Connect with us

Districts

ರಾಜಕೀಯ ಅಸ್ತಿತ್ವದ ಪ್ರಶ್ನೆಯಾಗಿರುವ ಶಿವಮೊಗ್ಗ ಕ್ಷೇತ್ರ

Published

on

– ಹಾಲಸ್ವಾಮಿ ಆರ್.ಎಸ್.

ಶಿವಮೊಗ್ಗ: ರಾಜ್ಯದ ಪ್ರತಿಷ್ಠಿತ ಕಣಗಳಲ್ಲಿ ಸದಾ ಮೊದಲ ಸಾಲಿನಲ್ಲೇ ಇರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆ ಈ ಬಾರಿ ಬರೀ ಸೋಲು-ಗೆಲುವಿಗಷ್ಟೇ ಸೀಮಿತವಾಗದೆ ರಾಜಕೀಯ ಭವಿಷ್ಯವನ್ನು ತನ್ನೊಡಲಲ್ಲಿ ಇಟ್ಟುಕೊಂಡಿದೆ.

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಸೀತಾರಾಮ ಕೇಸರಿ ಅವರು 1992ರಲ್ಲಿ ಮುಖ್ಯಮಂತ್ರಿ ಆಗಿದ್ದ ಬಂಗಾರಪ್ಪ ಅವರನ್ನು ಕೆಳಗಿಳಿಸಿ ವೀರಪ್ಪ ಮೂಯ್ಲಿ ಅವರನ್ನು ರಾಜ್ಯದ ಮುಖ್ಯಮಂತ್ರಿ ಮಾಡಿದ್ದರು. ಇದರಿಂದ ಕುದ್ದು ಹೋದ ಬಂಗಾರಪ್ಪ ಕಾಂಗ್ರೆಸ್ ತೊರೆದು ಕರ್ನಾಟಕ ಕಾಂಗ್ರೆಸ್ ಪಾರ್ಟಿ ಸ್ಥಾಪಿಸಿದರು. ಈ ಕೆಸಿಪಿ ಹೊಡೆತಕ್ಕೆ 1994ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತತ್ತರಿಸಿ ಹೋಯಿತು. ಮತ್ತೆ ಕಾಂಗ್ರೆಸ್ ಸೇರಿದ ಬಂಗಾರಪ್ಪ 1997ರಲ್ಲಿ ಮತ್ತೆ ಕರ್ನಾಟಕ ವಿಕಾಸ ಪಾರ್ಟಿ ಸ್ಥಾಪಿಸಿದರು. ನಂತರ ಇದನ್ನೂ ಕಾಂಗ್ರೆಸ್ ನಲ್ಲಿ ವಿಲೀನಗೊಳಿಸಿದರು. 2004ರಲ್ಲಿ ಮತ್ತೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ಹೀಗೆ ಬಂಗಾರಪ್ಪ ಅವರು ನಿರಂತರವಾಗಿ ಕಾಂಗ್ರೆಸ್ ಪಕ್ಷದ ಜೊತೆ ಹಾವು ಏಣಿ ಆಟ ಆಡಿದ ಪರಿಣಾಮವಾಗಿ, ನಂತರ ನಾಯಕತ್ವದ ಕೊರತೆ, ಒಳಸುಳಿಗಳ ಪರಿಣಾಮವಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಇಂದು ಕಾಂಗ್ರೆಸ್ ನಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳೇ ಇಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ, ಕೆಪಿಸಿಸಿಯ ಡಜನ್ ಗಟ್ಟಲೆ ನಾಯಕರು ಇಂದು ಬಂಗಾರಪ್ಪ ಅವರ ಪುತ್ರ ಮಧು ಬಂಗಾರಪ್ಪ ಪರವಾಗಿ ಕಣದಲ್ಲಿ ಟೊಂಕಕಟ್ಟಿ ನಿಂತಿದ್ದಾರೆ.

ಇದುವರೆಗೂ ನಾಲ್ಕು ಚುನಾವಣೆ ಎದುರಿಸಿರುವ ಮಧು ಬಂಗಾರಪ್ಪ ಮೂರರಲ್ಲಿ ಸೋತಿದ್ದಾರೆ. ಇದು ಇವರ ಐದನೇ ಚುನಾವಣೆ. ಕಳೆದ ವಿಧಾನಸಭಾ ಚುನಾವಣೆ, ಲೋಕಸಭೆಗೆ ನಡೆದ ಉಪ ಚುನಾವಣೆಯಲ್ಲಿ ಸೋತಿದ್ದಾರೆ. ಸೋಲಿನ ಹ್ಯಾಟ್ರಿಕ್ ಆಗುವುದಿಲ್ಲ ಎಂಬುದು ಅವರ ವಿಶ್ವಾಸ.

