ಬೆಂಗಳೂರು: ಕನ್ನಡದ ಲೇಖಕಿ ಡಾ.ವಿಜಯಾ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.
ಡಾ.ವಿಜಯಾ ಅವರ ‘ಕುದಿ ಎಸರು- ತಿಟ್ಹತ್ತಿ ತಿರುಗಿ ನೋಡಿದಾಗ’ ಆತ್ಮಚರಿತ್ರೆಗೆ ಕನ್ನಡ ವಿಭಾಗದಲ್ಲಿ 2019ನೇ ಸಾಲಿನಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಿಕ್ಕಿದೆ. ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ನಾಯಕ ಶಶಿ ತರೂರ್ ಅವರ ಇಂಗ್ಲಿಷ್ ಭಾಷೆಯ ‘ಆ್ಯನ್ ಇರಾ ಆಫರ್ ಡಾರ್ಕ್ ನೆಸ್(ನಾನ್-ಫಿಕ್ಷನ್)’ ಗೂ ಪ್ರಶಸ್ತಿ ಲಭಿಸಿದೆ. ಶಶಿ ತರೂರ್ ಅವರ ಪುಸ್ತಕ 2016ರಲ್ಲಿ ಬಿಡುಗಡೆ ಮಾಡಲಾಗಿತ್ತು. ಇದೇ ಕೃತಿ ಬ್ರಿಟನ್ ನಲ್ಲಿ Inglorious Empire: What the British Did to India ಹೆಸರಿನಲ್ಲಿ ಮುದ್ರಣಗೊಂಡು ಪ್ರಕಟವಾಗಿತ್ತು. ಬಿಡುಗಡೆಗೊಂಡ ಆರು ತಿಂಗಳಲ್ಲಿ 50 ಸಾವಿರ ಕೃತಿಗಳು ಮಾರಾಟವಾಗಿದ್ದವು.
Advertisement
Advertisement
ಭಾರತೀಯ ಭಾಷೆಗಳ ಅಭಿವೃದ್ಧಿಯ ಗುರಿಯನ್ನು ಹೊಂದಿರುವ ಕೇಂದ್ರ ಸಾಹಿತ್ಯ ಅಕಾಡೆಮಿಯು ಕೇಂದ್ರ ಸರ್ಕಾರದ ಅನುದಾನದಲ್ಲಿ ನಡೆಯುವ ಸ್ವಾಯತ್ತ ಸಂಸ್ಥೆಯಾಗಿದೆ. 1954ರಲ್ಲಿ ಸ್ಥಾಪನೆಯಾದ ಈ ಸಂಸ್ಥೆ ಭಾರತೀಯ ಭಾಷೆಗಳ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿದೆ. ಮೊದಲ ಬಾರಿಗೆ ಕನ್ನಡದಲ್ಲಿ 1955ರಲ್ಲಿ ಮಹಾಕವಿ ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಮಹಾಕಾವ್ಯ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಿಕ್ಕಿತ್ತು.
Advertisement
ಭಾರತದ ಒಟ್ಟು 24 ಭಾಷೆಗಳಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿ ವಿಜೇತರಿಗೆ ಒಂದು ಲಕ್ಷ ರೂ. ನಗದು ಮತ್ತು ಫಲಕ ನೀಡಿ ಗೌರವಿಸಲಾಗುತ್ತದೆ. ಈ ಬಾರಿ ನೇಪಾಳಿ ಭಾಷೆ ಹೊರತು ಪಡಿಸಿ 23 ಭಾಷೆಗಳಿಗೆ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ನೇಪಾಳಿ ಭಾಷೆಯ ವಿಜೇತರ ಹೆಸರನ್ನು ಶೀಘ್ರದಲ್ಲಿಯೇ ಘೋಷಿಸಲಾಗುವುದು ಅಕಾಡೆಮಿ ತಿಳಿಸಿದೆ.