ಬದಲಾದ ಹವಮಾನದಿಂದಾಗಿ ಹುಡುಗರ ಹೇರ್‌ಸ್ಟೈಲ್ ಹಾಳಾಗುತ್ತದೆ. ಕೆಲವೊಂದು ಕ್ರಮಗಳನ್ನು ಅನುಸರಿಸಿದಲ್ಲಿ ನಾನಾ ಬಗೆಯ ಹೇರ್‌ಸ್ಟೈಲ್ ಮ್ಯಾನೇಜ್ ಮಾಡಬಹುದು. ಹಾಗೆಯೇ ಸೀಸನ್‍ನ ಸಂತಸಕ್ಕೆ ಸಾಥ್ ನೀಡುವ ಹುಡುಗರ ನಾನಾ ಬಗೆಯ ಹೇರ್‌ಸ್ಟೈಲ್ ಕಾಳಜಿ ಬಗ್ಗೆ ಇಲ್ಲಿದೆ ಸರಳ ಮಾಹಿತಿ.
ಜೆಲ್ ಕಡಿಮೆ ಬಳಸಿ
ಚಳಿಗಾಲದಲ್ಲಿ ಸಾಧ್ಯವಾದಷ್ಟು ಕೂದಲಿಗೆ ಕಡಿಮೆ ಹೇರ್‌ಜೆಲ್ ಬಳಸಿ. ಇದು ಕೂದಲನ್ನು ಮತ್ತಷ್ಟು ಒರಟಾಗಿಸುವುದನ್ನು ತಡೆಯುತ್ತದೆ. ಅನಿವಾರ್ಯತೆ ಎನಿಸಿದಾಗ ಮಾತ್ರ ಬಳಸಿ. ಪ್ರತಿನಿತ್ಯ ಬಳಸುವುದನ್ನು ಕಡಿಮೆ ಮಾಡಿ. ಎಕ್ಸ್‌ಪೈರಿ ಡೇಟ್ ನೋಡಿಕೊಂಡು ಬಳಸಿದರೆ ಉತ್ತಮ.
ವಾರಕ್ಕೊಮ್ಮೆ ತಲೆಗೆ ಎಣ್ಣೆ ಹಚ್ಚಿ
ಹುಡುಗರೂ ಕೂಡ ಕೂದಲ ಬಗ್ಗೆ ಕಾಳಜಿ ವಹಿಸಿದಾಗ ಮಾತ್ರ, ಅವರಿಗೆ ಬೇಕಾದ ಹೇರ್‌ಸ್ಟೈಲ್‌ಲನ್ನು ಮಾಡಿಕೊಳ್ಳಬಹುದು. ವಾರಕ್ಕೊಮ್ಮೆ ಕೊಬ್ಬರಿ ಅಥವಾ ಹರಳೆಣ್ಣೆಯನ್ನು ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿಕೊಂಡು ಹಚ್ಚಿಕೊಂಡರೆ ದೇಹ ಕೂಡ ತಂಪಾಗುತ್ತದೆ. ಕೂದಲು ಆರೋಗ್ಯಯುತವಾಗಿರುತ್ತದೆ.
ಹೆಲ್ಮೆಟ್ ಧರಿಸಿದಾಗ
ಪ್ರತಿನಿತ್ಯ ಹೆಲ್ಮೆಟ್ ಧರಿಸುವುದರಿಂದ ಯಾವುದೇ ಹೇರ್‌ಸ್ಟೈಲ್ ಮಾಡಿಕೊಂಡರೂ ಹಾಳಾಗಿ ಹೋಗುತ್ತದೆ. ಆದ್ದರಿಂದ ಹುಡುಗರು ಮನೆಯಿಂದ ಹೊರಡುವಾಗ ಜೊತೆಯಲ್ಲಿ ಕಾಟನ್ ಕ್ಲಾತನ್ನು ತಲೆಯ ಸುತ್ತ ಕಟ್ಟಿ. ನಂತರ ಹೆಲ್ಮೆಟ್ ವೇರ್ ಮಾಡಿ. ನೀವು ಸ್ಥಳವನ್ನು ತಲುಪಿದ ನಂತರ ಕ್ಲಾತ್ ತೆಗೆಯಿರಿ. ಸಾಧ್ಯವಾದಲ್ಲಿ ಬಾಚಿ ಕೊಳ್ಳಿ.
ಧ್ಯಾನ ಮಾಡಿ
ಇಂದಿನ ಬಿಝಿ ಲೈಫ್‍ನಲ್ಲಿ ಪದೇ ಪದೇ ಟೆನ್ಷನ್ ತೆಗೆದುಕೊಳ್ಳುವುದರಿಂದ ಕೂದಲು ಉದುರಿ, ಮಧ್ಯ ವಯಸ್ಸಿನಲ್ಲಿಯೇ ಬೋಳಾಗುತ್ತದೆ. ಆದ್ದರಿಂದ ಬೆಳಗ್ಗೆ ಕನಿಷ್ಟ 20 ನಿಮಿಷವಾದರೂ ಧ್ಯಾನ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದರಿಂದ ನರಗಳು ಬಲಿಷ್ಟಗೊಳ್ಳುವುದರಿಂದ ಆರೋಗ್ಯ, ಆಯಸ್ಸು, ಸೌಂದರ್ಯ ಎಲ್ಲ ವೃದ್ಧಿಸುತ್ತದೆ. ಕೂದಲು ಕೂಡ ಉದುರುವುದು ನಿಲ್ಲುತ್ತದೆ.
ದಾಸವಾಳ ಬಳಕೆ
ದಾಸವಾಳದ ಬಳಕೆಯಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ. ಜೊತೆಗೆ ಉದ್ದ ಹಾಗೂ ಕಾಂತಿಯತವಾಗಿ ಬೆಳೆಯುತ್ತದೆ. 15 ದಿನಕ್ಕೊಮ್ಮೆಯಾದರೂ ದಾಸವಾಳವನ್ನು ತಲೆಗೆ ಹಚ್ಚಿಕೊಂಡಾಗ ನಮಗೆ ಬೇಕಾದ ರೀತಿಯಲ್ಲಿ ಸೆಟ್ ಮಾಡಿಕೊಳ್ಳಲು ಸುಲಭವಾಗುತ್ತದೆ. ಇದೇ ಕಾರಣಕ್ಕಾಗಿ ದಾಸವಾಳವನ್ನು ಆಯುರ್ವೇದ ಶಾಂಪೂ ಅಥವಾ ಕೂದಲಿಗೆ ಉಪಯೋಗಿಸುವ ಎಣ್ಣೆಯಲ್ಲಿ ಪ್ರಮುಖವಾಗಿ ಬಳಸಲಾಗುತ್ತದೆ.