ಬೆಂಗಳೂರು: ಬಿಜೆಪಿ ಸರ್ಕಾರ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಿದೆ ಎಂದು ಆರೋಪಿಸಿ ಬಿಟಿಎಂ ಲೇಔಟ್ ಹಾಗೂ ಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕರು ಹಾಗೂ ಕಾರ್ಯಕರ್ತರು ನಗರದ ಟೌನ್‍ಹಾಲ್ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಿದರು.
ಬಿಟಿಎಮ್ ಲೇಔಟ್ ವಿಧಾನಸಭಾ ಕ್ಷೇತ್ರಕ್ಕೆ ಸಮ್ಮಿಶ್ರ ಸರ್ಕಾರ 387 ಕೋಟಿ ರೂ.ಅನುದಾನ ನೀಡಿತ್ತು. ಆದರೆ ಬಿಜೆಪಿ ಸರ್ಕಾರ ಬಂದ ಮೇಲೆ 234 ಕೋಟಿ ರೂ.ಗೆ ಕಡಿತ ಮಾಡಿ ಕೇವಲ 152.84 ಕೋಟಿ ರೂ. ನಿಗದಿಪಡಿಸಿದೆ. ಹಾಗೆ ಜಯನಗರ ಕ್ಷೇತ್ರಕ್ಕೆ 194 ಕೋಟಿ ರೂ. ಅನುದಾನ ಕಡಿತಗೊಳಿಸಿ ಕೇವಲ 122 ಕೋಟಿ ರೂ. ಕೊಡಲಾಗಿದೆ. ಇದನ್ನು ವಿರೋಧಿಸಿ ಮಾಜಿ ಸಚಿವ ರಾಮಲಿಂಗಾರೆಡ್ಡಿ, ಶಾಸಕಿ ಸೌಮ್ಯರೆಡ್ಡಿ, ರಾಜ್ಯಸಭಾ ಸದಸ್ಯ ಹರಿಪ್ರಸಾದ್ ನೇತೃತ್ವದಲ್ಲಿ ಬಿಬಿಎಂಪಿ ಸದಸ್ಯರು ಹಾಗೂ ಬೆಂಬಲಿಗರು ಪ್ರತಿಭಟನೆ ನಡೆಸಿದರು.
Advertisement
Advertisement
ಈ ವೇಳೆ ಮಾಜಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಬಿಜೆಪಿ ಸೇಡಿನ ರಾಜಕಾರಣ ಮಾಡುತ್ತಿದೆ. ಭ್ರಷ್ಟ ಬಿಜೆಪಿಯನ್ನು ಸೋಲಿಸಿ ನಾವು ಅಧಿಕಾರಕ್ಕೆ ಬಂದಿದ್ದೆವು. ಆ ಸಂದರ್ಭದಲ್ಲಿ ನಾವು ಯಾವುದೇ ತಾರತಮ್ಯ, ದ್ವೇಷದ ರಾಜಕಾರಣ ಮಾಡಿಲ್ಲ. ಇಂದು ಬಿಜೆಪಿ ಅನುದಾನದಲ್ಲಿ ತಾರತಮ್ಯ ಮಾಡುತ್ತಿದೆ. ನಮ್ಮ ಬಜೆಟ್ ತಡೆ ಹಿಡಿದು, ಅನುದಾನ ನೀಡಿಲ್ಲ. ಡಿಪಿಆರ್, ವರ್ಕ್ ಆರ್ಡರ್ ಎಲ್ಲಾ ಆಗಿದ್ದರೂ ಕಾಮಗಾರಿಗಳನ್ನು ತಡೆಹಿಡಿದಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ನೀಡಿರುವ 5 ಕ್ಷೇತ್ರಗಳಿಗೆ 2700 ಕೋಟಿ ರೂ. ಅನುದಾನ ಕೊಟ್ಟಿದ್ದಾರೆ. ಆದರೆ ನಮ್ಮ ಕ್ಷೇತ್ರಗಳಿಗೆ ಅನ್ಯಾಯ ಮಾಡಿದ್ದು ಸರಿಯೇ ಎಂದು ಮಾಜಿ ಸಚಿವ ಪ್ರಶ್ನಿಸಿದರು.
