ಧಾರವಾಡ: ಬರ ಪರಿಹಾರವಾಗಿ ಪ್ರತಿ ರೈತರ ಖಾತೆಗೆ 2,500 ರೂ. ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿರುವುದನ್ನು ವಿರೋಧಿಸಿ ಧಾರವಾಡದಲ್ಲಿ ರೈತರು ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ.
ಸರ್ಕಾರ ನೀಡುವುದಾಗಿ ಹೇಳಿರುವ 2,500 ರೂ. ಜೊತೆಗೆ ತಮ್ಮ ಕಡೆಯಿಂದ 500 ರೂ. ಸೇರಿಸಿ ಒಟ್ಟು 3 ಸಾವಿರ ರೂ ಮುಖ್ಯಮಂತ್ರಿ ಪರಿಹಾರ ನಿಧಿಗೆ ಚೆಕ್ ಮೂಲಕ ಕಳುಹಿಸಿದ್ದಾರೆ.
ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಶಿರೂರು ಗ್ರಾಮದ ರೈತರು, ರೈತ ಮುಖಂಡ ಮಲ್ಲಿಕಾರ್ಜುನಗೌಡ ಬಾಳನಗೌಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಮಲ್ಲಿಕಾರ್ಜುನಗೌಡ ಬಾಳನಗೌಡರ ಅವರು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿ ಪರಿಹಾರ ನಿಧಿಗೆ 3 ಸಾವಿರ ರೂಪಾಯಿಯ ಚೆಕ್ ಸಲ್ಲಿಸಿದರು.
ಇಡೀ ಜಗತ್ತಿಗೆ ಅನ್ನ ಹಾಕುವ ರೈತ ಭಿಕ್ಷುಕನಲ್ಲ. ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರ ನೀಡುತ್ತಿರುವ ಪರಿಹಾರ ಮೊತ್ತ ಅತ್ಯಲ್ಪ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿ ಎಕರೆಗೆ 50 ಸಾವಿರ ರೂ. ಬರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.ಇದನ್ನೂ ಓದಿ: ಶೈನ್ ಶೆಟ್ಟಿ ನಟನೆಯ ‘ಶಂಕರಾಭರಣ’ ಸಿನಿಮಾದ ಟ್ರೈಲರ್ ರಿಲೀಸ್
ಇದರ ಜೊತೆಗೆ ರಾಷ್ಟ್ರೀಕೃತ ಬ್ಯಾಂಕ್ಗಳು ಸೇರಿದಂತೆ ಎಲ್ಲ ಬ್ಯಾಂಕ್ಗಳಲ್ಲಿ ರೈತರು ಪಡೆದಿರುವ ಕೃಷಿ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು. ಸರ್ಕಾರದ ಬರ ಪರಿಹಾರ ಘೋಷಣೆಗೆ ವಿರೋಧ ವ್ಯಕ್ತಪಡಿಸಿ ರೈತರು ನಡೆಸಿದ ಈ ಪ್ರತಿಭಟನೆ ಗಮನ ಸೆಳೆದಿದೆ.ಇದನ್ನೂ ಓದಿ: ಅಂತಾರಾಷ್ಟ್ರೀಯ ಸೌರ ಒಕ್ಕೂಟದ ಅಧ್ಯಕ್ಷತೆ; ಭಾರತ ಹ್ಯಾಟ್ರಿಕ್ ಸಾಧನೆ
