ಪ್ರೀತಿಯ ಕೃಷ್ಣ..
ದಸರಾ ಹಬ್ಬ ಬಂತೆಂದರೆ ಸಾಕು, ಮನೆ ತುಂಬಾ ಸಂಭ್ರಮ, ಬಣ್ಣಬಣ್ಣದ ಗೊಂಬೆಗಳ ಅಲಂಕಾರ, ಹೂವಿನ ಪರಿಮಳ, ಸಂಜೆ ಹೊತ್ತಿಗೆ ಬೆಳಗುವ ದೀಪಗಳು. ಇವೆಲ್ಲದರ ನಡುವೆ ಮನಸ್ಸು ಮಾತ್ರ ನಿನ್ನ ಹುಡುಕಾಟದಲ್ಲೇ ಇರುತ್ತದೆ.
ಈ ಬಾರಿ ನಮ್ಮ ಮನೆಯಲ್ಲಿ ದಸರಾ ಗೊಂಬೆಗಳನ್ನು ಸುಂದರವಾಗಿ ಅಲಂಕರಿಸಿ ಜೋಡಿಸಿದ್ದೇವೆ. ಒಂದೊಂದು ಗೊಂಬೆಯ ಹಿಂದೆ ಒಂದೊಂದು ಕಥೆಯಿದೆ. ಆದರೆ ಈ ಗೊಂಬೆಗಳ ಸಾಲಿನಲ್ಲಿ ನನ್ನ ಮನಸ್ಸಿಗೆ ಅತಿ ಪ್ರಿಯವಾದ ಗೊಂಬೆಯಂತಿರುವ ನಿನ್ನ ಮುದ್ದು ಮುಖ ಮಾತ್ರ ಕಾಣಿಸುತ್ತಿಲ್ಲ ಕಣೋ! ಇದನ್ನೂ ಓದಿ: ನದಿಗೆ ಅದೆಷ್ಟೇ ತಡೆ ಇದ್ದರೂ ಸಮುದ್ರ ಸೇರದೇ ಇರುವುದೇ?
ನಮ್ಮ ಮನೆಗೆ ದಸರಾ ಗೊಂಬೆ ನೋಡೋಕೆ ಬಾ. ನೀನು ಬಂದರೆ ಈ ಹಬ್ಬ ಮತ್ತಷ್ಟು ಸಡಗರ ತರುತ್ತದೆ. ನಿನಗೆ ಸಿಹಿ ತಿನಿಸಿ, ನಿನ್ನ ನಗು ನೋಡಬೇಕು ಅನ್ನೋ ಆಸೆ ನನಗೆ. ಗೊಂಬೆಗಳ ಮುಂದೆ ನಿಂತು ಒಂದೊಂದನ್ನೂ ಕುತೂಹಲದಿಂದ ನೋಡುವಾಗ, ನಿನ್ನ ಮುಖವನ್ನೇ ಕದ್ದು ನೋಡುತ್ತಾ ನಿಲ್ಲಬೇಕು ಎಂಬ ಆಸೆ. ಎಲ್ಲರೂ ಗೊಂಬೆಗಳ ಸೌಂದರ್ಯವನ್ನು ಹೊಗಳುತ್ತಿದ್ದರೆ, ನಾನು ಮಾತ್ರ ನಿನ್ನನ್ನು ಹೊಗಳಬೇಕು!
