ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಹಣಕಾಸು ಇಲಾಖೆಯ ಪತ್ರ ಸೋರಿಕೆ(Finance Department Letter Leak) ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(DK Shivakumar) ಅವರೇ ಉದ್ದೇಶಪೂರ್ವಕವಾಗಿ ಆ ಪತ್ರವನ್ನು ಲೀಕ್ ಮಾಡಿಸಿದ್ದಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್(R Ashoka) ಗಂಭೀರ ಆರೋಪ ಮಾಡಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಆಂತರಿಕ ತಿಕ್ಕಾಟ ಹಾಗೂ ಆರ್ಥಿಕ ವೈಫಲ್ಯವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಹಣಕಾಸು ಇಲಾಖೆಯ ಆ ಪತ್ರ ಹೊರಬರುತ್ತಿದ್ದಂತೆಯೇ ಈ ಸರ್ಕಾರದ ಮಾನ-ಮರ್ಯಾದೆ ಸಂಪೂರ್ಣವಾಗಿ ಕಳೆದುಹೋಗಿದೆ. ಸಿಎಂ ಅವರು ಇದೊಂದು ಸಾಮಾನ್ಯ ಸಲಹಾ ಪತ್ರವೆಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೆ, ಸರ್ಕಾರಕ್ಕೆ ಹಾಗೂ ಉನ್ನತ ಮಟ್ಟದ ನಾಯಕರಿಗೆ ಗೊತ್ತಿಲ್ಲದೆ ಇಲಾಖೆಯ ಕಾರ್ಯದರ್ಶಿ ಇಂತಹ ಪತ್ರವನ್ನು ಬಿಡುಗಡೆ ಮಾಡಲು ಸಾಧ್ಯವೇ? ಎಂದು ಅಶೋಕ್ ಪ್ರಶ್ನಿಸಿದರು. ಇದನ್ನೂ ಓದಿ: ವಿಟಿಯು ಖಜಾನೆಯಲ್ಲಿರೋ 610 ಕೋಟಿ ಮೇಲೆ ರಾಜ್ಯ ಸರ್ಕಾರದ ಕಣ್ಣು – 250 ಕೋಟಿ ನೀಡುವಂತೆ ಸಿಎಸ್ ಪತ್ರ
ಸಿದ್ದರಾಮಯ್ಯ(Siddaramaiah) ಅವರು ಅಧಿಕಾರದಲ್ಲಿದ್ದಾಗ ಇಂತಹ ಪತ್ರಗಳು ಏಕೆ ಹೊರಬರಲಿಲ್ಲ ಅಥವಾ ಲೀಕ್ ಆಗಲಿಲ್ಲ? ಈ ಪತ್ರವನ್ನು ಉದ್ದೇಶಪೂರ್ವಕವಾಗಿ ಲೀಕ್ ಮಾಡಿಸಿರುವುದೇ ಸಿಎಂ ಡಿ.ಕೆ. ಶಿವಕುಮಾರ್. ಸಿದ್ದರಾಮಯ್ಯ ಅವರು ಖಜಾನೆ ಖಾಲಿ ಮಾಡಿ ನಮಗೆ ‘ಚೊಂಬು’ ನೀಡಿ ಹೋಗಿದ್ದಾರೆ, ಹಿಂದಿನ ಆಡಳಿತದಲ್ಲಿ ಎಲ್ಲವನ್ನೂ ಲೂಟಿ ಮಾಡಲಾಗಿದೆ ಎಂದು ಜಗತ್ತಿಗೆ ತೋರಿಸುವುದು ಡಿಕೆಶಿಯವರ ಹುನ್ನಾರ ಎಂದು ಆರೋಪಿಸಿದರು.
ತಾವು ಹೊಸದಾಗಿ ಬಂದು ಅನೇಕ ಯೋಜನೆಗಳನ್ನು ಘೋಷಿಸಲು ಸಿದ್ಧರಿದ್ದರೂ, ಖಜಾನೆಯಲ್ಲಿ ಹಣವೇ ಇಲ್ಲ ಎಂಬ ನೆಪ ಹೇಳಿ ತಮ್ಮನ್ನು ತಾವು ಸೇಫ್ ಮಾಡಿಕೊಳ್ಳಲು ಡಿಕೆಶಿ ಈ ತಂತ್ರ ರೂಪಿಸಿದ್ದಾರೆ. ಸಿದ್ದರಾಮಯ್ಯ ಅವರೇ ಎಲ್ಲವನ್ನೂ ಖಾಲಿ ಮಾಡಿದ ‘ವಿಲನ್’ ಎಂದು ಬಿಂಬಿಸಲು ಹಣಕಾಸು ಕಾರ್ಯದರ್ಶಿಯ ಮೂಲಕ ಅಥವಾ ನೇರವಾಗಿ ಸಿಎಂ ಕಚೇರಿಯಿಂದಲೇ ಈ ಪತ್ರವನ್ನು ಸೋರಿಕೆ ಮಾಡಲಾಗಿದೆ. ಇದು ಸಿದ್ದರಾಮಯ್ಯ ಅವರಿಗೆ ನೇರವಾಗಿ ಅಂಟಿದ ಕಪ್ಪುಚುಕ್ಕೆ ಹಾಗೂ ತೀವ್ರ ಮುಜುಗರ ತಂದಿಟ್ಟ ಸಂಗತಿ ಎಂದು ಆರ್. ಅಶೋಕ್ ಲೇವಡಿ ಮಾಡಿದರು.

