ಪರಿಷತ್‌ನಲ್ಲಿ ಡಿಕೆಶಿ ಗಡ್ಡದ ಬಗ್ಗೆ ಹಾಸ್ಯಭರಿತ ಚರ್ಚೆ

Public TV
2 Min Read
DK SHIVAKUMAR BEARD

ಬೆಂಗಳೂರು: ವಿಧಾನ ಪರಿಷತ್ ನಲ್ಲಿಂದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಗಡ್ಡದ ಬಗ್ಗೆ ಹಾಸ್ಯಭರಿತ ಚರ್ಚೆ, ಕಿಚಾಯಿಸುವ ಪ್ರಸಂಗ ನಡೆಯಿತು.

ಬಜೆಟ್ ಮೇಲಿನ ಚರ್ಚೆ ವೇಳೆ ಕಾಂಗ್ರೆಸ್ (Congress) ಸದಸ್ಯ ಯು.ಬಿ ವೆಂಕಟೇಶ್, ಬಿಜೆಪಿ ಅವಧಿಯಲ್ಲಿ ಮಾಡಿದ ಸಾಲಕ್ಕೆ ನಾವು ಬಡ್ಡಿ ಕಟ್ಟುತ್ತಿದ್ದೇವೆ. ಶಕ್ತಿ ಯೋಜನೆಯಲ್ಲಿ 150 ಮಹಿಳೆಯರು ಬಸ್ ನಲ್ಲಿ ಉಚಿತವಾಗಿ ಓಡಾಡಿದ್ದಾರೆ. ಪಂಚದಲ್ಲಿ ಇಂತಹ ದೊಡ್ಡ ಗ್ಯಾರಂಟಿ ಯೋಜನೆ ಪ್ರಯೋಗ ಯಾರೂ ಮಾಡಿಲ್ಲ. ನಮ್ಮ ಗ್ಯಾರಂಟಿ ಹೇಗೆ ಕೊಟ್ಟರು ಅಂತ ಬೇರೆ ದೇಶದ ವಿವಿ ವಿದ್ಯಾರ್ಥಿಗಳು ಅಧ್ಯಯನ ಮಾಡ್ತಿದ್ದಾರೆ ಎಂದರು‌.

BASAVARAJ HORATTI

ಈ ವೇಳೆ ಮಾತಾಡಿದ ಸಭಾಪತಿ ಹೊರಟ್ಟಿ (Basavaraj Horatti), ಗ್ಯಾರಂಟಿ ಯೋಜನೆ ಕೊಟ್ಟ ಡಿಸಿಎಂಗೆ ಡಾಕ್ಟರೇಟ್ ಕೊಡಬೇಕು ಎಂದರು. ಸಭಾಪತಿ ಮಾತಿಗೆ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ಮಾತಾಡಿ, ಡಿ.ಕೆ ಶಿವಕುಮಾರ್ ಗಡ್ಡದ ಬಗ್ಗೆ ಪ್ರಸ್ತಾಪ ಮಾಡಿದ್ರು. ಈಗ ಎಲ್ಲರ ಕುತೂಹಲ ಇರೋದು ಡಿಕೆಶಿ ಯಾಕೆ ಗಡ್ಡ ಬಿಟ್ಟರು? ಅಂತ. ಡಿಕೆಶಿ ಯಾಕೆ ಗಡ್ಡ ಬಿಟ್ಟರು, ಯಾವಾಗ ಗಡ್ಡ ತೆಗೆಯುತ್ತಾರೆ ಎಂದು ಪ್ರಶ್ನೆ ಮಾಡಿದರು.

ಈ ವೇಳೆ ಸದನದಲ್ಲಿ ಡಿ.ಕೆ ಶಿವಕುಮಾರ್ (D.K Shivakumar) ಇದ್ದರು. ಪೂಜಾರಿ ಮಾತಿಗೆ ನಕ್ಕು ಸುಮ್ಮನೆ ಕುಳಿತಿದ್ದರು. ಮಾತು ಮುಂದುವರಿಸಿದ ಪೂಜಾರಿ, ಡಿ.ಕೆ ಶಿವಕುಮಾರ್ ಯಾವಾಗ ಗಡ್ಡ ತೆಗೆಯುತ್ತಾರೆ ಎಂದು ಹೇಳಬೇಕು ಎಂದು ಮತ್ತೆ ಕಿಚಾಯಿಸಿದರು. ಈ ವೇಳೆ ಮಧ್ಯೆ ಪ್ರವೇಶ ಮಾಡಿದ ಬಿಜೆಪಿ ಸಚೇತಕ ರವಿಕುಮಾರ್, ಡಿಕೆಶಿ ಸಿಎಂ ಆಗೋಕೆ ಗಡ್ಡ ಬಿಟ್ಟಿದ್ದಾರೆ. ಸಿಎಂ ಆದ ಮೇಲೆ ಗಡ್ಡ ತೆಗೆಯುತ್ತಾರೆ. ಆದರೆ ಯಾವಾಗ ಸಿಎಂ ಆಗ್ತಾರೆ ಅನ್ನೋದೇ ಅವರಿಗೆ ಚಿಂತೆ ಎಂದು ಕಿಚಾಯಿಸಿದರು. ಇದನ್ನೂ ಓದಿ: ಹ್ಯಾರಿಸ್‍ಗೆ ಸಂಕಷ್ಟ – ಚುನಾವಣಾ ತಕರಾರು ಅರ್ಜಿ ವಿಚಾರಣೆಗೆ ಹೈಕೋರ್ಟ್ ಅಸ್ತು

VIDHANAPARISHAD

ರವಿಕುಮಾರ್ ಮಾತಿಗೆ ಉಮಾಶ್ರೀ (Umashree) ಕೌಂಟರ್ ಕೊಟ್ಟರು. ಡಿಕೆ ಶಿವಕುಮಾರ್ ರಾಜ್ಯ ಸುತ್ತಿ ಸಮಯ ಇಲ್ಲದೆ ಇರೋದಕ್ಕೆ ಗಡ್ಡ ತೆಗೆಯಲು ಆಗಿಲ್ಲ. ಡಿಕೆ ಶಿವಕುಮಾರ್ ಗಡ್ದದ ಮೇಲೆ ನಿಮಗ್ಯಾಕೆ ಕುತೂಹಲ. ಮೋದಿ ಗಡ್ಡ ಬಿಟ್ಟಿದ್ದಾರೆ. ಅದು ಯಾಕೆ ಅಂತ ಮೊದಲು ಕೇಳಿ ಎಂದರು. ಉಮಾಶ್ರೀ ಮಾತಿಗೆ ಸಭಾಪತಿ ಹಾಸ್ಯ ಮಾಡಿ ನಿನಗ್ಯಾಕಮ್ಮ ಗಡ್ಡದ ವಿಷಯ ಎಂದರು. ಹೀಗೆ ಸದನದಲ್ಲಿ ಡಿಕೆಶಿ ಗಡ್ಡದ ಬಗ್ಗೆ ಹಾಸ್ಯ ಭರಿತ ಚರ್ಚೆ ನಡೀತು. ಆದರೆ ತಮ್ಮ ಗಡ್ಡದ ಚರ್ಚೆಗೆ ಡಿ.ಕೆ ಶಿವಕುಮಾರ್ ಮಾತ್ರ ಯಾವುದೇ ಪ್ರತಿಕ್ರಿಯೆ ಕೊಡಲಿಲ್ಲ.

Share This Article