದು ಅವರು ವ್ಯಂಗ್ಯವಾಡಿದ್ದಾರೆ.
ವಿಜಯೇಂದ್ರ ಅವರಿಗೆ ಭವಿಷ್ಯ ಹೇಳಿ ಅಭ್ಯಾಸ ಇದೆ. ಯಾವುದಾದರೂ ಬಸ್ಟ್ಯಾಂಡ್‍ನಲ್ಲಿ ಚೇರ್ ಹಾಕಿ ಕೊಡೋಣ, ಕುಳಿತುಕೊಂಡು ಭವಿಷ್ಯ ಹೇಳಲಿ. ಚುನಾವಣಾ ಪ್ರಚಾರದ ವೇಳೆ ಮುಡಾ ಹಗರಣ, ವಕ್ಫ್ ಹಗರಣ ಎಂದು ವಿಪಕ್ಷದವರು ಭಾಷಣ ಮಾಡಿದ್ದರು. ಅವರ ಭಾಷಣಕ್ಕೆ ಮತದಾರರು ಸೊಪ್ಪು ಹಾಕಲಿಲ್ಲ. ಬಿಜೆಪಿ ಹಾಗೂ ಜೆಡಿಎಸ್‌ನವರು ಸ್ವಾರ್ಥಕ್ಕೆ ಸ್ನೇಹ ಮಾಡುವವರು. ಅವರ ಸ್ವಾರ್ಥದ ಸ್ನೇಹ ಜನರಿಗೆ ಗೊತ್ತಾಗಿದೆ ಎಂದು ಕುಟುಕಿದ್ದಾರೆ.
ರಾಜ್ಯದ ಜನರು ಕಾಂಗ್ರೆಸ್ ಸರ್ಕಾರದ ಮೇಲೆ ವಿಶ್ವಾಸ ಇಟ್ಟು ಉಪಚುನಾವಣೆಯಲ್ಲಿ ಗೆಲ್ಲಿಸಿದ್ದಾರೆ. ಈ ಮೂಲಕ ಕಾರ್ಯಕರ್ತರು ಇತಿಹಾಸ ಸೃಷ್ಟಿ ಮಾಡಿದ್ದಾರೆ. ವಿಪಕ್ಷವನ್ನು ಮತದಾರರು ಕೆಳಮಟ್ಟಕ್ಕೆ ಕೂರಿಸಿದ್ದಾರೆ. ಮತದಾರರು ಒಳ್ಳೆಯ ರೀತಿಯಲ್ಲಿ ಉತ್ತರ ಕೊಟ್ಟಿದ್ದಾರೆ. ಮುಖ್ಯಮಂತ್ರಿಗಳಿಗೆ ಶುಭಾಶಯ ಕೋರುತ್ತೇನೆ ಎಂದಿದ್ದಾರೆ.
ಚನ್ನಪಟ್ಟಣ ಮತದಾರರು ಆಮಿಷಕ್ಕೆ ಒಳಗಾಗುವ ಮತದಾರರಲ್ಲ. ಯೋಗೇಶ್ವರ್ ಅವರು ಸ್ಥಳೀಯ ನಾಯಕರಾಗಿದ್ದು, ಗೆಲ್ಲುವ ವಿಶ್ವಾಸ ಇತ್ತು. ಸರ್ಕಾರ ನೂರಕ್ಕೆ ನೂರು ಜನರ ಜೊತೆ ಇದೆ ಎಂದಿದ್ದಾರೆ.