ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಆರಂಭವಾದ ನಂತರ ದೇಶದಲ್ಲಿ ಅನೇಕ ಸಮಸ್ಯೆಗಳು ತಲೆದೋರುತ್ತಿವೆ. ಯುದ್ಧ, ಬರ ಪರಿಸ್ಥಿತಿಯಿಂದ ಬೇಸತ್ತ ಜನ ಪಶ್ಚಿಮ ಅಫ್ಘಾನ್ ಕಡೆಗೆ ಗುಳೆ ಹೋಗುತ್ತಿದ್ದಾರೆ. ತುತ್ತು ಅನ್ನಕ್ಕೂ ಪರದಾಡುವಂತಹ ಪರಿಸ್ಥಿತಿ ಅಲ್ಲಿನ ಬಡಜನರಿಗೆ ಎದುರಾಗಿದೆ. ಇಂತಹ ಬಿಕ್ಕಟ್ಟಿನಲ್ಲೇ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ.
ಅಜಿಜ್ ಗುಲ್ ಎಂಬ ಮಹಿಳೆಯ ಪತಿ ತಮ್ಮ 10 ವರ್ಷದ ಹೆಣ್ಣು ಮಗಳನ್ನು ಬೇರೊಬ್ಬರಿಗೆ ಮಾರಾಟ ಮಾಡಿದ್ದಾರೆ. ಕುಟುಂಬದ ಉಳಿದ ಮಕ್ಕಳ ಕೂಳಿಗಾಗಿ ಹೆಂಡತಿಗೂ ತಿಳಿಯದಂತೆ ಹೆಣ್ಣುಮಗಳನ್ನು ಹಣಕ್ಕಾಗಿ ಮಾರಾಟ ಮಾಡಿದ್ದಾನೆ. ಇದನ್ನೂ ಓದಿ: ಮಾಜಿ ಸೈನಿಕರನ್ನು ಹತ್ಯೆಗೈದ ತಾಲಿಬಾನಿಗಳ ವಿರುದ್ಧ ಅಫ್ಘಾನ್ ಮಹಿಳೆಯರ ಪ್ರತಿಭಟನೆ
Advertisement
Advertisement
ಗುಲ್ ದಂಪತಿಗೆ ಆರು ಮಂದಿ ಮಕ್ಕಳಿದ್ದರು. ಆಹಾರವಿಲ್ಲದೇ ಕಂಗೆಟ್ಟಿದ್ದ ಕುಟುಂಬ ಕೊನೆಗೆ ತಮ್ಮ ಒಬ್ಬಳು ಪುತ್ರಿಯನ್ನು ಮಾರಾಟ ಮಾಡಿದ್ದಾರೆ. ಆದರೆ ತನಗೆ ತಿಳಿಯದಂತೆ ಪತಿ, ಮಗಳನ್ನು ಮಾರಾಟ ಮಾಡಿರುವುದನ್ನು ಪತ್ನಿ ಖಂಡಿಸಿದ್ದಾಳೆ.
Advertisement
ಪತಿಯ ವರ್ತನೆಯಿಂದ ಬೇಸತ್ತ ಗುಲ್ ಆತನಿಗೆ ವಿಚ್ಛೇದನ ನೀಡಿದ್ದಾಳೆ. ಒಪ್ಪಂದದಂತೆ ತನ್ನ ನೆರೆಹೊರೆಯವರಿಂದ ಹಣ ಸಹಾಯ ಪಡೆದು ವಿಚ್ಛೇದಿತ ಪತಿಗೆ 1 ಲಕ್ಷ ಅಫ್ಘಾನೀಸ್ ಅನ್ನು ನೀಡಿದ್ದಾಳೆ. ಇದನ್ನೂ ಓದಿ: ಅನುಮತಿ ಇಲ್ಲದೇ ಯಾರೋ ಮನೆಯೊಳಗೆ ಬಂದರೆಂದು ತಪ್ಪಾಗಿ ಭಾವಿಸಿ ಮಗಳನ್ನೇ ಕೊಂದ ತಂದೆ!
Advertisement
ಪಶ್ಚಿಮ ಅಫ್ಘಾನ್ ಭಾಗದಲ್ಲಿ ಹೆಣ್ಣು ಮಕ್ಕಳಿಗೆ 15 ವರ್ಷ ತುಂಬುತ್ತಿದ್ದಂತೆ ಬೇರೆಯವರಿಗೆ ಮದುವೆ ಮಾಡುವುದು ಸಾಮಾನ್ಯ. ಮದುವೆಯಾಗುವ ವರನ ಕಡೆಯವರು ಒಪ್ಪಂದದಂತೆ ಹೆಣ್ಣಿನ ಮನೆಯವರಿಗೆ ಹಣ ನೀಡುತ್ತಾರೆ. ಆದರೆ ತಾಲಿಬಾನ್ ಆಡಳಿತದಿಂದಾಗಿ ಬಡಜನರ ಜೀವನ ಡೋಲಾಯಮಾನವಾಗಿದೆ. ಒಪ್ಪೊತ್ತಿನ ಊಟಕ್ಕೂ ಪರಿತಪಿಸುವ ಪರಿಸ್ಥಿತಿ ಇರುವುದರಿಂದ, ಕೆಲವರು ತಮ್ಮ ಹೆಣ್ಣು ಮಕ್ಕಳಿಗೆ 15 ವರ್ಷ ತುಂಬುವುದರೊಳಗೇ ಹಣ ಪಡೆದು ಬೇರೆಯವರಿಗೆ ಒಪ್ಪಿಸಲು ಮುಂದಾಗುತ್ತಿದ್ದಾರೆ.
ಅಫ್ಘಾನಿಸ್ತಾನದಿಂದ ತನ್ನ ಸೇನಾ ಪಡೆಯನ್ನು ಅಮೆರಿಕ ವಾಪಸ್ ಕರೆಸಿಕೊಂಡ ನಂತರ ತಾಲಿಬಾನಿಗಳು ಅಪ್ಘಾನಿಸ್ತಾನವನ್ನು ವಶಪಡಿಸಿಕೊಂಡು ಪ್ರಾಬಲ್ಯ ಸ್ಥಾಪಿಸಿದರು. ತದನಂತರ ಅಲ್ಲಿನ ಬಡಜನರು ಜೀವನ ನಡೆಸಲು ಕಷ್ಟಪಡುತ್ತಿದ್ದಾರೆ. ಸರ್ಕಾರಿ ಉದ್ಯೋಗಿಗಳು ತಿಂಗಳ ಸಂಬಳವಿಲ್ಲದೇ ಕಂಗೆಟ್ಟಿದ್ದಾರೆ. ದೇಶದ ಪರಿಸ್ಥಿತಿ ದಿನೇ ದಿನೆ ಹದಗೆಡುತ್ತಿದೆ.