– ಪೊಲೀಸ್ ಇಲಾಖೆ ಚಟುವಟಿಕೆಗಳಿಗೆ ಸಿಎಸ್ಆರ್ ನಿಧಿ ಬಳಕೆಗೆ ಅವಕಾಶ ಕಲ್ಪಿಸಿ
ನವದೆಹಲಿ: ಎರಡು ಹೆಚ್ಚುವರಿ ಭಾರತೀಯ ರಿಸರ್ವ್ ಬೆಟಾಲಿಯನ್ಸ್ ಸೃಷ್ಟಿ, ಪೊಲೀಸ್ ಇಲಾಖೆ ಚಟುವಟಿಕೆಗಳಿಗೆ ಸಿಎಸ್ಆರ್ ನಿಧಿ ಬಳಕೆ, ಪೊಲೀಸ್ ತರಬೇತಿ ಸಂಸ್ಥೆಗಳಲ್ಲಿ ಮೂಲಸೌಕರ್ಯ ಮೇಲ್ರ್ಜೀಕರಣ, ಕಾರಾಗೃಹಗಳ ಆಧುನೀಕರಣ ಸೇರಿದಂತೆ ಕರ್ನಾಟಕ ರಾಜ್ಯದ ಭದ್ರತಾ ಮೂಲಸೌಕರ್ಯ ಮತ್ತು ಪೊಲೀಸ್ ಸಾಮರ್ಥ್ಯ ಸುಧಾರಣೆಗೆ ನೆರವಾಗುವಂತೆ ಸಿಎಂ ಡಿ.ಕೆ ಶಿವಕುಮಾರ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಸಲ್ಲಿಸಿದರು.
ದೆಹಲಿಯಲ್ಲಿ ಕೇಂದ್ರ ಗೃಹ ಸಚಿವರ ಜೊತೆ ಸಮಾಲೋಚನೆ ಸಂದರ್ಭದಲ್ಲಿ ಈ ಮನವಿ ಸಲ್ಲಿಸಿದರು. ಕರ್ನಾಟಕ ರಾಜ್ಯ ಪೊಲೀಸ್‌ಗೆ ʻಪ್ರೆಸಿಡೆಂಟ್ಸ್ ಕಲರ್ʼ ಪ್ರಶಸ್ತಿಯನ್ನ ನೀಡುವ ಕುರಿತಾದ ಪ್ರಸ್ತಾವನೆಯನ್ನು ಭಾರತ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಪ್ರಸ್ತುತ ಅದು ಪರಿಶೀಲನೆಯಲ್ಲಿದೆ. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಇನ್ನು ಸಹ ಈ ಪ್ರತಿಷ್ಠಿತ ಗೌರವವನ್ನು ಸ್ವೀಕರಿಸಬೇಕಾಗಿದೆ. ಈ ವಿಷಯವನ್ನು ಶೀಘ್ರವಾಗಿ ಪರಿಶೀಲಿಸಿ ‘ಪ್ರೆಸಿಡೆಂಟ್ಸ್ ಕಲರ್’ ಪ್ರಶಸ್ತಿ ನೀಡಲು ಅನುಮೋದನೆ ನೀಡಬೇಕು.

ವಿಜಯನಗರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಇನ್ನೂ ಎರಡು ಹೆಚ್ಚುವರಿ ಐಆರ್‌ಬಿ ಬೆಟಾಲಿಯನ್‌ಗಳನ್ನ ಸ್ಥಾಪಿಸಲು ಅಂದಾಜು 243.87 ಕೋಟಿ ರೂ.ಗಳ ವೆಚ್ಚದ ಹೊಸ ಪ್ರಸ್ತಾವನೆಯನ್ನ ಸಚಿವಾಲಯಕ್ಕೆ ಕಳುಹಿಸಲಾಗಿದೆ. ಇದಕ್ಕೆ ಶೀಘ್ರವಾಗಿ ಮಂಜೂರಾತಿ ನೀಡಬೇಕು. ಇದನ್ನೂ ಓದಿ: ರೈತರ ವಿರೋಧದ ನಡುವೆಯೂ ಸರ್ಕಾರ ದಬ್ಬಾಳಿಕೆ ಮಾಡುತ್ತಿದೆ: ಬಿಡದಿ ಟೌನ್‌ಶಿಪ್ ಭೂಸ್ವಾಧೀನಕ್ಕೆ ಹೆಚ್‌ಡಿಕೆ ಆಕ್ರೋಶ
4 ಪ್ರಮುಖ ನಗರಗಳಲ್ಲಿ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್‌ಗಳು ಹಾಗೂ ಸಂವಹನ ಉಪಕರಣಗಳ ಸ್ಥಾಪನೆಗಾಗಿ ASUMP ಯೋಜನೆಯಡಿ 280.00 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಆದಷ್ಟು ಬೇಗ ಮಂಜೂರಾತಿ ನೀಡಬೇಕು. ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯನ್ನು ಬಳಸಿಕೊಳ್ಳಲು ಅನುಕೂಲವಾಗುವಂತೆ ಕಂಪನಿಗಳ ಕಾಯ್ದೆ, 2013 ರ ಶೆಡ್ಯೂಲ್-VII ರ ಅಡಿಯಲ್ಲಿ ಪೊಲೀಸ್ ಸಂಬಂಧಿತ ಚಟುವಟಿಕೆಗಳನ್ನ ಸೇರಿಸುವ ಪ್ರಸ್ತಾವನೆ ಸಲ್ಲಿಸಲಾಗುತ್ತಿದ್ದು, ಶೀಘ್ರವಾಗಿ ಅನುಮೋದನೆ ನೀಡಬೇಕು.
