ಬೆಂಗಳೂರು: ರಾಜ್ಯದ ಪ್ರವಾಸೋದ್ಯಮ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಹಾಗೂ ಪ್ರವಾಸಿಗರಿಗೆ ವಿಶ್ವದರ್ಜೆಯ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ನೂತನವಾಗಿ `ನಮ್ಮ ಗೈಡ್’ (Namma Guide) ಆನ್‌ಲೈನ್ ವೇದಿಕೆಯನ್ನು ಸಿದ್ಧಪಡಿಸಲು ಪ್ರವಾಸೋದ್ಯಮ ಇಲಾಖೆ (Tourism Department) ಚಿಂತನೆ ನಡೆಸಿದೆ.
ರಾಜ್ಯದ ಯಾವುದೇ ಪ್ರವಾಸಿ ತಾಣಕ್ಕೆ ಭೇಟಿ ನೀಡುವ ದೇಶ-ವಿದೇಶಗಳ ಪ್ರವಾಸಿಗರಿಗೆ ಆಯಾ ಪ್ರದೇಶದ ಇತಿಹಾಸ, ಸಂಸ್ಕೃತಿ ಮತ್ತು ಮಹತ್ವದ ಬಗ್ಗೆ ನಿಖರ ಮಾಹಿತಿ ನೀಡುವಲ್ಲಿ ಸ್ಥಳೀಯ ಗೈಡ್‌ಗಳ ಸೇವೆ ಅತ್ಯಂತ ಪ್ರಮುಖವಾಗಿದೆ. ಪ್ರಸ್ತುತ ವಿದೇಶಗಳಲ್ಲಿ ಪ್ರವಾಸಿಗರು ತಮಗೆ ಬೇಕಾದ ಗೈಡ್‌ಗಳನ್ನು ಆನ್‌ಲೈನ್ ಮೂಲಕವೇ ಕಾಯ್ದಿರಿಸುವ ವ್ಯವಸ್ಥೆಗಳಿವೆ. ಇದೇ ಮಾದರಿಯ ಅತ್ಯಾಧುನಿಕ ಆನ್‌ಲೈನ್ ವೇದಿಕೆಯನ್ನು ಕರ್ನಾಟಕ ರಾಜ್ಯದಲ್ಲೂ ಪ್ರಾರಂಭಿಸುವುದು ಇಲಾಖೆಯ ಪ್ರಮುಖ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಹೊಸದೊಂದು ವೆಬ್‌ಸೈಟ್ ಹಾಗೂ ಆಪ್ ರಚಿಸಲು ಮುಂದಾಗಿದೆ. ಇದನ್ನೂ ಓದಿ: ಭಾರೀ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ಕೈಬಿಟ್ಟ ಬಿಜೆಪಿ
ಈ ನೂತನ ಆನ್‌ಲೈನ್ ವೇದಿಕೆಯಿಂದ ಪ್ರವಾಸಿಗರಿಗೆ ಸ್ಥಳೀಯ ಗೈಡ್‌ಗಳನ್ನು ಸುಲಭವಾಗಿ ಸಂಪರ್ಕಿಸಲು ಮತ್ತು ಪ್ರವಾಸಿ ತಾಣಗಳನ್ನು ಸರಿಯಾಗಿ ಹಾಗೂ ಅರ್ಥಪೂರ್ಣವಾಗಿ ವೀಕ್ಷಿಸಲು ಅನುಕೂಲವಾಗಲಿದೆ. ಅಲ್ಲದೆ, ಪ್ರವಾಸಿ ಸ್ಥಳಗಳ ಸ್ವಚ್ಛತೆ ಕಾಪಾಡುವಲ್ಲಿ ಹಾಗೂ ಅವುಗಳ ಸಮರ್ಪಕ ನಿರ್ವಹಣೆಯಲ್ಲಿ ಗೈಡ್‌ಗಳು ಸಕ್ರಿಯವಾಗಿ ಪಾಲ್ಗೊಳ್ಳಲು ಇದು ಸಹಕಾರಿಯಾಗಲಿದೆ. ಹಾಗೆಯೇ, ಇದರಿಂದ ಈಗಾಗಲೇ ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿಯಾಗಿರುವ ಗೈಡ್‌ಗಳಿಗೆ ಹೆಚ್ಚಿನ ಕೆಲಸವೂ ದೊರೆಯಲಿದೆ.
ಈ ಯೋಜನೆಯನ್ನು ತ್ವರಿತವಾಗಿ ಸಾಕಾರಗೊಳಿಸಲು ರಾಜ್ಯದಲ್ಲಿರುವ ನವೋದ್ಯಮಗಳು ಸೇರಿದಂತೆ ತಂತ್ರಜ್ಞಾನದಲ್ಲಿ ಆಸಕ್ತಿ ಹೊಂದಿರುವ ಸಂಸ್ಥೆಗಳಿಗೆ ಆಹ್ವಾನ ನೀಡಲು ಇಲಾಖೆ ಕ್ರಮ ಕೈಗೊಳ್ಳುತ್ತಿದೆ.
ಈ ಕುರಿತು ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ ಜಾರ್ಜ್ (KJ George) ಮಾತನಾಡಿ, ರಾಜ್ಯದ ಪ್ರವಾಸೋದ್ಯಮವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸುವಲ್ಲಿ ನಮ್ಮ ಸ್ಥಳೀಯ ಗೈಡ್‌ಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ. ವಿದೇಶಗಳ ಮಾದರಿಯಲ್ಲಿ ನಮ್ಮ ರಾಜ್ಯದಲ್ಲೂ ಪ್ರವಾಸಿಗರು ಸುಲಭವಾಗಿ, ಪಾರದರ್ಶಕವಾಗಿ ಗೈಡ್‌ಗಳ ಸೇವೆಯನ್ನು ಪಡೆಯಲು ಅನುವಾಗುವಂತೆ `ನಮ್ಮ ಗೈಡ್’ ವೆಬ್‌ಸೈಟ್ ಹಾಗೂ ಆಪ್ ಅಭಿವೃದ್ದಿಪಡಿಸಲಾಗುವುದು. ಇದರಿಂದ ಪ್ರವಾಸಿಗರಿಗೆ ಅತ್ಯುತ್ತಮ ಮಾಹಿತಿ ಮತ್ತು ಉತ್ತಮ ಅನುಭವ ದೊರೆಯುವುದರ ಜೊತೆಗೆ, ನಮ್ಮ ಐತಿಹಾಸಿಕ ಮತ್ತು ನೈಸರ್ಗಿಕ ತಾಣಗಳ ಸ್ವಚ್ಛತೆ ಹಾಗೂ ನಿರ್ವಹಣೆಗೂ ಹೆಚ್ಚಿನ ಬಲ ಸಿಗಲಿದೆ. ಈ ವಿನೂತನ ವೇದಿಕೆ ನಿರ್ಮಾಣಕ್ಕಾಗಿ ರಾಜ್ಯದ ಪ್ರತಿಭಾವಂತ ನವೋದ್ಯಮಗಳಿಗೆ ಅವಕಾಶ ನೀಡಲಾಗುವುದು ಎಂದಿದ್ದಾರೆ.ಇದನ್ನೂ ಓದಿ: ಕಾಯಿಲೆ ವಿಚಾರಕ್ಕೆ ಗಲಾಟೆ – ಪತ್ನಿಯ ಹತ್ಯೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡ ವೃದ್ಧ
