ರಾಯಚೂರು: ಹಳೇ ದ್ವೇಷ ಹಾಗೂ ಅಸೂಯೆ ಹಿನ್ನೆಲೆ ಜಮೀನಿನಲ್ಲಿನ ಬೆಳೆಯನ್ನು ಕಡಿದು ಹಾಕಿ ದುಷ್ಕೃತ್ಯ ಎಸಗಿರುವ ಘಟನೆ ರಾಯಚೂರಿನ ಎಲೆಬಿಚ್ಚಾಲಿಯಲ್ಲಿ ನಡೆದಿದೆ.
ಮಹಾಂತಮ್ಮ ಎಂಬುವವರಿಗೆ ಸೇರಿದ ಒಂದೂವರೆ ಎಕರೆ ಜಮೀನಿನಲ್ಲಿ ಬೀಜಕ್ಕಾಗಿ ಬೆಳೆದ ಹತ್ತಿ ಬೆಳೆಯನ್ನು ನಾಶಮಾಡಲಾಗಿದೆ. ಕಾಯಿ ಕಟ್ಟುವ ಹಂತದಲ್ಲಿದ್ದ ಹತ್ತಿ ಗಿಡಗಳನ್ನು ಸಂಪೂರ್ಣವಾಗಿ ಕಿಡಿಗೇಡಿಗಳು ಕಡಿದು ಹಾಕಿದ್ದಾರೆ.
ಸಾಲ ಮಾಡಿ ಸುಮಾರು 1 ಲಕ್ಷ ರೂಪಾಯಿವರೆಗೆ ಖರ್ಚು ಮಾಡಿ ಬೆಳೆದಿದ್ದ ಬೆಳೆ 2.5 ಲಕ್ಷ ಆದಾಯ ತರುವ ನಿರೀಕ್ಷೆ ಇತ್ತು. ಆದರೆ ದುಷ್ಕರ್ಮಿಗಳು ತಡ ರಾತ್ರಿ ಹೊಲದಲ್ಲಿದ್ದ ಹತ್ತಿಯನ್ನು ಕತ್ತರಿಸಿ ಹೋಗಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ ಯರಗೇರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕೆಲವರ ಮೇಲೆ ಅನುಮಾನವಿದ್ದರೂ ಹೆಸರು ಹೇಳಲು ರೈತ ಮಹಿಳೆ ಹಿಂಜರಿದಿದ್ದು, ದುಷ್ಕರ್ಮಿಗಳನ್ನು ನೀವೇ ಪತ್ತೆ ಹಚ್ಚಿ ನ್ಯಾಯ ಕೊಡಿಸಿ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.