ಮೈತ್ರಿ ಉಳಿಯಲು ಮಧು ಗೆಲುವು ಅನಿವಾರ್ಯ ಎಂಬ ಮಾತನ್ನು ಸಿಎಂ ಕುಮಾರಸ್ವಾಮಿ ಪರೋಕ್ಷವಾಗಿ ಹೇಳಿದ್ದಾರೆ. ರಾಜಕೀಯದಲ್ಲಿ ಯಾವುದೇ ಮೈತ್ರಿ ಕ್ಷಣಿಕವೂ ಅಲ್ಲ- ಶಾಶ್ವತವೂ ಅಲ್ಲ ಎನ್ನುವಂತೆ ಸದ್ಯದ ಪರಿಸ್ಥಿತಿಯಲ್ಲಿ ಜೆಡಿಎಸ್ ನ ಮಧು ಬಂಗಾರಪ್ಪ ಅವರಿಗಾಗಿ ವೀರಾವೇಶದಿಂದ ಹೋರಾಡುವ ಅನಿವಾರ್ಯತೆಯಲ್ಲಿ ಕಾಂಗ್ರೆಸ್ ಸಿಲುಕಿದೆ. ಮೈತ್ರಿ ಪಕ್ಷಗಳ ನಡುವಿನ ಭಿನ್ನಮತ ಢಾಳಾಗಿ ಬಹಿರಂಗ ಆಗದಿದ್ದರೂ ಒಳಗಿನ ಕಿಚ್ಚು ಹಾಗೇ ಇದೆ. ಮುಖ್ಯವಾಗಿ ಭದ್ರಾವತಿ, ತೀರ್ಥಹಳ್ಳಿ ಕ್ಷೇತ್ರಗಳಲ್ಲಿ ಇಂಥ ಭಿನ್ನತೆಯ ನಡುವೆಯೇ ಅಭ್ಯರ್ಥಿ ಗೆಲುವಿಗಾಗಿ ಕೆಲಸ ನಡೆಯುತ್ತಿದೆ.

ಕಾಂಗ್ರೆಸ್ ನಲ್ಲಿ ಅಭ್ಯರ್ಥಿಗಳೇ ಸಿಗದ ಪರಿಸ್ಥಿತಿಯಲ್ಲಿ ಮಧು ಕೊರಳಿಗೆ ಹಾರ ಹಾಕಲಾಗಿದೆ. ಒಂದು ಲೆಕ್ಕದಲ್ಲಿ ಮಧು ಬಂಗಾರಪ್ಪ ಮೈತ್ರಿ ಕೂಟದ ಸಾಂದರ್ಭಿಕ ಶಿಶು ಎಂದರೆ ತಪ್ಪಾಗದು. ಈ ಶಿಶುವಿನ ಗೆಲವು ಮೈತ್ರಿಯ ಗೆಲವು- ಜಿಲ್ಲೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಗೆಲವು. ಸತತ ಮೂರು ಸೋಲುಗಳಿಂದ ಕಂಗೆಟ್ಟಿರುವ ಮಧು ಬಂಗಾರಪ್ಪ ಅವರ ರಾಜಕೀಯ ಭವಿಷ್ಯವನ್ನು ಈ ಚುನಾವಣೆ ನಿರ್ಣಯ ಮಾಡಲಿದೆ. ಈ ಎಲ್ಲಾ ಕಾರಣಗಳಿಂದ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಗೆಲ್ಲಬೇಕಿದೆ. ಗೆಲ್ಲುವ ವಿಶ್ವಾಸ ಮೂಡಿಸಲು ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್, ಸಿಎಂ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡ ಸೇರಿಂದತೆ ರಣಧೀರರ ಪಡೆಯೇ ಶಿವಮೊಗ್ಗದಲ್ಲಿ ನೆಲೆಯೂರಿದೆ. ಈ ಪಡೆ ರಣತಂತ್ರಗಳು ಮತಗಳಾಗಿ ಪರಿವರ್ತನೆ ಆಗಬೇಕಷ್ಟೇ.

ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರ ಗೆಲುವು- ಸೋಲು ಅವರ ತಂದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಭವಿಷ್ಯ ನಿರ್ಧರಿಸಲಿದೆ. ಬಿಜೆಪಿಗಿಂತ ಈ ಗೆಲುವು ಯಡಿಯೂರಪ್ಪ ಅವರಿಗೆ ಅನಿವಾರ್ಯವಾಗಿದೆ. ಸರ್ಕಾರ ರಚನೆ ಮಾಡಲು ಹೋಗಿ ಕೈ ಸುಟ್ಟುಕೊಂಡ ಯಡಿಯೂರಪ್ಪ ಪಕ್ಷದ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಚುನಾವಣೆಯಲ್ಲಿ ಪಕ್ಷ ಎಡವಿದರೆ ಅದರ ಹೊಣೆ ಯಡಿಯೂರಪ್ಪ ಒಬ್ಬರ ತಲೆಗೆ ಕಟ್ಟಲು ವೇದಿಕೆ ಸಜ್ಜಾಗಿದೆ. ಗೆದ್ದರೆ ಸಾಮೂಹಿಕ ನಾಯಕತ್ವ- ಸೋತರೆ ಪಕ್ಷದ ರಾಜ್ಯಾಧ್ಯಕ್ಷರೇ ಹೊಣೆ ಎನ್ನುವುದು ಬಿಜೆಪಿಯ ಸಾಂಪ್ರದಾಯಿಕ ಪದ್ಧತಿ. ಪಕ್ಷದ ದೆಹಲಿ ನಾಯಕರ ಇತ್ತೀಚಿನ ವರ್ತನೆಯಿಂದ ಇದನ್ನು ಯಡಿಯೂರಪ್ಪ ಮನದಟ್ಟು ಮಾಡಿಕೊಂಡಿದ್ದಾರೆ. ರಾಜ್ಯಾದ್ಯಂತ ಪಕ್ಷ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಬೇಕು ಹಾಗೇ ತಮ್ಮ ಮಗ ಬಿ.ವೈ.ರಾಘವೇಂದ್ರ ಕೂಡ ಶಿವಮೊಗ್ಗದಲ್ಲಿ ಗೆಲ್ಲಬೇಕು ಎಂಬ ಅನಿವಾರ್ಯತೆಯಲ್ಲಿ ಯಡಿಯೂರಪ್ಪ ಇದ್ದಾರೆ.

ಈ ಬಾರಿ ಮಗನೂ ಗೆಲ್ಲುತ್ತಾನೆ, ರಾಜ್ಯದಲ್ಲೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲ್ಲುತ್ತೆ, ಮೈತ್ರಿ ಖತಂಗೊಂಡು ನಾನು ಮತ್ತೊಮ್ಮೆ ಮುಖ್ಯಮಂತ್ರಿ ಆಗುವ ಸುವರ್ಣ ಅವಕಾಶ ಕಣ್ಮುಂದೆ ಇದೆ ಎಂಬ ಆಶಾವಾದದಲ್ಲಿ 76 ವರ್ಷದ ಬಿ.ಎಸ್.ಯಡಿಯೂರಪ್ಪ ಇದ್ದಾರೆ. ಯಡಿಯೂರಪ್ಪ ಅವರ ಕುಟುಂಬ ರಾಜಕಾರಣ ಬಿಜೆಪಿಯ ಒಂದು ವರ್ಗದ ಅಸಹನೆಗೆ ಕಾರಣವಾಗಿದೆ. ಮತ್ತೆ ಸಿಎಂ ಆಗುವ ಬಯಕೆ, ಮಗನ ರಾಜಕೀಯ ಭವಿಷ್ಯ ರೂಪಿಸುವ ಕನಸು- ಈ ಎಲ್ಲಾ ಕಾರಣಗಳಿಂದ ಯಡಿಯೂರಪ್ಪ ಈ ಚುನಾವಣೆಯಲ್ಲಿ ತಮ್ಮ ಎಲ್ಲಾ ರೀತಿಯ ತಂತ್ರ-ಮಂತ್ರಗಳನ್ನು ಪ್ರಯೋಗಿಸಲು ಸಜ್ಜಾಗಿದ್ದಾರೆ.

ಇನ್ನು ಕ್ಷೇತ್ರದ ಸಮಸ್ಯೆಗಳ ವಿಷಯಕ್ಕೆ ಬಂದರೆ ಬಗರ್ ಹುಕುಂ, ಅರಣ್ಯ ಹಕ್ಕು, ವಿಐಎಸ್ ಎಲ್, ಎಂಪಿಎಂ, ನೀರಾವರಿ ಯೋಜನೆಗಳು, ಮಂಗನಕಾಯಿಲೆ ಇತ್ಯಾದಿ ವಿಷಯಗಳ ಬಗ್ಗೆ ಎರಡೂ ಪಕ್ಷಗಳು ತಮಗೆ ಬೇಕಾದಂತೆ ವ್ಯಾಖ್ಯಾನ ಮಾಡುತ್ತಿವೆ. ಇಂಥ ಇನ್ನೂ ಹತ್ತಾರು ವಿಷಯಗಳಿಗೆ ಕೇಂದ್ರ- ರಾಜ್ಯ ಸರ್ಕಾರಗಳೆರಡೂ ಹೊಣೆಯಾಗಿವೆ. ಈ ಸಮಸ್ಯೆಗಳು ತಾರಕಕ್ಕೇರಲು ಎಲ್ಲಾ ಪಕ್ಷಗಳ ಕೊಡುಗೆಯೂ ಇದೆ.

ಸ್ವಾತಂತ್ರ್ಯಾ ನಂತರ ಇದೂವರೆಗೂ ಕ್ಷೇತ್ರದಲ್ಲಿ 18 ಚುನಾವಣೆಗಳು ನಡೆದಿವೆ. 1991ರ ಚುನಾವಣೆಯವರೆಗೂ ಕ್ಷೇತ್ರ ಕಾಂಗ್ರೆಸ್ ನ ಭದ್ರಕೋಟೆ. ಇಲ್ಲಿ ಹತ್ತು ಚುನಾವಣೆಗಳಲ್ಲಿ ಕಾಂಗ್ರೆಸ್ ಗೆದ್ದಿದೆ. ಇನ್ನು ಇತ್ತೀಚಿನ ವರ್ಷಗಳಲ್ಲಿ ಅಂದರೆ 1998ರಿಂದ ಈಚೆಗೆ ನಡೆದ ಏಳು ಚುನಾವಣೆಗಳಲ್ಲಿ ಬಿಜೆಪಿ ಆರು ಚುನಾವಣೆಗಳನ್ನು ಗೆದ್ದಿದೆ. ಕೊನೆ ಮೂರು ಚುನಾವಣೆಗಳಲ್ಲೂ ಬಿಜೆಪಿ ನಿರಂತರವಾಗಿ ಗೆಲ್ಲುತ್ತಲೇ ಬಂದಿದೆ. ಆದರೆ, ಕಳೆದ ವರ್ಷ ನಡೆದ ಉಪಚುನಾವಣೆಯಲ್ಲಿ ಗೆಲುವಿನ ಅಂತರ 50 ಸಾವಿರಕ್ಕೆ ಇಳಿದದ್ದು, ಬಿಜೆಪಿಯನ್ನು ಚಿಂತೆಗೀಡು ಮಾಡಿದೆ. ಈ ಗೆಲುವನ್ನೂ ಸೋಲೆಂದೇ ಸ್ವೀಕರಿಸಿ ಬಿಜೆಪಿ ಕೆಲಸ ಮಾಡಿದೆ. ಚುನಾವಣೆ ಗೆಲುವನ್ನೇ ಗುರಿ ಮಾಡಿಕೊಂಡು ಈ ಮಟ್ಟಿಗಿನ ಬದ್ಧತೆಯ ಕೆಲಸ ಮೈತ್ರಿಕೂಟದಲ್ಲಿ ಆಗಿಲ್ಲ. ಈಗ ಮತ್ತೊಮ್ಮೆ ಮೈತ್ರಿ- ಬಿಜೆಪಿ ಅಭ್ಯರ್ಥಿಗಳು ಮುಖಾಮುಖಿಯಾಗಿದ್ದಾರೆ.

ಹೀಗೆ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಫ್ಯಾಮಿಲಿಯ ಹಣಾಹಣಿಗೆ ವೇದಿಕೆಯಾಗಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರ ದೇಶದ ಗಮನ ಸೆಳೆದಿದೆ. ಕೊನೆಯ ಗಳಿಗೆಯ ಆಟಕ್ಕೆ ಎರಡೂ ಬಣಗಳು ಸಜ್ಜಾಗಿವೆ. ಇನ್ನು ಮತದಾನ- ಫಲಿತಾಂಶದತ್ತ ಕುತೂಹಲ ಮೂಡಿದೆ.