ನಿನಗೆ ಗೊತ್ತಾ ಬಾಲ್ಯದಿಂದಲೂ ದಸರಾ ಹಬ್ಬ ಅಂದರೆ ನನಗೆ ತುಂಬಾ ಇಷ್ಟ. ಆದರೆ ಈಗ ಈ ಹಬ್ಬಕ್ಕೆ ಮತ್ತೊಂದು ವಿಶೇಷ ಅರ್ಥ ಸಿಕ್ಕಿದೆ. ಪ್ರತಿ ಹಬ್ಬದಲ್ಲೂ ನಿನ್ನನ್ನು ನನ್ನ ಜೋಡಿಯಾಗಿ ಕಲ್ಪಿಸಿಕೊಳ್ಳುತ್ತೇನೆ. ದೀಪಾವಳಿಯ ದೀಪಗಳ ಬೆಳಕಿನಲ್ಲಿ ನಿನ್ನ ಮುಖ ನೋಡಬೇಕು, ಸಂಕ್ರಾಂತಿಯ ಸಿಹಿ ಹಂಚಿಕೊಳ್ಳಬೇಕು, ಯುಗಾದಿಯ ಹೊಸತನದಲ್ಲಿ ನಿನ್ನ ಕೈ ಹಿಡಿದು ಹೊಸ ಕನಸುಗಳನ್ನು ಕಾಣಬೇಕು ಅನ್ನಿಸುತ್ತದೆ. ಹಾಗೆಯೇ ಈ ದಸರಾ ಗೊಂಬೆಗಳ ಹಬ್ಬದಲ್ಲೂ ನೀನು ನನ್ನ ಪ್ರೀತಿಯ ಗೊಂಬೆಯಾಗಿ ಜೊತೆಯಲ್ಲಿರಬೇಕು ಅನ್ನೋದು ನನ್ನ ಪುಟ್ಟ ಆಸೆ. ಇದನ್ನೂ ಓದಿ:ಪ್ರತಿ ಮಳೆಗೂ ನೀನಿಟ್ಟ ನೆನಪು ಅದೆಷ್ಟು ಶಾಶ್ವತ..!
ಈ ಗೊಂಬೆಗಳ ಹಬ್ಬ ನಮ್ಮ ಪ್ರೇಮ ಸಂಬಂಧವನ್ನು ಹತ್ತಿರವಾಗಿಸಬೇಕು. ಈ ಸಲದ ದಸರಾ ನಮ್ಮ ಪ್ರೀತಿಯ ನೆನಪುಗಳ ಪಟ್ಟಿಗೆ ಒಂದು ಸುಂದರವಾದ ಪುಟವಾಗಲಿ. ಮುಂದೆ ಯಾವಾಗಲಾದರೂ ಈ ಹಬ್ಬದ ನೆನಪು ಬಂದಾಗ, ʻಆ ವರ್ಷ ನಿನ್ನ ಮನೆಗೆ ದಸರಾ ಗೊಂಬೆ ನೋಡಲು ಬಂದಿದ್ದೆ ನೆನಪಿದೆಯಾ?ʼ ಎಂದು ನೀನು ಕೇಳಬೇಕು!
ಬೇಗ ಬಾ ನಮ್ಮ ಮನೆಯ ಗೊಂಬೆಗಳು ನಿನಗಾಗಿ ಕಾಯುತ್ತಿವೆ. ಹೀಗೆ ಹೇಳಿದರೆ ಅದು ಅರ್ಧ ಸತ್ಯ! ನಿಜವಾಗಿಯೂ ಕಾಯುತ್ತಿರುವುದು ನಿನ್ನ ಪ್ರೀತಿಯಲ್ಲಿ ಕರಗಿರುವ ನಿನ್ನ ʻರಾಧೆ ಗೊಂಬೆʼ. ನೀನು ಬಂದರೆ ಮಾತ್ರ ಈ ದಸರಾ ಹಬ್ಬಕ್ಕೆ ಒಂದು ಕಳೆ, ಬರುತ್ತೀಯಾ ತಾನೇ? ಇದನ್ನೂ ಓದಿ: ನಾನು ಹೋಗು ಅಂದ ತಕ್ಷಣ ನನ್ನ ಬಿಟ್ಟು ಹೋಗ್ಬಿಟ್ಟೆ ಅಲ್ವಾ.. ನಿನಗೆ ಅದೇ ಬೇಕಿತ್ತೇನೋ..?
ನಿನ್ನ ನಿರೀಕ್ಷೆಯಲ್ಲಿ ಕಾದು ಕುಳಿತ
ರಾಧೆ ಗೊಂಬೆ