Advertisement
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನೀಡಿದ ಅನುದಾನವನ್ನು ಬಿಜೆಪಿ ಸರ್ಕಾರ ಬಂದಮೇಲೆ ಕಡಿತ ಮಾಡಿ, ರಾಜಿನಾಮೆ ನೀಡಿದ ಶಾಸಕರ ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡಲಾಗಿದೆ. ಬಿಜೆಪಿ ಶಾಸಕರಿಗೆ ಸಾವಿರ ಕೋಟಿ ರೂ. ಅನುದಾನ ಕೊಡಲಿ ಆದರೆ ನಮ್ಮ ಅನುದಾನ ಕಡಿತ ಮಾಡಿರುವುದು ಸರಿಯಲ್ಲ. ಇದರಿಂದ ಕ್ಷೇತ್ರದ ಎಲ್ಲ ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿದೆ ಎಂದರು ಆಕ್ರೋಶ ವ್ಯಕ್ತಪಡಿಸಿದರು.
Advertisement
ಈಜೀಪುರ ಮೇಲ್ಸೇತುವೆ ಕೆಲಸ ನಿಂತು ಹೋಗಿದೆ. ಬಿಜೆಪಿಗರಲ್ಲಿ ಅಧಿಕಾರದ ಮದ ತುಂಬಿದೆ. ವೈಟ್ ಟಾಪಿಂಗ್ ಬೇಡ, ಹೆಚ್ಚು ವೆಚ್ಚವಾಗುತ್ತದೆ ಕಿತ್ತು ಹಾಕಿ ಎಂದು ನಾವೇ ಹೇಳಿದ್ದೆವು. ಆದರೆ ಉತ್ತಮ ಟಾರ್ ರಸ್ತೆ ನೀಡಲಿ. ಬೆಂಗಳೂರು ಶಾಸಕರೆಲ್ಲ ಸೇರಿ ಮುಖ್ಯಮಂತ್ರಿಗಳ ಮನೆ ಮುಂದೆ ಪ್ರತಿಭಟನೆ ನಡೆಸಲಿದ್ದೇವೆ, ಅಧಿವೇಶನದ ಸಮಯದಲ್ಲಿ ವಿಧಾನಸೌಧದ ಮುಂದೆಯೂ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ಮಾತನಾಡಿ, ಆಪರೇಷನ್ ಕಮಲ ನಡೆಸಲು ಸಾವಿರಾರು ಕೋಟಿ ರೂ. ಖರ್ಚು ಮಾಡಿದ್ದಾರೆ. ಆದರೆ ಈಗ ನೆರೆ ಪರಿಹಾರ ನೀಡುವುದಕ್ಕೆ ಸರ್ಕಾರದ ಬಳಿ ದುಡ್ಡಿಲ್ಲ ಎನ್ನುತ್ತಿದ್ದಾರೆ. ನಮ್ಮ ಕ್ಷೇತ್ರದ 316 ಕೋಟಿ ರೂ. ಅನುದಾನದಲ್ಲಿ ಕಡಿತ ಮಾಡಿ ಕೇವಲ 122 ಕೋಟಿ ರೂ.ನೀಡಿದ್ದಾರೆ. ಅನುದಾನ ನೀಡುವುದರಲ್ಲಿ ತಾರತಮ್ಯ ಮಾಡಿದ್ದಾರೆ. ಅಲ್ಲದೆ ಸಿಎಂ ನಗರ ಪ್ರದಕ್ಷಿಣೆ ವೇಳೆಯೂ ಸ್ಥಳೀಯ ಕಾಂಗ್ರೆಸ್ ಶಾಸಕರನ್ನು ಕಡೆಗಣಿಸಲಾಗುತ್ತಿದೆ ಎಂದು ದೂರಿದರು.