ಹಾಲಿವುಡ್‌ನ ‘ಆಪನ್‌ಹೈಮರ್’ (Oppenheimer) ಸಿನಿಮಾದ ರಿಲೀಸ್‌ಗೂ ಮುನ್ನವೇ ಭರ್ಜರಿ ಡಿಮ್ಯಾಂಡ್ ಶುರುವಾಗಿತ್ತು. ಜುಲೈ 21ರಂದು ರಿಲೀಸ್ ಆಗಿರೋ ಹಾಲಿವುಡ್‌ನ ಈ ಚಿತ್ರಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಹೌಸ್‌ಫುಲ್ ಪ್ರದರ್ಶನ ಕೂಡ ಕಾಣುತ್ತಿದೆ. ಆದರೆ ಈ ಸಿನಿಮಾದಲ್ಲಿನ ಒಂದು ದೃಶ್ಯಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಚಿತ್ರದಲ್ಲಿ ಸೆಕ್ಸ್ ಮಾಡುವಾಗ ಕಥಾನಾಯಕ ಭಗವದ್ಗೀತೆಯ ಸಾಲುಗಳನ್ನು ಓದುವ ದೃಶ್ಯ ಈ ಸಿನಿಮಾದಲ್ಲಿದೆ. ಈ ದೃಶ್ಯ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಬಗ್ಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Varma) ಪ್ರತಿಕ್ರಿಯೆ ನೀಡಿದ್ದಾರೆ.
ರಿಲೀಸ್ ಆಗುವ ಮುನ್ನವೇ ಕ್ರಿಸ್ಟೋಫರ್ ನೋಲನ್ ನಿರ್ದೇಶನದ ‘ಆಪನ್‌ಹೈಮರ್’ (Oppenheimer) ಸಿನಿಮಾ, 2 ಸಾವಿರ ರೂಪಾಯಿಗೆ ಟಿಕೆಟ್ ಸೇಲ್ ಆಗಿತ್ತು. ರಿಲೀಸ್ ಬಳಿಕ ಈ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಈ ಬೆನ್ನಲ್ಲೇ ಸಿನಿಮಾದಲ್ಲಿ ಹಿಂದೂ ಧರ್ಮಕ್ಕೆ ಅವಮಾನವಾಗಿದೆ ಎಂದು ಚಿತ್ರತಂಡದ ವಿರುದ್ಧ ಭಾರತೀಯರು ಗರಂ ಆಗಿದ್ದಾರೆ. ಹೀರೋ ಸೆಕ್ಸ್ ಮಾಡುವಾಗ ಭಗವದ್ಗೀತೆ ಹೇಳುವ ಸಂಭಾಷಣೆ ಬಗ್ಗೆ ಕೇಂದ್ರ ಸರ್ಕಾರದ ಮಾಹಿತಿ ಆಯುಕ್ತ ಉದಯ್ ಮಹುರ್ಕರ್ ಅವರು ಗರಂ ಆಗಿದ್ದರು. ಇದೀಗ ಈ ಸಿನಿಮಾದ ಬಗ್ಗೆ ಆರ್‌ಜಿವಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಉಪ್ಪಿ ಅಭಿಮಾನಿಗಳಿಗೆ ಗುಡ್ ನ್ಯೂಸ್- ’ಬುದ್ಧಿವಂತ 2′ ಬಿಗ್ ಅಪ್‌ಡೇಟ್
ಆಪನ್‌ಹೈಮರ್ (Oppenheimer) ಸಿನಿಮಾದಲ್ಲಿ ಭಗವದ್ಗೀತೆಗೆ ಅವಮಾನ ಆಗಿದೆ ಎಂದು ಕೆಲವರು ಹೇಳಿರುವುದಕ್ಕೆ ರಾಮ್ ಗೋಪಾಲ್ ವರ್ಮಾ ಅವರು ತಮ್ಮ ಅನಿಸಿಕೆ ತಿಳಿಸಿದ್ದಾರೆ. ಅಮೆರಿಕದ ನ್ಯೂಕ್ಲಿಯರ್ ವಿಜ್ಞಾನಿ ಆಪನ್‌ಹೈಮರ್ ಅವರು ಭಗವದ್ಗೀತೆ ಓದಿದ್ದರು. ವಿಪರ್ಯಾಸ ಏನೆಂದರೆ, ಭಾರತದ ಶೇಕಡ 0.0000001ರಷ್ಟು ಮಂದಿ ಕೂಡ ಭಗವದ್ಗೀತೆ ಓದಿದ್ದಾರೆ ಎಂಬ ಬಗ್ಗೆ ನನಗೆ ಅನುಮಾನ ಇದೆ ಎಂದು ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ. ಆರ್‌ಜಿವಿ ಮಾತಿಗೆ ಇದೀಗ ಪರ-ವಿರೋಧದ ಟೀಕೆಗಳು ಎದುರಾಗುತ್ತಿದೆ.
ಅಣುಬಾಂಬ್ ಕಂಡು ಹಿಡಿದ ಅಮೆರಿಕದ ವಿಜ್ಞಾನಿ ಜೆ. ರಾಬರ್ಟ್ ಆಪನ್‌ಹೈಮರ್ ಅವರ ಜೀವನದ ಕಥೆ ಬಗ್ಗೆ ಈ ಸಿನಿಮಾದಲ್ಲಿ ತೋರಿಸಲಾಗಿದೆ. ಆಪನ್‌ಹೈಮರ್ ಪಾತ್ರವನ್ನು ಕಿಲಿಯನ್ ಮರ್ಫಿ ಮಾಡಿದ್ದಾರೆ. ರಿಯಲ್ ಲೈಫ್‌ನಲ್ಲಿ ಆಪನ್‌ಹೈಮರ್ ಅವರಿಗೆ ಹಿಂದೂ ಪುರಾಣಗಳ ಬಗ್ಗೆ ಆಸಕ್ತಿ ಇತ್ತು. ಅವರು ಸಂಸ್ಕೃತ ಕಲಿತಿದ್ದರು ಮತ್ತು ಭಗವದ್ಗೀತೆ ಓದಿಕೊಂಡಿದ್ದರು. ಅದಕ್ಕೆ ಸಂಬಂಧಿಸಿದಂತೆ ಈ ಸಿನಿಮಾದಲ್ಲಿ ಒಂದು ದೃಶ್ಯ ಇದೆ. ಆ ದೃಶ್ಯವೇ ಈಗ ಕಾಂಟ್ರವರ್ಸಿ ಸೃಷ್ಟಿ ಮಾಡಿದೆ.
ಆಪನ್‌ಹೈಮರ್ ಜೊತೆ ಲೈಂಗಿಕ ಕ್ರಿಯೆ ನಡೆಸುತ್ತಿರುವ ಅವರ ಪ್ರೇಯಸಿಗೆ ಅನೇಕ ಪುಸ್ತಕಗಳು ಕಾಣಿಸುತ್ತವೆ. ಆ ಪೈಕಿ ಒಂದು ಪುಸ್ತಕವನ್ನು ಕೈಗೆತ್ತಿಕೊಂಡು ಇದು ಏನು ಅಂತ ಆಕೆ ಪ್ರಶ್ನಿಸುತ್ತಾಳೆ. ಇದು ಭಗವದ್ಗೀತೆ ಎಂದು ಆಪನ್‌ಹೈಮರ್ ಹೇಳುತ್ತಾರೆ ಮತ್ತು ಅದರಲ್ಲಿನ ಒಂದೆರಡು ಸಾಲುಗಳನ್ನು ವಿವರಿಸುತ್ತಾರೆ. ಇಂಥ ದೃಶ್ಯಕ್ಕೆ ಭಾರತದಲ್ಲಿ ಸೆನ್ಸಾರ್ ಮಂಡಳಿಯವರು ಹೇಗೆ ಅನುಮತಿ ನೀಡಿದರು. ಇದು ಹಿಂದೂ ಧರ್ಮದ ಮೇಲೆ ಮಾಡಲಾಗಿರುವ ದಾಳಿ ಎಂದು ಅಸಮಾಧಾನ ಹೊರ ಹಾಕಿದ್ದಾರೆ. ಸೇವ್ ಕಲ್ಚರ್ ಸೇವ್ ಇಂಡಿಯಾ ಪ್ರತಿಷ್ಠಾನದ ಕಡೆಯಿಂದ ಉದಯ್ ಮಹುರ್ಕರ್ ನಿರ್ದೇಶಕ ಕ್ರಿಸ್ಟೋಫರ್‌ಗೆ ಪತ್ರ ಬರೆದಿದ್ದರು. ಸಿನಿಮಾದಿಂದ ಆ ದೃಶ್ಯ ತೆಗೆಯುವಂತೆ ಕೋರಿದ್ದರು.