ಹೆಡ್ ಬುಷ್ ಸಿನಿಮಾ ವಿವಾದದಿಂದ ದೂರವಾಗಿ, ಹೊಯ್ಸಳ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ನಟ ಡಾಲಿ ಧನಂಜಯ್, ತಮ್ಮ ಬದುಕಿಗೂ ಮತ್ತು ಕನಕದಾಸರ ಪದಕ್ಕೂ ಹೋಲಿಕೆ ಮಾಡಿಕೊಂಡು ಇವತ್ತೊಂದು ಪೋಸ್ಟ್ ಮಾಡಿದ್ದಾರೆ. ಅದು ಕನಕದಾಸರ ರಚನೆಯಾದರೂ, ಧನಂಜಯ್ ತಮ್ಮ ವೈರಿಗಳಿಗೆ ಈ ಮೂಲಕ ಟಾಂಗ್ ಕೊಟ್ಟಿದ್ದಾರೆ. ಇತ್ತೀಚಿಗೆ ಡಾಲಿ ವೃತ್ತಿ ಜೀವನದಲ್ಲಿ ನಡೆದ ಘಟನೆಯನ್ನು ನೆನಪಿಸುತ್ತಲೇ, ತಮ್ಮ ಬಗ್ಗೆ ಸಲ್ಲದ ಆರೋಪಗಳನ್ನು ಮಾಡುವವರಿಗೆ ಈ ಮೂಲಕ ಎಚ್ಚರಿಸಿದ್ದಾರೆ.
ಇಂದು ಕನಕದಾಸರ ಜಯಂತಿ. ಈ ನೆಪದಲ್ಲಿ ಕನಕದಾಸರ ರಚನೆಯ ‘ ಹಿಂದೆ ನನ್ನ ಬೈದವರೆಲ್ಲ ಚೆಂದಾಗಿರಲಿ, ಮುಂದೆ ನನ್ನ ಬಯ್ಯುವರೆಲ್ಲ ಅಂದಣವೇರಲಿ, ಕುಂದು ಇಟ್ಟವರೆಲ್ಲ ಕುದುರೆಯ ಕಟ್ಟಿ ಬಾಳಲಿ, ಬಂದು ಒದ್ದವರಿಗೆ ಭತ್ತದ ಗದ್ದೆ ಬೆಳೆಯಲಿ. ಜನರೊಳಗೆ ಮಾನಭಂಗ ಮಾಡಿದವರಿಗೆ ಜೇನು ತುಪ್ಪು, ಸಕ್ಕರೆ ಊಟ ಆಗಲಿ ಅವರಿಗೆ. ಹಾನಿ ಬಾರದಂತಹ ಲೋಕ ಆಗಲಿ ಅವರಿಗೆ. ಮಹಾನುಭಾವ ಮುಕ್ತಿಯ ಕೊಡುವ ನೆಲೆಯಾದಿಕೇಶವ’ ಎಂದು ದಾಸರಪದವನ್ನು ಹಾಕುವ ಮೂಲಕ ತಮಗೆಲ್ಲ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ. ಇದನ್ನೂ ಓದಿ:ಕನ್ನಡದಲ್ಲೂ ಮೂಡಿ ಬರಲಿದೆ ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕನ ಹೊಸ ಸಿನಿಮಾ
ಪ್ರಗತಿಪರ ವಿಚಾರಧಾರೆಗಳನ್ನು ಆಗಾಗ್ಗೆ ತಮ್ಮ ಅಭಿಮಾನಿಗಳಿಗೆ ಹಂಚಿಕೊಳ್ಳುವ ಧನಂಜಯ್, ಮನುಷ್ಯತ್ವದ ಬಗ್ಗೆ ಕೆಲವು ಸಾಲುಗಳನ್ನು ಬರೆದುಕೊಂಡಿದ್ದರು. ಇದೇ ಅವರಿಗೆ ಮುಳುವಾಗಿತ್ತು. ಹೆಡ್ ಬುಷ್ ಸಿನಿಮಾದಲ್ಲಿ ವೀರಗಾಸೆಗೆ ಅಪಮಾನ ಮಾಡಿದ್ದಾರೆ ಎಂದು ವಿವಾದ ಸೃಷ್ಟಿ ಮಾಡಲಾಯಿತು. ಕರಗದ ವಿಚಾರದಲ್ಲೂ ಎಳೆತರಲಾಯಿತು. ಬಡವರ ಮಕ್ಳು ಬೆಳೆಯಬೇಕು ಎನ್ನುವ ಅವರ ಮಾತನ್ನು ಟ್ರೋಲ್ ಮಾಡಲಾಯಿತು. ತಮ್ಮ ವಿರುದ್ಧ ಷಡ್ಯಂತ್ರ ಮಾಡುತ್ತಿರುವ ಎಲ್ಲರಿಗೂ ಈ ಕನಕದಾಸರ ರಚನೆಯ ಮೂಲಕ ಉತ್ತರಿಸಿದ್ದಾರೆ ಧನಂಜಯ್.