ಶಿವಮೊಗ್ಗ: ಅಯ್ಯೋ.. ಡೋಂಟ್ ವರಿ ಬಾಬಾ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳುವ ಮೂಲಕ ಸಚಿವ ಡಿ.ಕೆ.ಶಿವಕುಮಾರ್ ಅವರ ತಂತ್ರಕ್ಕೆ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಚುನಾವಣೆಯ ಕಡೆ ಗಳಿಗೆಯಲ್ಲಿ ಬಂದು ಹಗುರವಾಗಿ ಮಾತಾಡಿದರೆ ಏನು ಆಗಲ್ಲ. ಡೈರಿ ಬಗ್ಗೆ ತಾವು ಹೇಳುತ್ತಿರುವುದು ಸುಳ್ಳು ಅಂತ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಗೊತ್ತಿದೆ. ಆದರೂ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ರಾಜಕೀಯ ಅಸ್ತಿತ್ವದ ಪ್ರಶ್ನೆಯಾಗಿರುವ ಶಿವಮೊಗ್ಗ ಕ್ಷೇತ್ರ
ನಮ್ಮ ಕೆಲಸವನ್ನು ನಾವು ಮಾಡುತ್ತೇವೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಪುತ್ರ ಬಿ.ವೈ. ರಾಘವೇಂದ್ರ ಅವರು ಒಂದೂವರೆ ಲಕ್ಷಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಗೆಲುವು ಸಾಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಗೆಲುವಿನ ನಾಗಲೋಟಕ್ಕೆ ಬ್ರೇಕ್ ಹಾಕಲು ಸಿಎಂ ಕುಮಾರಸ್ವಾಮಿ ಮತ್ತು ಡಿಕೆ ಬ್ರದರ್ಸ್ ತಂತ್ರಗಾರಿಕೆ ರೂಪಿಸಿದ್ದು, ಭದ್ರಾವತಿಯಲ್ಲಿ ಮೊದಲ ಯತ್ನದಲ್ಲೇ ಯಶಸ್ವಿಯಾಗಿದ್ದಾರೆ. ಶಿವಮೊಗ್ಗದ ಭದ್ರಾವತಿಯಲ್ಲಿ ಬಂಡಾಯ ಶಮನವಾಗಿದೆ. ಹಾವು ಮುಂಗುಸಿಯಂತಿದ್ದ ಭದ್ರಾವತಿಯ ಕಾಂಗ್ರೆಸ್ ಶಾಸಕ ಸಂಗಮೇಶ್, ಜೆಡಿಎಸ್‍ನ ಅಪ್ಪಾಜಿ ಗೌಡ ದಶಕಗಳ ಬಳಿಕ ಒಂದಾಗಿದ್ದಾರೆ. ಇಬ್ಬರ ಮಧ್ಯೆ ಇದ್ದ ಮುನಿಸಿಗೆ ಟ್ರಬಲ್ ಶೂಟರ್, ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಇತಿಶ್ರೀ ಹಾಡಿದ್ದಾರೆ. ಈ ಮೂಲಕ ಇಬ್ಬರು ನಾಯಕರನ್ನು ಅಕ್ಕ ಪಕ್ಕದಲ್ಲಿ ಕೂರಿಸಿಕೊಂಡು ಶುಕ್ರವಾರ ರಾತ್ರಿ ಸುದ್ದಿಗೋಷ್ಠಿ ನಡೆಸಿದ ಸಚಿವರು, ಇನ್ನು ಮುಂದೆ ಶಾಸಕ ಸಂಗಮೇಶ್ ಹಾಗೂ ಅಪ್ಪಾಜಿ ಗೌಡ ಜಂಟಿಯಾಗಿ ಪ್ರಚಾರ ಮಾಡಲಿದ್ದಾರೆ ಎಂದು ತಿಳಿಸಿದ್ದರು.