ಬೆಂಗಳೂರು: ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಶಿವೈಕ್ಯರಾದ ಹಿನ್ನೆಲೆಯಲ್ಲಿ ಅವರಿಗೆ ಶಸ್ತ್ರಚಿಕಿತ್ಸೆ ಮಾಡಿದ ಡಾ. ರೇಲಾ ಸ್ವಾಮೀಜಿ ಅವರನ್ನು ನೆನಪಿಸಿಕೊಂಡಿದ್ದಾರೆ. ಅಲ್ಲದೇ ಅವರ ಜೊತೆ ನಡೆದ ಒಂದು ಸಂದರ್ಭವನ್ನು ಹಂಚಿಕೊಂಡಿದ್ದಾರೆ.
ಸಿದ್ದಗಂಗಾ ಶ್ರೀಗಳು ಎರಡು ತಿಂಗಳ ಹಿಂದೆ ಚೆನ್ನೈನ ರೇಲಾ ಆಸ್ಪತ್ರೆಗೆ ದಾಖಲಾಗಿದ್ದರು. ಶಸ್ತ್ರಚಿಕಿತ್ಸೆ ನಡೆದ ಎರಡೇ ದಿನಗಳಲ್ಲಿ ಪವಾಡ ಸದೃಶ ರೀತಿಯಲ್ಲಿ ಶ್ರೀಗಳು ಚೇತರಿಸಿಕೊಂಡು ಐಸಿಯುನಲ್ಲೇ ಇಷ್ಟ ಲಿಂಗ ಪೂಜೆಯಲ್ಲಿ ತೊಡಗಿದ್ದರು. ಈ ಸಂದರ್ಭದಲ್ಲಿ ಡಾಕ್ಟರ್ ಮೊಹ್ಮದ್ ರೇಲಾ ಮತ್ತು ಶ್ರೀಗಳ ನಡುವೆ ಆಸಕ್ತಿಕರ ಸಂಭಾಷಣೆ ನಡೆದಿದೆ. ಶ್ರೀಗಳು ಲಿಂಗೈಕ್ಯರಾದ ಸಂದರ್ಭದಲ್ಲಿ ಡಾಕ್ಟರ್ ರೇಲಾ ಅವರು, ಅಂದು ಶ್ರೀಗಳೊಂದಿಗೆ ನಡೆದ ಸಂಭಾಷಣೆಯನ್ನು ತಮ್ಮ ಆಪ್ತರ ಜೊತೆ ಹಂಚಿಕೊಂಡಿದ್ದಾರೆ.
Advertisement
Advertisement
ಡಾ.ರೇಲಾ ಹೇಳಿದ್ದು ಹೀಗೆ:
“ಸ್ವಾಮೀಜಿ, ನೀವು ನಿತ್ಯ ಪೂಜೆ ಮಾಡುತ್ತೀರಿ ಅಲ್ಲವೇ? ನಿಮಗೆ ದೇವರ ದರ್ಶನ ಆಗಿದ್ಯಾ” ಎಂದು ನಾನು ಪ್ರಶ್ನೆ ಮಾಡಿದೆ. ಈ ವೇಳೆ ಸ್ವಾಮೀಜಿ ನಗುತ್ತಾ, “ಹೌದು. ನಾನು ದೇವರನ್ನು ನೋಡಿದ್ದೇನೆ” ಎಂದು ಉತ್ತರಿಸಿದರು. ಬಳಿಕ ನಾನು, “ಹಾಗಿದ್ದರೆ, ದೇವರು ಎಲ್ಲಿದ್ದಾರೆ ಹಾಗೂ ಹೇಗಿದ್ದಾರೆ ಎಂಬುದನ್ನು ನಮಗೂ ತೋರಿಸಿ” ಎಂದು ಕೇಳಿದೆ. ಅದಕ್ಕೆ ಸಿದ್ದಗಂಗಾ ಸ್ವಾಮೀಜಿ ಅವರು, “ಮತ್ತೊಮ್ಮೆ ನಗುತ್ತಾ ನನ್ನ ಮಠಕ್ಕೆ ಒಮ್ಮೆ ಬನ್ನಿ ನಾನು ನಿಮಗೆ 10 ಸಾವಿರ ದೇವರುಗಳನ್ನು ತೋರಿಸುತ್ತೇನೆ” ಎಂದು ಹೇಳಿದರು. ಈ ಉತ್ತರ ಕೇಳಿ ನಾನು ಆಶ್ಚರ್ಯಪಟ್ಟೆ. ಮತ್ತೆ ಮಾತನ್ನು ಮುಂದುವರಿಸಿದ ಶ್ರೀಗಳು, “ಹೌದು ನನಗೆ ಮಕ್ಕಳೇ ದೇವರು. ಅವರಲ್ಲಿ ನಾನು ದೇವರನ್ನು ಕಂಡಿದ್ದೇನೆ. ಮಠದ ಮಕ್ಕಳಿಗಾಗಿಯೇ ನಾನು ನಿತ್ಯ ಇಷ್ಟಲಿಂಗ ಪೂಜೆ ಮಾಡುತ್ತೇನೆ” ಎಂದು ಹೇಳಿದರು.
Advertisement
Advertisement
ಶ್ರೀಗಳ ಈ ಮಾತುಗಳನ್ನು ಕೇಳಿ ಮೂಕವಿಸ್ಮಿತರಾಗಿ ಕ್ಷಣಕಾಲ ಡಾ. ರೇಲಾ ಅವರು ಮೌನಕ್ಕೆ ಜಾರಿದ್ದರಂತೆ. 111 ವರ್ಷದ ವಿಶ್ವ ಸಂತ, ಐಸಿಯುನಲ್ಲಿ ಇರುವಾಗಲೂ ಮಠದ ಮಕ್ಕಳಿಗಾಗಿ ಪೂಜೆ ಮಾಡುವುದು ಒಂದು ಮಹೋನ್ನತ ಸಂಗತಿಯೇ ಸರಿ ಎಂದು ರೇಲಾ ಅವರು ಹೇಳಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv