Districts
ಅಪಘಾತದಲ್ಲಿ 1 ವರ್ಷದ ಮಗು ಬಲಿ: ಕೇಂದ್ರ-ರಾಜ್ಯ ಸರ್ಕಾರಗಳ ಕೊಳಕು ರಾಜಕೀಯದ ವಿರುದ್ಧ ಸ್ಥಳೀಯರ ಆಕ್ರೋಶ

ಉಡುಪಿ: ಮಣಿಪಾಲ ಹಾಗೂ ಕಾರ್ಕಳ ರಾಷ್ಟ್ರೀಯ ಹೆದ್ದಾರಿಯ ಬಳಿ ಸೋಮವಾರ ಅಪಘಾತವೊಂದು ಸಂಭವಿಸಿದ್ದು, ಅಪಘಾತದಲ್ಲಿ ಒಂದು ವರ್ಷದ ಮಗು ಸಾವನ್ನಪ್ಪಿದೆ.
ಮಣಿಪಾಲದಿಂದ ಹಿರಿಯಡ್ಕಗೆ ದಂಪತಿ ಬೈಕ್‍ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ. ರಸ್ತೆಯಲ್ಲಿದ್ದ ಗುಂಡಿಗಳನ್ನು ತಪ್ಪಿಸಲು ಹೋದಾಗ ಬೈಕ್‍ನಲ್ಲಿದ್ದ ಮಗು ಕೆಳಕ್ಕೆ ಎಸೆಯಲ್ಪಟ್ಟಿದೆ. ಈ ಸಂದರ್ಭದಲ್ಲಿ ತೀವ್ರವಾಗಿ ಗಾಯಗೊಂಡ ಒಂದು ವರ್ಷದ ಚಿರಾಗ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮಣಿಪಾಲ ಹಾಗೂ ಕಾರ್ಕಳ ರಾಷ್ಟ್ರೀಯ ಹೆದ್ದಾರಿಯ ಮಾರ್ಗವು ತೀರ ಕಿರಿದಾಗಿದ್ದು, ಕಳೆದ 10 ವರ್ಷಗಳಿಂದ ರಸ್ತೆ ಅಗಲೀಕರಣ ಕಾರ್ಯ ನಡೆಯುತ್ತಿದೆ. ಇದರಿಂದ ರಸ್ತೆಯಲ್ಲಿ ದೊಡ್ಡ ಹಳ್ಳಗಳು ನಿರ್ಮಾಣವಾಗಿದೆ. ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲು ಸ್ಥಳೀಯ ಸಂಘಟನೆಗಳು ಹೋರಾಟಗಳನ್ನು ಮಾಡಿ ಒತ್ತಾಯ ಮಾಡಿದ್ದರು. ಆದ್ರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕೊಳಕು ರಾಜಕೀಯದಿಂದ ಯೋಜನೆ ಹಳ್ಳ ಹಿಡಿದಿತ್ತು.
ಅಪಘಾತ ನಡೆದ ಸ್ಥಳದಲ್ಲಿ ಸ್ಥಳೀಯ ಸಂಘಟನೆಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿರ್ಲಕ್ಷ್ಯಕ್ಕೆ ಪ್ರತಿಭಟನೆ ನಡೆಸಿದ್ದು, ಸರ್ಕಾರ ಹಾಗೂ ಜನಪ್ರತಿನಿಧಿಗಳ ಬೇಜವಾಬ್ದಾರಿಯಿಂದ ಈ ಸಾವು ಸಂಭವಿಸಿದೆ. ಇದೊಂದು ಸರ್ಕಾರದ ಕೊಲೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಸ್ಥಳಕ್ಕೆ ಮಣಿಪಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ವಾರದ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ರಾಷ್ಟ್ರೀಯ ಹೆದ್ದಾರಿಯಾಗಿರುವುದರಿಂದ ಕೇಂದ್ರ ಸರ್ಕಾರದ ಅಡಳಿತಕ್ಕೆ ಒಳಪಟ್ಟಿದ್ದು. ರಸ್ತೆಯ ಎರಡೂ ಬದಿ ಇರುವ ಅಂಗಡಿಗಳನ್ನು ತೆರವು ಮಾಡಿಸಲು ಕೇಂದ್ರ ಸರ್ಕಾರ ಪರಿಹಾರ ಕೊಡಬೇಕು. ಆ ಮೊತ್ತವನ್ನು ಡೆಪಾಸಿಟ್ ಮಾಡಬೇಕು. ಆ ನಂತರ ರಾಜ್ಯ ಸರ್ಕಾರ ತೆರವು ಮಾಡಿಸಿಕೊಡುತ್ತದೆ ಎಂದು ಹೇಳಿದ್ದರು.
ಈ ಹಿಂದೆ ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಮಳೆ ಬರುತ್ತಿದೆ. ಈಗ ಡಾಂಬರು ಮಾಡಲು ಸಾಧ್ಯವಿಲ್ಲ. ಮಳೆ ನಿಂತ ಮೇಲೆ ಕಾಮಗಾರಿ ಮುಂದುವರೆಸುತ್ತೇವೆ ಎಂದು ಹೇಳಿದಿದ್ದರು.
ರಸ್ತೆಯ ಅಗಲೀಕರಣದ ಕುರಿತು ಸ್ಥಳೀಯ ಸಮಾಜ ಸೇವಕ- ಪಬ್ಲಿಕ್ ಹೀರೋ ನಿತ್ಯಾನಂದ ಎಂಬುವರು ಮುರ್ನಾಲ್ಕು ಬಾರಿ ವಿಭಿನ್ನ ಪ್ರತಿಭಟನೆಯನ್ನು ನಡೆಸಿ ಸರ್ಕಾರ ಗಮನ ಸೆಳೆದಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಇದನ್ನೂ ಓದಿ :
ರಸ್ತೆಯ ಹೊಂಡಕ್ಕೆ ಬಿದ್ದು ಈಜಾಡಿದ್ರು: ಉಡುಪಿಯಲ್ಲಿ ನಡೀತು ವಿಭಿನ್ನ ಪ್ರತಿಭಟನೆ