BPR&D ಯ ಗ್ಯಾಪ್ ಅನಾಲಿಸಿಸ್ ಮಾರ್ಗಸೂಚಿಗಳ ಪ್ರಕಾರ ಪೊಲೀಸ್ ತರಬೇತಿ ಸಂಸ್ಥೆಗಳಲ್ಲಿ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೆ ಏರಿಸಲು 258.53 ಕೋಟಿ ರೂ.ಗಳ ವಿವರವಾದ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇದಕ್ಕೆ ನಿಮ್ಮ ಅನುಮೋದನೆ ನೀಡಬೇಕು.
ಕಾರಾಗೃಹಗಳ ಆಧುನೀಕರಣ ಯೋಜನೆಯಡಿ 2025-26 ರ ಆರ್ಥಿಕ ವರ್ಷಕ್ಕೆ (ಸಿಸಿಟಿವಿ, ವಾಕಿ-ಟಾಕಿ ಮತ್ತು ಇತರ ಭದ್ರತಾ ಉಪಕರಣಗಳ ಖರೀದಿಗೆ) 20 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವಂತೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ಮೊತ್ತವನ್ನು ಶೀಘ್ರ ಮಂಜೂರು ಮಾಡಬೇಕು. ಇದನ್ನೂ ಓದಿ: ಮೂಕಾಂಬಿಕಾ ಸನ್ನಿಧಿಯಲ್ಲಿ ವಿಜಯ್ ಶತ್ರು ಸಂಹಾರ ಸಂಕಲ್ಪ!
ಕರ್ನಾಟಕದಲ್ಲಿ ನಿಯಮ 52-A ಅನ್ನು ಅನುಷ್ಠಾನಗೊಳಿಸಲು ಗಡುವನ್ನು ವಿಸ್ತರಿಸುವಂತೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಪತ್ರ ಬರೆಯಲಾಗಿದೆ. ದಯವಿಟ್ಟು ತಾವು ಈ ವಿಷಯವನ್ನು ಸಂಬಂಧಪಟ್ಟ ಸಚಿವಾಲಯದೊಂದಿಗೆ ಚರ್ಚಿಸಿ, ಆದಷ್ಟು ಬೇಗ ಅನುಮೋದನೆ ಕೊಡಿಸಬೇಕು.
ಸುಪ್ರೀಂ ಕೋರ್ಟ್ ಮುಂದೆ ನಡೆದ ಚರ್ಚೆಗಳ ಅನುಸಾರ, ಪೊಲೀಸ್ ಠಾಣೆಗಳಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳನ್ನ ಮೇಲ್ದರ್ಜೆಗೆ ಏರಿಸಲು ASUMP ಅಡಿಯಲ್ಲಿ 278.26 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಕ್ಕೆ ಸಕಾರಾತ್ಮಕವಾಗಿ ಪರಿಗಣಿಸಬೇಕು.
ಸೈಬರ್ ಅಪರಾಧಗಳು ಸಮಾಜ, ಆರ್ಥಿಕತೆ ಮತ್ತು ರಾಷ್ಟ್ರೀಯ ಭದ್ರತೆಗೆ ಗಂಭೀರ ಹಾಗೂ ನಿರಂತರ ಸವಾಲನ್ನು ಒಡ್ಡುತ್ತಿವೆ. ಇವುಗಳನ್ನು ನಿಗ್ರಹಿಸಲು ಅತ್ಯಾಧುನಿಕ ಸೈಬರ್ ಭದ್ರತಾ ವ್ಯವಸ್ಥೆ ಅಗತ್ಯವಿದ್ದು, ಕರ್ನಾಟಕ ಸರ್ಕಾರವು ಅಂದಾಜು 360 ಕೋಟಿ ರೂ.ಗಳ ವೆಚ್ಚದಲ್ಲಿ ‘ಕರ್ನಾಟಕ ಸೈಬರ್ ಕ್ರೈಮ್ ಕಂಟ್ರೋಲ್ ಅಂಡ್ ಕೋಆರ್ಡಿನೇಷನ್ ಯುನಿಟ್’ (K4C) ಅನ್ನು ಸ್ಥಾಪಿಸಲು ಉದ್ದೇಶಿಸಿದೆ. ಇದರ ವಿವರವಾದ ಯೋಜನಾ ಪ್ರಸ್ತಾವನೆಯನ್ನು ಶೀಘ್ರದಲ್ಲೇ ಸಲ್ಲಿಸಲಾಗುವುದು. ಈ ಉಪಕ್ರಮವನ್ನು ದಯವಿಟ್ಟು ಪರಿಗಣಿಸಿ, ಯೋಜನೆಗೆ ಅನುಮೋದನೆ ನೀಡಬೇಕು ಎಂದು ಮನವಿ ಮಾಡಿದರು.
