ಬೆಂಗಳೂರು: ಒಂದು ವೇಳೆ ಸುಪ್ರೀಂ ಕೋರ್ಟ್ ಸ್ಪೀಕರ್ ಆದೇಶವನ್ನು ಎತ್ತಿ ಹಿಡಿದರೆ ಹಿರೆಕೇರೂರು ಕ್ಷೇತ್ರದಿಂದ ಬಿಸಿ ಪಾಟೀಲ್ ಪುತ್ರಿ ಸೃಷ್ಟಿ ಕಣಕ್ಕೆ ಇಳಿಯುತ್ತಾರಾ ಹೀಗೊಂದು ಪ್ರಶ್ನೆ ಈಗ ಎದ್ದಿದೆ.
ಡಾಲರ್ಸ್ ಕಾಲೋನಿಯ ಬಿ.ಎಸ್.ಯಡಿಯೂರಪ್ಪ ಅವರ ನಿವಾಸಕ್ಕೆ ಅನರ್ಹ ಶಾಸಕ ಬಿ.ಸಿ.ಪಾಟೀಲ್ ಮಗಳೊಂದಿಗೆ ಭೇಟಿ ಮಾಡಿದ್ದರಿಂದ ಈ ಪ್ರಶ್ನೆ ಚರ್ಚೆಯಾಗುತ್ತಿದೆ. ಸುಪ್ರೀಂ ಕೋರ್ಟ್ ತೀರ್ಪು ವಿಳಂಬವಾದಲ್ಲಿ ಸೃಷ್ಟಿ ಪಾಟೀಲ್ ಕಣಕ್ಕಿಳಿಸುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಸಿಎಂ ಭೇಟಿ ನಂತರ ಬಿ.ಸಿ.ಪಾಟೀಲ್ ಪ್ರತಿಕ್ರಿಯಿಸಿ, ಯಾವ ಪಕ್ಷದಿಂದ ಸ್ಪರ್ಧಿಸಬೇಕು ಎಂಬುದರ ಕುರಿತು ಕ್ಷೇತ್ರದ ಜನತೆ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇನೆ. ಮಗಳು ಸೃಷ್ಟಿ ಪಾಟೀಲ್ ಉಪ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಈ ಕುರಿತು ಚಿಂತನೆ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅನರ್ಹತೆ ಆದರೂ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅಡ್ಡಿ ಇಲ್ಲ. ಈ ವಿಚಾರದಲ್ಲಿ ಸ್ಪೀಕರ್ ತಪ್ಪು ಮಾಹಿತಿ ಕೊಟ್ಟಿದ್ದಾರೆ. ತಮಿಳುನಾಡಿನಲ್ಲೂ ಶಾಸಕರು ಅನರ್ಹರಾದ ಬಳಿಕ ಕೋರ್ಟ್ ಅನುನತಿ ಪಡೆದು ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಹೀಗಾಗಿ ನಾವೂ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಬಹುದು ಎಂದು ತಿಳಿಸಿದರು.
ಹಿರೆಕೇರೂರು ಕ್ಷೇತ್ರದಿಂದ ಬಿ.ಸಿ.ಪಾಟೀಲ್ ಸ್ಪರ್ಧೆಗೆ ಬಿಜೆಪಿ ಮಾಜಿ ಶಾಸಕ ಯು.ಬಿ.ಬಣಕಾರ್ ವಿರೋಧ ವ್ಯಕ್ತಪಡಿಸಿದ ಕುರಿತು ಪ್ರತಿಕ್ರಿಯಿಸಿದ ಅವರು, ಯು.ಬಿ.ಬಣಕಾರ್ ವಿರೋಧ ಮಾಡುತ್ತಿರುವ ಕುರಿತು ನನಗೆ ತಿಳಿದಿಲ್ಲ. ನಾನು ಕ್ಷೇತ್ರದ ಜನ ಹೇಳಿದಂತೆ ಕೇಳುತ್ತೇನೆ ಎಂದು ಸ್ಪಷ್ಟಪಡಿಸಿದರು.
ಸೌಜನ್ಯಕ್ಕಾಗಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಶುಭಾಶಯ ಕೋರಿದೆ. ಕ್ಷೇತ್ರದ ಸಮಸ್ಯೆಗಳ ಬಗ್ಗೆ ಮಾತ್ರ ಚರ್ಚೆಸಿದ್ದು, ಹಿರೆಕೇರೂರು ತಾಲೂಕಿನ ಅಭಿವೃದ್ಧಿಗೆ ಒತ್ತು ಕೊಡುವಂತೆ ಮನವಿ ಮಾಡಿದ್ದೇನೆ. ಅವರು ಸಹ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕಾನೂನು ಹೋರಾಟದ ಸಂಬಂಧ ಬಿಎಸ್‍ವೈ ಜೊತೆ ಮಾತನಾಡಿಲ್ಲ. ಈ ಕುರಿತು ವಕೀಲ ಮುಕುಲ್ ರೊಹಟಗಿ ಜೊತೆ ಅನರ್ಹ ಶಾಸಕರೆಲ್ಲರೂ ಚರ್ಚೆ ನಡೆಸಿದ್ದೇವೆ. ಮತ್ತೆ ಕಾಂಗ್ರೆಸ್‍ಗೆ ಹೋಗುವ ಪ್ರಶ್ನೆಯೇ ಇಲ್ಲ. ಅನರ್ಹ ಶಾಸಕರಾರೂ ಮತ್ತೆ ಕಾಂಗ್ರೆಸ್ ಸೇರುವುದಿಲ್ಲ ಎಂದು ತಿಳಿಸಿದ್ದಾರೆ.
ನಿನ್ನೆಯಷ್ಟೇ ಅನರ್ಹ ಶಾಸಕ ಸುಧಾಕರ್ ಹಾಗೂ ರೋಷನ್ ಬೇಗ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದರು. ಇದೀಗ ಬಿ.ಸಿ.ಪಾಟೀಲ್ ಅವರು ಸಿಎಂ ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ.