ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi Air Quality) ಸತತವಾಗಿ ಎರಡು ದಿನ ಮಳೆಯಾದ ಪರಿಣಾಮ ಗಾಳಿ ಗುಣಮಟ್ಟದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ. ಮೂರು ವರ್ಷಗಳ ಬಳಿಕ ಮೊದಲ ಬಾರಿಗೆ ಏರ್ ಕ್ವಾಲಿಟಿ ಇಂಡೆಕ್ಸ್ ‘ಉತ್ತಮ’ ವರ್ಗಕ್ಕೆ ಇಳಿದಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ದೆಹಲಿಯ AQI 48ಕ್ಕೆ ದಾಖಲಾಗಿದ್ದು, 0ರಿಂದ 50ರ ನಡುವಿನ AQI ಅನ್ನು ‘ಉತ್ತಮ’ ವರ್ಗವೆಂದು ಪರಿಗಣಿಸಲಾಗುತ್ತದೆ. ಇದನ್ನೂ ಓದಿ: ದೆಹಲಿ-ಎನ್‌ಸಿಆರ್‌ನಲ್ಲಿ ಮುಂಗಾರು ಮಳೆಯ ಅಬ್ಬರ; ಜನಜೀವನ ಅಸ್ತವ್ಯಸ್ತ
ನಿನ್ನೆ ದಿನ AQI 59 ದಾಖಲಾಗಿದ್ದರೆ, ನಿರಂತರ ಮಳೆಯಿಂದಾಗಿ ಅದು ಮತ್ತಷ್ಟು ಇಳಿಕೆಯಾಗಿ 48ಕ್ಕೆ ತಲುಪಿದೆ. ವರ್ಷಪೂರ್ತಿ ವಾಯುಮಾಲಿನ್ಯದ ಸಮಸ್ಯೆಯನ್ನು ಎದುರಿಸುವ ದೆಹಲಿಯ ನಿವಾಸಿಗಳಿಗೆ ಇದು ಅಪರೂಪದ ಹಾಗೂ ನೆಮ್ಮದಿಯ ಅನುಭವವಾಗಿದೆ.
ಸತತ ಮುಂಗಾರು ಮಳೆಯು ವಾತಾವರಣದಲ್ಲಿದ್ದ PM2.5, PM10 ಸೇರಿದಂತೆ ಧೂಳು ಮತ್ತು ಇತರ ಮಾಲಿನ್ಯಕಾರಿ ಕಣಗಳನ್ನು ಕೊಚ್ಚಿಕೊಂಡು ಹೋಗಿದೆ. ಈ ಪ್ರಕ್ರಿಯೆಯನ್ನು ‘ವೆಟ್ ಡಿಪಾಸಿಷನ್’ ಅಥವಾ ‘ವಾಷ್‌ಔಟ್ ಎಫೆಕ್ಟ್’ ಎಂದು ಕರೆಯಲಾಗುತ್ತದೆ. ಮಳೆಯ ಜೊತೆಗೆ ಬಲವಾದ ಗಾಳಿ ಮತ್ತು ಹೆಚ್ಚಿನ ಆರ್ದ್ರತೆಯೂ ಗಾಳಿಯನ್ನು ಶುದ್ಧಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ತಜ್ಞರು ಹೇಳಿದ್ದಾರೆ.
CPCB 2015ರಲ್ಲಿ AQI ವ್ಯವಸ್ಥೆಯನ್ನು ಜಾರಿಗೆ ತಂದ ಬಳಿಕ ದೆಹಲಿಯಲ್ಲಿ ಕೇವಲ 15 ದಿನಗಳು ಮಾತ್ರ ‘ಉತ್ತಮ’ ಗಾಳಿ ಗುಣಮಟ್ಟ ದಾಖಲಾಗಿದೆ. ಸರಾಸರಿ ವರ್ಷಕ್ಕೆ ಒಂದು ಅಥವಾ ಎರಡು ದಿನಗಳಷ್ಟೇ ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕೊನೆಯದಾಗಿ 2023ರ ಸೆಪ್ಟೆಂಬರ್ 10ರಂದು ಜಿ-20 ಶೃಂಗಸಭೆಯ ಹಿನ್ನೆಲೆಯಲ್ಲಿ ಜಾರಿಗೊಂಡ ನಿರ್ಬಂಧಗಳು ಹಾಗೂ ಮಳೆಯ ಪರಿಣಾಮ ಉತ್ತಮ ಗಾಳಿ ಗುಣಮಟ್ಟ ದಾಖಲಾಗಿತ್ತು. 2020ರ ಕೋವಿಡ್ ಲಾಕ್‌ಡೌನ್ ಅವಧಿಯಲ್ಲೂ ಮುಂಗಾರು ಕಾಲದಲ್ಲಿ ಐದು ದಿನಗಳ ಕಾಲ ಇದೇ ರೀತಿಯ ಪರಿಸ್ಥಿತಿ ಕಂಡುಬಂದಿತ್ತು. ಇದನ್ನೂ ಓದಿ: Wayanad Landslide | ಇಂದು 3 ಮೃತದೇಹ ಪತ್ತೆ – ಬಲಿಯಾದವರ ಸಂಖ್ಯೆ 6ಕ್ಕೆ ಏರಿಕೆ
ಸೆಂಟರ್ ಫಾರ್ ಸೈನ್ಸ್ ಆ್ಯಂಡ್ ಎನ್ವಿರಾನ್‌ಮೆಂಟ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಅನುಮಿತಾ ರಾಯ್‌ಚೌಧುರಿ, ಮುಂಗಾರು ಮಳೆಯು ವಾಯುಮಾಲಿನ್ಯವನ್ನು ತಾತ್ಕಾಲಿಕವಾಗಿ ಕಡಿಮೆ ಮಾಡುವ ಪರಿಣಾಮಕಾರಿ ನೈಸರ್ಗಿಕ ಪ್ರಕ್ರಿಯೆಯಾಗಿದೆ. ಆದರೆ ಇದು ಶಾಶ್ವತ ಪರಿಹಾರವಲ್ಲ. ವಾಹನಗಳು, ಕೈಗಾರಿಕೆಗಳು, ನಿರ್ಮಾಣ ಚಟುವಟಿಕೆಗಳು ಹಾಗೂ ತ್ಯಾಜ್ಯ ಸುಡುವಿಕೆಯಿಂದ ಉಂಟಾಗುವ ಮಾಲಿನ್ಯವನ್ನು ನಿಯಂತ್ರಿಸಿದಾಗ ಮಾತ್ರ ದೀರ್ಘಕಾಲಿಕವಾಗಿ ಗಾಳಿ ಗುಣಮಟ್ಟವನ್ನು ಸುಧಾರಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
