– ಹರ್ ಘರ್ ಸಂವಿಧಾನ ಅಭಿಯಾನ
– ಸಣ್ಣ ಪುಟ್ಟ ಜಾತಿಗಳನ್ನು ಒಗ್ಗೂಡಿಸಿದ್ದ ಆರ್‌ಎಸ್‌ಎಸ್
– 60 ಸಾವಿರ+ ಸಭೆ, ದಲಿತರ ಮನೆ ಮನೆ ಭೇಟಿ
ಮುಂಬೈ: ಲೋಕಸಭಾ ಚುನಾವಣೆಯಲ್ಲಿ (Lok Sabah Election) ಮಹಾರಾಷ್ಟ್ರದಲ್ಲಿ ಹೀನಾಯ ಪ್ರದರ್ಶನ ನೀಡಿದ್ದ ಬಿಜೆಪಿ ನೇತೃತ್ವದ ಎನ್‌ಡಿಎ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ INDIA ಒಕ್ಕೂಟವನ್ನು ಧ್ವಂಸ ಮಾಡಿದೆ. ಬಿಜೆಪಿ 100ಕ್ಕೂ ಹೆಚ್ಚು ಸ್ಥಾನ ಗೆದ್ದು ಮಹಾರಾಷ್ಟ್ರದಲ್ಲಿ ಇತಿಹಾಸ ನಿರ್ಮಿಸಿದೆ. ಬಿಜೆಪಿಯ ಇತಿಹಾಸ ನಿರ್ಮಾಣ ಮಾಡಿದ್ದರೂ ಈ ಅತ್ಯುತ್ತಮ ಕೆಲಸದ ಹಿಂದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕೆಲಸ ಈಗ ಮುನ್ನೆಲೆಗೆ ಬರುತ್ತಿದೆ.
ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ಪ್ರಚಾರದ ಸಮಯದಲ್ಲಿ ಬಿಜೆಪಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಬೆಂಬಲ ಅಗತ್ಯವಿಲ್ಲ ಎಂದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ (JP Nadda) ಹೇಳಿದ್ದರು. ನಡ್ಡಾ ಹೇಳಿಕೆ ಪಕ್ಷದ ಒಳಗಡೆಯೇ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಜೆಪಿ ನಡ್ಡಾ ಹೇಳಿಕೆ, ತಾನು ಶಿಫಾರಸು ಮಾಡಿದ ಅಭ್ಯರ್ಥಿಗಳಿಗೆ ಬಿಜೆಪಿ ಟಿಕೆಟ್ ನೀಡದಿರುವುದು ಸೇರಿದಂತೆ ಹಲವು ವಿಷಯಗಳಲ್ಲಿ ಆರ್‌ಎಸ್‌ಎಸ್ ಮತ್ತು ಬಿಜೆಪಿ ನಡುವಿನ ಸಂಬಂಧ ಹಳಸಿತ್ತು. ಲೋಕಸಭಾ ಚುನಾವಣೆಯಲ್ಲಿ (LokSabha Election) ಬಿಜೆಪಿ ಕಳಪೆ ಸಾಧನೆ ಮಾಡಿದ ಬೆನ್ನಲ್ಲೇ ಆರ್‌ಎಸ್‌ಎಸ್ ಈ ಬಾರಿಯ ವಿಧಾನಸಭಾ ಚುನಾವಣೆಯನ್ನು ಗೆಲ್ಲಲೇಬೇಕೆಂದು ಪ್ರತಿಷ್ಠೆಯಾಗಿ ತೆಗೆದುಕೊಂಡಿತ್ತು.ಇದರ ಭಾಗವಾಗಿ ಮಹಾರಾಷ್ಟ್ರ ಚುನಾವಣೆಗೂ ಮೊದಲು ಮುಂಬೈನಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ನಾಯಕರು ಮಹತ್ವದ ಸಮನ್ವಯ ಸಭೆ ನಡೆಸಿದ್ದರು.
Advertisement
Advertisement
ಸಭೆಯಲ್ಲಿ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು, ಇತರ ಬಿಜೆಪಿ ನಾಯಕರು, ಎಲ್ಲಾ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ವಿಶ್ವ ಹಿಂದೂ ಪರಿಷತ್, ವನವಾಸಿ ಕಲ್ಯಾಣ ಆಶ್ರಮ, ಭಾರತೀಯ ಮಜ್ದೂರ್ ಸಂಘ ಭಾಗಿಯಾಗಿತ್ತು. ಈ ಸಂದರ್ಭದಲ್ಲಿ ಆರ್‌ಎಸ್‌ಎಸ್ ನಾಯಕರು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಏಕೆ ಕಳಪೆ ಪ್ರದರ್ಶನ ನೀಡಿತು ಎಂಬುದರ ಕುರಿತು ವಿವರಣೆ ನೀಡಿದ್ದರು. ಬಿಜೆಪಿ ಯಾವ ವಿಧಾನಸಭಾ ಕ್ಷೇತ್ರದಲ್ಲಿ ಪ್ರಬಲವಾಗಿದೆ? ನಾವು ಎಲ್ಲಿ ದುರ್ಬಲರಾಗಿದ್ದೇವೆ? ಕ್ಷೇತ್ರಗಳಲ್ಲಿ ಒಳಗೊಂಡಿರುವ ಸಮಸ್ಯೆಗಳು ಮತ್ತು ಅವುಗಳನ್ನು ಹೇಗೆ ಎದುರಿಸುವುದು ಎಂಬುದರ ಕುರಿತು ಚರ್ಚೆ ನಡೆಸಲಾಯಿತು. ನಂತರ ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸುವ ಕೆಲಸಕ್ಕೆ ಕೈ ಹಾಕಲಾಯಿತು. 10-12 ಮಂದಿಯ ಗುಂಪು ರಚಿಸಿ ಮನೆಮನೆಗೆ ತೆರಳಿ ವಿಪಕ್ಷಗಳ ಅಪಪ್ರಚಾರದ ಬಗ್ಗೆ ತಿಳಿಸಲು ನಿರ್ಧಾರ ಕೈಗೊಳ್ಳಲಾಯಿತು.
Advertisement
ವಿಪಕ್ಷಗಳು ಹೇಗೆ ಜಾತಿ ಜಾತಿ ಹೆಸರಿನಲ್ಲಿ ಹಿಂದೂಗಳನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ ಎಂಬುದಕ್ಕೆ ಮನೆ ಮನೆಗೆ ತೆರಳಿ ಕರಪತ್ರವನ್ನು ಹಂಚಲು ಆರಂಭಿಸಿದರು. ಲವ್ ಜಿಹಾದ್‌ನಿಂದ ಏನಾಗುತ್ತಿದೆ? ವಕ್ಫ್ ಬೋರ್ಡ್ ಹೇಗೆ ಜಾಗಗಳನ್ನು ಕಬಳಿಸುತ್ತಿದೆ. ಅನಿಯಂತ್ರಿತ ಅಕ್ರಮ ವಲಸೆಯಿಂದ ಎಷ್ಟು ಸಮಸ್ಯೆ ಆಗುತ್ತಿದೆ ಇತ್ಯಾದಿಗಳ ಬಗ್ಗೆ ವಿವರಗಳನ್ನು ಕರಪತ್ರದಲ್ಲಿ ತಿಳಿಸಲಾಗಿತ್ತು. ಇದನ್ನೂ ಓದಿ: 11 ಮುಸ್ಲಿಂ ಸ್ಪರ್ಧಿಗಳನ್ನು ಹಿಂದಿಕ್ಕಿ ಏಕೈಕ ಹಿಂದೂ ಅಭ್ಯರ್ಥಿ ಮುನ್ನಡೆ
Advertisement
ರಾಹುಲ್ ಗಾಂಧಿ ಅವರು ತನ್ನ ಚುನಾವಣಾ ಪ್ರಚಾರ ಭಾಷಣದಲ್ಲಿ ಸಂವಿಧಾನ ಪುಸ್ತಕ ಹಿಡಿದುಕೊಂಡು ಬಿಜೆಪಿ ಸಂವಿಧಾನ ಬದಲಾಯಿಸಲು ಹೋಗುತ್ತಿದೆ ಎಂದು ಆರೋಪಿಸುತ್ತಿದ್ದರು. ಇದಕ್ಕೆ ಪ್ರತಿಯಾಗಿ ಆರ್‌ಎಸ್‌ಎಸ್ ಸಂಘಟನೆಗಳು ‘ಹರ್ ಘರ್ ಸಂವಿಧಾನ’ ಎಂಬ ಅಭಿಯಾನ ಆರಂಭಿಸಿತ್ತು. ದಲಿತರ ಮನೆ ಮನೆಗ ಹೋಗಿ ಕಾಂಗ್ರೆಸ್ ಹೇಗೆ ಯಾವ ರೀತಿ ದಲಿತರಿಗೆ ಅನ್ಯಾಯ ಮಾಡುತ್ತಿದೆ? ಅಂಬೇಡ್ಕರ್ ಅವರನ್ನು ಯಾವ ರೀತಿ ನಡೆಸಿಕೊಂಡಿತ್ತು ಇತ್ಯಾದಿ ವಿಷಯಗಳ ಇಟ್ಟುಕೊಂಡು ತಳ ಮಟ್ಟದಲ್ಲಿ ಜನರ ಜೊತೆ ಸಭೆ ನಡೆಸತೊಡಗಿತು.
ಲೋಕಸಭಾ ಚುನಾವಣೆಯಲ್ಲಿ ಧುಲೆಯಲ್ಲಿ ಕಾಂಗ್ರೆಸ್ 3,800 ಮತಗಳಿಂದ ಗೆಲ್ಲಲು ಮಲೇಗಾವ್ ಕ್ಷೇತ್ರದ 1.9 ಲಕ್ಷ ಮತಗಳು ಕಾರಣವಾಗಿತ್ತು. ಬಹುತೇಕ ಮುಸ್ಲಿಮರೇ ಪ್ರಾಬಲ್ಯ ಇರುವ ಈ ಕ್ಷೇತ್ರದಲ್ಲಿ ಹೇಗೆ ಮತ ಒಟ್ಟಾಗಿ ಕಾಂಗ್ರೆಸ್‌ಗೆ ಬಿದ್ದವು ಎನ್ನುವುದು ಈ ವಿಧಾನಸಭಾ ಚುನಾವಣೆಯಲ್ಲಿ ಬಹಳ ಚರ್ಚೆ ಆಗುತ್ತಿತ್ತು.
ಮರಾಠ ನಾಯಕ ಮನೋಜ್ ಜಾರಂಗೆ ಪಾಟೀಲ್ ಅವರ ಮೀಸಲಾತಿ ಹೋರಾಟದಿಂದ ಪಕ್ಷಕ್ಕೆ ಸಮಸ್ಯೆಯಾಗಬಹುದು ಎನ್ನುವುದು ಬಿಜೆಪಿಗೆ ಗೊತ್ತಿತ್ತು. ಈ ಕಾರಣಕ್ಕೆ ಹಲವು ಸಣ್ಣಪುಟ್ಟ ಜಾತಿಗಳನ್ನು ಒಗ್ಗೂಡಿಸಲು ಮುಂದಾಯಿತು. ವರದಿಗಳ ಪ್ರಕಾರ ಸುಮಾರು 8-15 ಮಂದಿ ಭಾಗಿಯಾಗಿರುವ ಸುಮಾರು 60 ಸಾವಿರಕ್ಕೂ ಹೆಚ್ಚು ಸಣ್ಣ ಸಣ್ಣ ಸಭೆಗಳನ್ನು ಆರ್‌ಎಸ್‌ಎಸ್ ಮಾಡಿತ್ತು.
ಗ್ರಾಮೀಣ ಗ್ರಾಮಗಳಲ್ಲಿ ಪ್ರವಚನ ನೀಡುವವರು, ಆಧ್ಯಾತ್ಮಿಕ ಉಪನ್ಯಾಸಗಳನ್ನು ನೀಡುವವರ ಮೂಲಕ ಹಿಂದೂ ಸಮುದಾಯವನ್ನು ವಿಭಜಿಸಿದರೆ ಅದು ಎಲ್ಲರಿಗೂ ಸಮಸ್ಯೆ ಆಗಬಹುದು ಎಂಬ ಸಂದೇಶವನ್ನು ರವಾನಿಸಲಾಯಿತು. ಆರ್‌ಎಸ್‌ಎಸ್ ಈ ಪ್ರಕ್ರಿಯೆಗೆ ಚಾಲನೆ ನೀಡಿದ ಬಳಿಕ ಧಾರ್ಮಿಕ ಮುಖಂಡರು ಬಿಜೆಪಿಗೆ ಮತ ಹಾಕುವಂತೆ ಹಲವು ಬಾರಿ ಬಹಿರಂಗವಾಗಿಯೇ ಕರೆ ನೀಡತೊಡಗಿದರು. ಜೈನ ಮುನಿಗಳು ಕೂಡ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕುವಂತೆ ಸಮುದಾಯಕ್ಕೆ ಕರೆ ನೀಡಿದ್ದರು.
