– ಪವಿತ್ರಾಗೌಡ ಚಪ್ಪಲಿಯಿಂದ ಹೊಡೆದಿದ್ದಾರೆ, ದರ್ಶನ್ ಎದೆಗೆ ಒದ್ದಿದ್ದಾರೆ
– ಆರೋಪಿಗಳ ಪಾತ್ರದ ಬಗ್ಗೆ ಇಂಚಿಂಚೂ ಮಾಹಿತಿ ನೀಡಿದ ಸಿದ್ಧಾರ್ಥ್ ಲೂಥ್ರಾ
ನವದೆಹಲಿ: ಕೊಲೆಯಾದ ರೇಣುಕಾಸ್ವಾಮಿ ನಟ ದರ್ಶನ್ (Darshan) ಅಭಿಮಾನಿ ಆಗಿದ್ದ. ಪ್ರಕರಣದ ಎ1 ಆರೋಪಿ ಪವಿತ್ರಾಗೌಡ (Pavithragowda) ದರ್ಶನ್ ಜೊತೆಗೆ ವಿವಾಹೇತರ ಸಂಬಂಧ ಹೊಂದಿದ್ದರು. ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದರು. ಹೀಗಾಗಿ ರೇಣುಕಾಸ್ವಾಮಿ ಅಸಭ್ಯವಾಗಿ ಮೆಸೇಜ್ ಮಾಡಿದ್ದ. ಇದರಿಂದ ಆಕ್ರೋಶಗೊಂಡು ಎ2 ಆರೋಪಿ ದರ್ಶನ್ ತನ್ನ ಸ್ನೇಹಿತರು, ಅಭಿಮಾನಿ ಸಂಘದ ಸದಸ್ಯರನ್ನ ಬಳಸಿಕೊಂಡು ಹತ್ಯೆ ಮಾಡಿದ್ದಾರೆ ಅಂತ ಸರ್ಕಾರದ ಪರ ವಕೀಲ ಸಿದ್ಧಾರ್ಥ್ ಲೂಥ್ರಾ (Sidharth Luthra) ಪ್ರಬಲ ವಾದ ಮಂಡಿಸಿದರು.
ಕೊಲೆ ಪ್ರಕರಣದಲ್ಲಿ ದರ್ಶನ್‌ಗೆ ರಾಜ್ಯ ಹೈಕೋರ್ಟ್ (Karnataka High Court) ನೀಡಿದ್ದ ಜಾಮೀನು ಆದೇಶ ಪ್ರಶ್ನಿಸಿ ಬೆಂಗಳೂರು ನಗರ ಪೊಲೀಸರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ನ್ಯಾ.ಪಾರ್ದಿವಾಲಾ ನೇತೃತ್ವದ ದ್ವಿ-ಸದಸ್ಯ ಪೀಠದಲ್ಲಿ ನಡೆಸಿತು. ಈ ವೇಳೆ ಸುಮಾರು 1 ಗಂಟೆ ಪ್ರಬಲ ವಾದ ಮಂಡಿಸಿದ ಸಿದ್ಧಾರ್ಥ್ ಲೂಥ್ರಾ ಅವರು ಹಲವು ವಿಷಯಗಳನ್ನ ಕೋರ್ಟ್ ಗಮನಕ್ಕೆ ತಂದರು.
