ನವದೆಹಲಿ: ಕಳೆದ 18 ದಿನಗಳಲ್ಲಿ ಸ್ಪೈಸ್‌ಜೆಟ್ ಸಂಸ್ಥೆಯ ವಿಮಾನಗಳಲ್ಲಿ ನಿರಂತರವಾಗಿ ತಾಂತ್ರಿಕ ದೋಷಗಳು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಕಾರಣ ಕೇಳಿ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಶೋಕಾಸ್ ನೋಟಿಸ್ ನೀಡಿದೆ.
ಸಂಸ್ಥೆಯ ವಿಮಾನಗಳಲ್ಲಿ ನಿರಂತರ ತಾಂತ್ರಿಕ ದೋಷಗಳು ಕಂಡುಬರುತ್ತಿವೆ. ಈ ಸಂಬಂಧ ಸ್ಪೈಸ್‌ಜೆಟ್ ಸಂಸ್ಥೆಗೆ ಡಿಜಿಸಿಎ ನೋಟಿಸ್ ನೀಡಿದೆ. ಅಲ್ಲದೇ ಮೂರು ವಾರಗಳಲ್ಲಿ ಉತ್ತರ ನೀಡುವಂತೆ ನೋಟಿಸ್‌ನಲ್ಲಿ ಸೂಚಿಸಿದೆ. ಇದನ್ನೂ ಓದಿ: ಸ್ಪೈಸ್‍ಜೆಟ್‍ನಲ್ಲಿ ಮುಂದುವರಿದ ತಾಂತ್ರಿಕ ದೋಷ: ಕಾಂಡ್ಲಾದಿಂದ ಬಂದ ವಿಮಾನ ಮುಂಬೈನಲ್ಲಿ ತುರ್ತು ಭೂಸ್ಪರ್ಶ
ನೋಟಿಸ್ ನೀಡಿರುವ ಕುರಿತು ಪ್ರತಿಕ್ರಿಯಿಸಿರುವ ಡಿಜಿಸಿಎ, ಸುರಕ್ಷತೆ, ಸಮರ್ಥ ಹಾಗೂ ವಿಶ್ವಾಸಾರ್ಹ ವಿಮಾನ ಸೇವೆಗಳನ್ನು ಒದಗಿಸುವಲ್ಲಿ ಸ್ಪೈಸ್‌ಜೆಟ್ ವಿಫಲವಾಗಿದೆ. ಹೀಗಾಗಿ ಕಂಪನಿಗೆ ನೋಟಿಸ್ ನೀಡಲಾಗಿದೆ. ಸೂಕ್ತ ನಿರ್ವಹಣೆ ಇಲ್ಲದಿರುವುದು ಸುರಕ್ಷತಾ ಕ್ರಮಗಳ ಪಾಲನೆಯಲ್ಲಿ ಲೋಪ ಕಂಡುಬರಲು ಪ್ರಮುಖ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ವರದಿಯಾಗುತ್ತಿರುವ ಬಹಳಷ್ಟು ಘಟನೆಗಳು ಅಷ್ಟು ಗಂಭೀರವೇನಲ್ಲ. ಇದು ಪ್ರತಿ ಏರ್‌ಲೈನ್‌ನಲ್ಲೂ ಸಂಭವಿಸುತ್ತದೆ. ಸ್ಪೈಸ್‌ಜೆಟ್‌ನ ವ್ಯವಸ್ಥೆಯಲ್ಲಿ ಯಾವುದೇ ಲೋಪಗಳಿವೆ ಎಂದು ವಿಮಾನಯಾನ ನಿಯಂತ್ರಕರು ಭಾವಿಸಿದರೆ, ನಾವು ಅವುಗಳನ್ನು ಸರಿಪಡಿಸಿಕೊಳ್ಳುತ್ತೇವೆ ಎಂದು ಸ್ಪೈಸ್‌ಜೆಟ್ ಸಿಎಂಡಿ ಅಜಯ್ ಸಿಂಗ್ ತಿಳಿಸಿದ್ದಾರೆ. ಇದನ್ನೂ ಓದಿ: ಡೋಲೋ 650 ಮಾತ್ರೆ ತಯಾರಿಕಾ ಸಂಸ್ಥೆ ಮೈಕ್ರೋ ಲ್ಯಾಬ್ಸ್ ಮೇಲೆ ಐಟಿ ದಾಳಿ