ಉತ್ತರ ಪ್ರದೇಶ ಸಿಎಂ ಯೋಗಿ ಅದಿತ್ಯನಾಥ್ ಅವರು ತಮ್ಮ ಭಾಷಣದಲ್ಲಿ ಬಟೇಂಗೆ ತೋ ಕಟೇಂಗೆ (ವಿಭಜಿಸಿದರೆ ನಮ್ಮನ್ನು ಕತ್ತರಿಸಲಾಗುತ್ತದೆ) ಎಂದು ಹೇಳಿದರೆ ಪ್ರಧಾನಿ ಮೋದಿ ‘ಏಕ್ ಹೈ ತೋ ಸೇಫ್ ಹೈ'(ಒಗ್ಗಟ್ಟಾಗಿದ್ದರೆ ಸುರಕ್ಷಿತವಾಗಿರುತ್ತೇವೆ) ಎಂದು ಹೇಳುತ್ತಿದ್ದರು. ಮಹಿಳೆಯರನ್ನು ಗುರಿಯಾಗಿಸಿದ ಜಾರಿಗೆ ತಂದ ಲಾಡ್ಲಿ ಬೆಹೆನಾ, ವಿಪಕ್ಷದ ಒಳಗಿನ ಕಚ್ಚಾಟ ಸೇರಿದಂತೆ ಹಲವು ವಿಷಯಗಳು ಬಿಜೆಪಿ ವರವಾಗಿದ್ದರೂ ತಳಮಟ್ಟದಲ್ಲಿ ಆರ್‌ಎಸ್‌ಎಸ್ ಪ್ರಚಾರ ಬಿಜೆಪಿಗೆ ಬಲವನ್ನು ನೀಡಿತು.
ಮುಂಬೈ ದೇಶದ ಆರ್ಥಿಕ ರಾಜಧಾನಿ ಆಗಿರುವ ಕಾರಣ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ಕೈಗಾರಿಕೋದ್ಯಮಿಗಳನ್ನು ಹೇಗೆ ನಡೆಸಿಕೊಳ್ಳುತ್ತದೆ? ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳು ಇದ್ದಾಗ ಯಾವ ರೀತಿ ಮೂಲಸೌಕರ್ಯಗಳು ಅಭಿವೃದ್ಧಿಯಾದವು. ರಾಷ್ಟ್ರೀಯತೆಯನ್ನು ಬೆಳೆಸದಿದ್ದರೆ ಏನಾಗುತ್ತದೆ? ಬಾಂಗ್ಲಾದೇಶ ಹಿಂದೂಗಳಿಗೆ ಏನಾಗುತ್ತಿದೆ? ಇತ್ಯಾದಿ ವಿಚಾರಗಳನ್ನು ಮುಂದಿಟ್ಟುಕೊಂಡು ಆರ್‌ಎಸ್‌ಎಸ್ ಪ್ರಚಾರ ನಡೆಸುತ್ತಿತ್ತು.
ತಳಮಟ್ಟದಲ್ಲಿ ಆರ್‌ಎಸ್‌ಎಸ್ ಉತ್ತಮ ಕೆಲಸ ಮಾಡಿರುವುದು ಬಿಜೆಪಿ ಗೊತ್ತಾಗಿತ್ತು. ಈ ಕಾರಣಕ್ಕೆ ಮಹಾರಾಷ್ಟ್ರದ ಮತದಾನ ನಡೆದ ಕೆಲವೇ ಗಂಟೆಗಳ ನಂತರ ಫಡ್ನವಿಸ್ ಅವರು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಭೇಟಿ ಮಾಡಿದ್ದರು. ಚುನಾವಣಾ ಪ್ರಚಾರದ ಸಮಯದಲ್ಲಿ ಆರ್‌ಎಸ್‌ಎಸ್ ನಿರ್ವಹಿಸಿದ ಪಾತ್ರಕ್ಕೆ ಫಡ್ನವಿಸ್ ಧನ್ಯವಾದ ಅರ್ಪಿಸಲು ತೆರಳಿದ್ದರು ಎಂದು ವರದಿಯಾಗಿತ್ತು.