ಉಡುಪಿ: ಯಾರೋ ಮಾಡಿದ್ದ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ಅನ್ನೋದು ಇದಕ್ಕೇ ಅನ್ಸುತ್ತೆ. ರೋಡಿನಲ್ಲಿದ್ದ ಹೊಂಡಕ್ಕೆ ಬೈಕ್ ಬಿದ್ದು ಮಗು ಸತ್ತಿರೋದಕ್ಕೆ ತಂದೆ ಮೇಲೆಯೇ ಪೊಲೀಸರು ಕೇಸು ದಾಖಲು ಮಾಡಿದ್ದಾರೆ. ಮೊದಲೇ ಮಗುವನ್ನು ಕಳೆದುಕೊಂಡ ದುಃಖದಲ್ಲಿರುವ ತಂದೆ ತಾಯಿಯ ನೋವಿನ ಮೇಲೆ ಬರೆ ಎಳೆದಿದ್ದಾರೆ.
ಉಡುಪಿಯ ಉದ್ಯಾವರದ ಉಮೇಶ್ ಪೂಜಾರಿ ಮತ್ತು ಪ್ರಮೋದ ದಂಪತಿಯ ಒಂದು ವರ್ಷ ಎಂಟು ತಿಂಗಳ ಪುತ್ರ ಚಿರಾಗ್ ಪರ್ಕಳದಲ್ಲಿ ಅಕ್ಟೋಬರ್ 2ಕ್ಕೆ ರಸ್ತೆಯ ಹೊಂಡಕ್ಕೆ ಬೈಕ್ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದ. ಆದ್ರೆ ಮಣಿಪಾಲ ಪೊಲೀಸರು ಪುಟ್ಟ ಮಗುವಿನ ತಂದೆಯ ಮೇಲೆಯೇ ಕೇಸು ದಾಖಲು ಮಾಡಿದ್ದಾರೆ.
Advertisement
ವಿಪರೀತ ವೇಗ ಮತ್ತು ಅಜಾಗರೂಕತೆ, ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾಗಿರುವ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಮಗುವನ್ನು ಕಳೆದುಕೊಂಡ ನೋವಿನಲ್ಲಿರುವ ತಂದೆ ತಾಯಿಗೆ ಮತ್ತೆ ಪೊಲೀಸರು ಕೇಸ್ ಹಾಕುವ ಮೂಲಕ ಶಾಕ್ ಕೊಟ್ಟಿದ್ದಾರೆ.
Advertisement
ಮೃತ ಮಗುನಿನ ತಂದೆ ಉಮೇಶ್ ಪೂಜಾರಿ ಮಾತನಾಡಿ, ನಾನೇ ಮಗುವನ್ನು ಕೊಂದ ರೀತಿಯಲ್ಲಿ ನನ್ನ ಮೇಲೆ ಕೇಸ್ ಮಾಡಿದ್ದಾರೆ. ನನ್ನ ಮಗುವನ್ನು ನಾನೇ ಕೊಲ್ತೇನಾ..? ರಸ್ತೆ ಗುಂಡಿ ಇದ್ದದ್ದು ನನ್ನ ತಪ್ಪಾ..? ಸಂಬಂಧ ಪಟ್ಟ ಇಲಾಖೆ ಮೇಲೆ ಯಾವುದೇ ಕ್ರಮ ಇಲ್ವಾ ಅಂತ ಕಣ್ಣೀರಿಟ್ಟಿದ್ದಾರೆ.
Advertisement
ನಾವು ಬೈಕಿನಲ್ಲಿ ತುಂಬಾ ನಿಧಾನವಾಗಿ ಹೋಗುತ್ತಿದ್ದೆವು. ಮೂರ ತಿಂಗಳ ಮಗುನಿನಿಂದ ಇಲ್ಲಿಯವರೆಗೆ ನಾವು ಬೈಕಿನಲ್ಲೇ ಓಡಾಡುತ್ತಿದ್ದೆವು. ದೊಡ್ಡ ಹೊಂಡಕ್ಕೆ ಬೈಕ್ ಬಿದ್ದ ಕೂಡಲೇ ಕೈಯ್ಯಲ್ಲಿದ್ದ ಮಗು ನಾನು ಕೆಳಗೆ ಬಿದ್ದೆವು. ನನ್ನ ಕೈ ಮೂಳೆ ಮುರಿದಿದೆ. ಮಗು ಗಾಯಗೊಂಡಿದ್ದರಿಂದ ಸಾವನ್ನಪ್ಪಿದೆ. ಮೊದಲೇ ನಾವು ನೋವಿನಲ್ಲಿದ್ದೇವೆ ಈಗ ಮತ್ತೆ ನಮಗೆ ಪೊಲೀಸರು ಕಷ್ಟ ಕೊಡುತ್ತಿದ್ದಾರೆ ಎಂದು ಮಗುವಿನ ತಾಯಿ ಪ್ರಮೋದಾ ಬಿಕ್ಕಿ ಬಿಕ್ಕಿ ಅಳುತ್ತಾರೆ.
Advertisement
ಇಷ್ಟಕ್ಕೂ ಅಪಘಾತ ನಡೆದ ಸ್ಥಳದಲ್ಲಿ ನಾಲ್ಕು ವರ್ಷದಿಂದ ಹೊಂಡಗುಂಡಿಗಳ ನಡುವೆ ರಸ್ತೆಯಿದ್ದರೂ ಹೆದ್ದಾರಿ ಇಲಾಖೆ ಇನ್ನೂ ಕ್ರಮ ಕೈಗೊಂಡಿಲ್ಲ. ಮಣಿಪಾಲ ಕೆಎಂಸಿ ಆಸ್ಪತ್ರೆಯ ಮುಂಭಾಗವಂತೂ ಸಮಸ್ಯೆಗಳನ್ನೇ ಹೊತ್ತುಕೊಂಡಿದೆ. ದಿನಕ್ಕೆ ನೂರಾರು ಆಂಬುಲೆನ್ಸ್ ಓಡಾಡುವ ರಸ್ತೆಯಾದ್ರೂ ಈ ರಸ್ತೆಯ ಗುಂಡಿ ಮುಚ್ಚುವ ಕೆಲಸವಾಗಿಲ್ಲ. ಘಟನೆ ನಡೆದು 10 ದಿನಗಳಾಗುತ್ತಾ ಬಂದರೂ ಸಂಸದೆ ಶೋಭಾ ಕರಂದ್ಲಾಜೆ- ಸಚಿವ ಪ್ರಮೋದ್ ಮಧ್ವರಾಜ್ ಈ ಬಗ್ಗೆ ಚಕಾರ ಎತ್ತಿಲ್ಲ. ಪರಿಹಾರ ರೂಪದಲ್ಲಿ ಒಂದು ರೂಪಾಯಿಯನ್ನೂ ಕೊಟ್ಟಿಲ್ಲದ್ದಕ್ಕೆ ಸ್ಥಳೀಯರು ಅಸಮಾಧನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಅಪಘಾತದಲ್ಲಿ 1 ವರ್ಷದ ಮಗು ಬಲಿ: ಕೇಂದ್ರ-ರಾಜ್ಯ ಸರ್ಕಾರಗಳ ಕೊಳಕು ರಾಜಕೀಯದ ವಿರುದ್ಧ ಸ್ಥಳೀಯರ ಆಕ್ರೋಶ