ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಮೂಲಕ ಸಂಚಲನವನ್ನೇ ಸೃಷ್ಟಿ ಮಾಡಿದ್ದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri), ಇದೀಗ ಮತ್ತೊಂದು ಸಿನಿಮಾವನ್ನು ಕೈಗೆತ್ತಿಕೊಂಡಿದ್ದು, ಆ ಸಿನಿಮಾಗೆ ‘ದಿ ವ್ಯಾಕ್ಸಿನ್ ವಾರ್’ (The Vaccine War) ಎಂದು ಹೆಸರಿಟ್ಟಿದ್ದಾರೆ. ಈ ಸಿನಿಮಾ ಕನ್ನಡದಲ್ಲೂ ನಿರ್ಮಾಣವಾಗುತ್ತಿರುವುದು ವಿಶೇಷ. ದಿ ಕಾಶ್ಮೀರ್ ಫೈಲ್ಸ್ ಈ ಹಿಂದೆ ಕೇವಲ ಹಿಂದಿಯಲ್ಲಿ ಮಾತ್ರ ಮೂಡಿ ಬಂದಿತ್ತು. ಆನಂತರ ಓಟಿಟಿಯಲ್ಲಿ ಕನ್ನಡಕ್ಕೆ ಡಬ್ ಮಾಡಲಾಗಿತ್ತು. ಇದೀಗ ಹಿಂದಿ, ತಮಿಳು, ತೆಲುಗು ಸೇರಿದಂತೆ ಒಟ್ಟು 11 ಭಾಷೆಗಳಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ.
ಕೊರೋನಾ ಸಮಯದಲ್ಲಿ ವ್ಯಾಕ್ಸಿನ್ ಏನೆಲ್ಲ ಆವಾಂತರ ಸೃಷ್ಟಿ ಮಾಡಿತು ಎನ್ನುವ ಅರಿವು ಬಹುತೇಕರಿಗಿದೆ. ಈ ವ್ಯಾಕ್ಸಿನ್ ಏನೆಲ್ಲ ಕೆಲಸ ಮಾಡಿತು ಎಂದು ಕಂಡವರು ಇದ್ದಾರೆ. ವ್ಯಾಕ್ಸಿನ್ ಮಾಫಿಯಾ ಬಗ್ಗೆಯೂ ಹಲವು ಅನುಮಾನಗಳು ವ್ಯಕ್ತವಾದವು. ಹೀಗಾಗಿಯೇ ವ್ಯಾಕ್ಸಿನ್ ಸುತ್ತ ಕಥೆಯನ್ನು ಬರೆದಿರುವ ವಿವೇಕ್, ವ್ಯಾಕ್ಸಿನ್ ಸಾಧಕ ಬಾಧಕಗಳ ಬಗ್ಗೆಯೇ ಸಿನಿಮಾ ಮಾಡುತ್ತಿದ್ದಾರಂತೆ. ಇದನ್ನೂ ಓದಿ:ಸಮಂತಾ ಬಾಳಲ್ಲಿ ಆಶಾಕಿರಣ: ನಾಗ ಚೈತನ್ಯ ಮನಸ್ಸು ಮಾಡಲಿ ಎಂದು ಫ್ಯಾನ್ಸ್
ದಿ ಕಾಶ್ಮೀರ್ ಫೈಲ್ಸ್ (The Kashmir Files) ಸಿನಿಮಾ ತಯಾರಿ ವೇಳೆಯಲ್ಲೇ ವ್ಯಾಕ್ಸಿನ್ ಬಗ್ಗೆ ಸಂಶೋಧನೆ ಮಾಡಿದ್ದರಂತೆ ವಿವೇಕ್. ಕೋವಿಡ್ ಕಾರಣದಿಂದಾಗಿ ಕಾಶ್ಮೀರ್ ಫೈಲ್ಸ್ ಶೂಟಿಂಗ್ ಮುಂದೂಡಲ್ಪಟ್ಟಾಗ ವ್ಯಾಕ್ಸಿನ್ ಹಿಂದೆ ಬಿದ್ದಿದ್ದರಂತೆ. ತಮ್ಮ ಸಂಶೋಧನೆಯಲ್ಲಿ ಕಂಡ ಅನುಭವಗಳನ್ನು ಈ ಸಿನಿಮಾದಲ್ಲಿ ಅವರು ಅಳವಡಿಸಿಕೊಂಡಿದ್ದಾರಂತೆ. ವ್ಯಾಕ್ಸಿನ ತಯಾರಿಕೆಯಲ್ಲಿ ಗೆದ್ದಿರುವ ವಿಜ್ಞಾನಿಗಳ ಶ್ರಮ, ಅದನ್ನು ಅಷ್ಟೇ ವೇಗವಾಗಿ ತಲುಪಿಸಿದ ರೋಚಕ ಕಥೆಯೂ ಈ ಸಿನಿಮಾದಲ್ಲಿ ಇರಲಿದೆಯಂತೆ.
ತಮ್ಮದೇ ಬ್ಯಾನರ್ ನಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವ ವಿವೇಕ್, ಪತ್ನಿ ನಟಿ ಪಲ್ಲವಿ ಜೋಷಿ ಅವರೇ ಈ ಚಿತ್ರದ ನಿರ್ಮಾಪಕರು ಎಂದು ಘೋಷಣೆ ಮಾಡಿದ್ದಾರೆ. ತಾರಾಗಣದ ಬಗ್ಗೆ ಇನ್ನೂ ಯಾವುದೇ ಮಾಹಿತಿ ಕೊಟ್ಟಿಲ್ಲವಾದರೂ, ಶೀಘ್ರದಲ್ಲೇ ಎಲ್ಲ ವಿಷಯವನ್ನೂ ಹಂಚಿಕೊಳ್ಳುವುದಾಗಿ ಅವರು ತಿಳಿಸಿದ್ದಾರೆ.