ರೇಣುಕಾಸ್ವಾಮಿ (Renukaswamy) ಎನ್ನುವ ವ್ಯಕ್ತಿಯನ್ನು ಚಿತ್ರದುರ್ಗದಿಂದ ಕಿಡ್ನ್ಯಾಪ್ ಮಾಡಿಕೊಂಡು ಬಂದು ಬೆಂಗಳೂರಿನಲ್ಲಿರುವ ಪಟ್ಟಣಗೆರೆ ಶೆಡ್ ನಲ್ಲಿ ಮಾರಾಣಾಂತಿಕ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾರೆ. ಹಲ್ಲೆಗೂ ಮುನ್ನ ಥಳಿಸಿದ್ದಾರೆ, ಕರೆಂಟ್ ಶಾಕ್ ನೀಡಿದ್ದಾರೆ. ಕಬ್ಬಿಣ ರಾಡ್, ಕೋಲಿನಿಂದ ಹೊಡೆದಿದ್ದಾರೆ, ಎದೆಗೆ ಬಲವಾಗಿ ಒದೆಯಲಾಗಿದೆ. ಆರಂಭದಲ್ಲಿ ಹಣಕಾಸಿನ ಕಾರಣಕ್ಕೆ ಹತ್ಯೆ ಮಾಡಿದೆ ಎಂದು ನಾಲ್ವರು ಶರಣಾದರು. ಬಳಿಕ ತನಿಖಾಧಿಕಾರಿ ವಿಚಾರಣೆ ನಡೆಸಿದಾಗ ದೊಡ್ಡ ಜಾಲವೇ ಬಯಲಾಗಿದೆ. ಕೆಳ ಹಂತದ ನ್ಯಾಯಲಯ ಕೆಲವರಿಗೆ, ಹೈಕೋರ್ಟ್ ಈ ಏಳು ಮಂದಿಗೆ ಜಾಮೀನು ನೀಡಿದೆ. ಇದನ್ನು ನಾವು ಪ್ರಶ್ನೆ ಮಾಡಿ ಬಂದಿದ್ದೇವೆ. ಕೊಲೆ ಮಾಡಿರುವುದಕ್ಕೆ ಸಿಸಿಟಿವಿ ದೃಶ್ಯಾವಳಿಗಳು ಸೇರಿ ಪ್ರಬಲ ಸಾಕ್ಷ್ಯಗಳಿವೆ. ಆದ್ದರಿಂದ ಆರೋಪಿಗಳ ಜಾಮೀನು ರದ್ದು ಮಾಡಬೇಕು ಎಂದು ವಾದಿಸಿದರು. ಸುಮಾರು ಒಂದು ತಾಸು ವಾದ ಮಂಡಿಸಿದ ಸಿದ್ಧಾರ್ಥ ಲೂಥ್ರಾ ಆರೋಪಿಗಳ ಪಾತ್ರದ ಬಗ್ಗೆ ಸುಪ್ರೀಂಗೆ ಇಂಚಿಂಚು ಮಾಹಿತಿ ನೀಡಿದರು.
ಜಡ್ಜ್ ಕೇಳಿದ್ದೇನು – ವಕೀಲರು ಹೇಳಿದ್ದೇನು?
ನ್ಯಾ. ಪರ್ದಿವಾಲ: ಕೊಲೆಗೆ ಕಾರಣ ಏನು?
ಲೂಥ್ರಾ: ಕೊಲೆಯಾದ ರೇಣುಕಾಸ್ವಾಮಿ ನಟ ದರ್ಶನ ಅಭಿಮಾನಿ.. ಪ್ರಕರಣದ ಎ1 ಆರೋಪಿ ಪವಿತ್ರಗೌಡ ದರ್ಶನ ಜೊತೆಗೆ ವಿವಾಹಯೇತರ ಸಂಬಂಧ ಹೊಂದಿದ್ದ ಹಿನ್ನೆಲೆ ಅಸಭ್ಯವಾಗಿ ರೇಣುಕಾಸ್ವಾಮಿ ಮೆಸೇಜ್ ಮಾಡಿದ್ದ. ಇದರಿಂದ ಆಕ್ರೋಶಗೊಂಡು ಎ2 ಆರೋಪಿ ದರ್ಶನ್ ತನ್ನ ಸ್ನೇಹಿತರು, ಅಭಿಮಾನಿ ಸಂಘದ ಸದಸ್ಯರನ್ನು ಬಳಸಿಕೊಂಡು ಹತ್ಯೆ ಮಾಡಿದ್ದಾರೆ.
ನ್ಯಾ. ಪರ್ದಿವಾಲ: ಎಲ್ಲ ಆರೋಪಿಗಳಿಗೆ ಜಾಮೀನು ಸಿಕ್ಕಿದಿಯೇ?
ಲೂಥ್ರಾ: ಹೌದು. ಎಲ್ಲ ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಮುಖ್ಯವಾಗಿ ಎ2 ಆರೋಪಿ ದರ್ಶನ್ ಆರೋಗ್ಯ ಕಾರಣ ನೀಡಿ ಜಾಮೀನು ಪಡೆದರೂ ಬಳಿಕ ರೆಗ್ಯೂಲರ್ ಬೇಲ್ ಸಿಕ್ಕಿದೆ. ಜಾಮೀನು ಪಡೆದ ಬಳಿಕ ಅವರು ಆಸ್ಪತ್ರೆ ಬದಲು ಸಿನಿಮಾ ಶೂಟಿಂಗ್, ವಿದೇಶ ಪ್ರವಾಸ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ.
ನ್ಯಾ. ಪರ್ದಿವಾಲ: ಚಾರ್ಜ್ ಪ್ರೇಮ್ ಆಗಿದ್ಯಾ? ಪ್ರತ್ಯಕ್ಷದರ್ಶಿಗಳಿದ್ದಾರ..?
ಲೂಥ್ರಾ : ಚಾರ್ಜ್ ಇನ್ನು ಫ್ರೇಮ್ ಆಗಿಲ್ಲ, ಆದರೆ ಆರೋಪಿಗಳ ವಿರುದ್ಧ ಪ್ರಬಲ ಸಾಕ್ಷ್ಯಗಳಿವೆ. ಆರೋಪಿಗಳು ನಿರಂತರ ಸಂಪರ್ಕದಲ್ಲಿದ್ದಾರೆ, ಎಲ್ಲರ ನಂಬರ್‌ಗಳು ಒಂದೇ ಕಡೆ ಟ್ರೇಸ್ ಆಗಿದೆ. ಸಿಸಿಟಿವಿ ದೃಶ್ಯಗಳಲ್ಲಿ ಇವರ ಚಲನವಲನಗಳಿವೆ. ಕೆಲವು ಆರೋಪಿಗಳು ಹಲ್ಲೆ ನಡೆಸಿ ಅದನ್ನು ಎ1-ಎ2 ಆರೋಪಿಗಳಿಗೆ ಕಳುಹಿಸಿದ್ದಾರೆ. ಅನೇಕ ದೂರವಾಣಿ ಸಂಭಾಷಣೆಗಳು ನಡೆದಿವೆ.
ನ್ಯಾ. ಪರ್ದಿವಾಲ: ಸಿಸಿಟಿವಿಯಲ್ಲಿ ಆರೋಪಿಗಳ ಗುರುತು ಪತ್ತೆಯಾಗಿದೆಯೇ?
ಲೂಥ್ರಾ: ಸ್ವಷ್ಟವಾಗಿಲ್ಲ, ಬಿಳಿ ಸ್ಕಾರ್ಪಿಯೋ ಮತ್ತು ರ‍್ಯಾಂಗ್ಲಾರ್ ಕಾರ್ ಬಳಸಿಕೊಂಡು ಓಡಾಡಿದ್ದಾರೆ, ಉದ್ದೇಶ ಪೂರ್ವಕವಾಗಿ ತಲೆ ಮರೆಸಿಕೊಂಡು ಓಡಾಡಿದ್ದಾರೆ. ಆರಂಭದಲ್ಲಿ ಶರಣಾದ ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಇದರಲ್ಲಿ ದೊಡ್ಡ ಜಾಲ ಇರುವುದು ಪತ್ತೆಯಾಗಿದೆ, ಕೃತ್ಯದಲ್ಲಿ ಭಾಗಿಯಾಗಿರುವುದಕ್ಕೆ ವೈಜ್ಞಾನಿಕ ಮತ್ತು ಡಿಜಿಟಲ್ ಸಾಕ್ಷ್ಯಗಳಿದೆ.
ಮುಂದುವರಿದು… ರೇಣುಕಾಸ್ವಾಮಿ ಹಲ್ಲೆಯ 3 ನಿಮಿಷದ ವಿಡಿಯೋ ಇದೆ. ಪವಿತ್ರಾಗೌಡ ಚಪ್ಪಲಿಯಿಂದ ಹಲ್ಲೆ ಮಾಡಿದ್ದಾರೆ. ದರ್ಶನ್ ಎದೆಗೆ ಒದ್ದಿದ್ದಾರೆ. ಸತ್ತ ಮೇಲೆ ಪವಿತ್ರಾಗೌಡಗೆ ಫೋಟೋ ಕಳುಹಿಸಿ ಡಿಲೀಟ್ ಮಾಡಲಾಗಿದೆ. ಆರೋಪಿಗಳ ಮೊಬೈಲ್‌ನಲ್ಲಿ ಹತ್ಯೆ ಫೋಟೋಗಳಿವೆ. ಪುನೀತ್ ಫೋನ್‌ನಿಂದ ಫೋಟೋ ರಿಕವರಿ ಮಾಡಲಾಗಿದೆ. ಲಾಠಿ ಮೇಲೆ ರಕ್ತದ ಕಲೆಗಳಿವೆ. ಆರೋಪಿಗಳ ಬಟ್ಟೆ, ಚಪ್ಪಲಿಯಲ್ಲಿ ರೇಣುಕಾಸ್ವಾಮಿ ರಕ್ತದ ಕಲೆ ಇದೆ. ಇಷ್ಟೆಲ್ಲ ಆದ್ಮೇಲೂ ದರ್ಶನ್ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ. ಪ್ರತಿಯೊಬ್ಬ ಆರೋಪಿಯ ಡಿಎನ್‌ಎ ಮ್ಯಾಚ್ ಮಾಡಲಾಗಿದೆ. 7 ಕಿಮೀ ವರೆಗಿನ ವಿಡಿಯೋ ಪರಿಶೀಲಿಸಲಾಗಿದೆ ಎಂದು ಕೋರ್ಟ್ ಗಮನಕ್ಕೆ ತಂದರು.