ಅಶ್ವತ್ಥ ನಾರಾಯಣ್ ವಿರುದ್ಧ ಡಿಕೆಶಿ ಷಡ್ಯಂತ್ರ ಮಾಡುತ್ತಿದ್ದಾರೆ: ಎಸ್.ಟಿ.ಸೋಮಶೇಖರ್

Public TV
2 Min Read
ST Somashekar 1

ಬೆಂಗಳೂರು: ಪಿಎಸ್‍ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಸಚಿವ ಅಶ್ವತ್ಥ ನಾರಾಯಣ್ ಮೇಲೆ ಕಾಂಗ್ರೆಸ್ ಮುಗಿಬೀಳ್ತಿದ್ದಾರೆ. ಸಚಿವರ ಪರ ಸಂಪುಟ ಸಹೋದ್ಯೋಗಿಗಳು ಬ್ಯಾಟಿಂಗ್‍ಗೆ ಇಳಿದಿದ್ದಾರೆ. ಈ ಹಿನ್ನೆಲೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಸಹ ಅಶ್ವತ್ಥ ನಾರಾಯಣ್ ಅವರ ಪರ ಬ್ಯಾಟಿಂಗ್ ಮಾಡಿದರು.

BJP CONGRESS FLAG

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಎಸ್.ಟಿ.ಸೋಮಶೇಖರ್ ಅವರು ಸುದ್ದಿಗೋಷ್ಠಿ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ರಾಮನಗರ ಜಿಲ್ಲೆಯಲ್ಲಿ ಲೀಡರ್‍ಶಿಪ್ ಫೈಟ್ ನಡೆಸುತ್ತಿದ್ದಾರೆ. ಒಕ್ಕಲಿಗರ ಜಿಲ್ಲೆ ಎಂಬ ಕಾರಣಕ್ಕೆ ನಾಯಕತ್ವಕ್ಕೆ ಪೈಪೋಟಿ ನಡೆಯುತ್ತಿದೆ. 4 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿಗಾಗಿ ಶ್ರಮಿಸುತ್ತಿರುವ ಕಾರಣ ಅಶ್ವತ್ಥ ನಾರಾಯಣ್ ಅವರ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಅಲ್ಲಿ ಅಭಿವೃದ್ಧಿ ಕಾರ್ಯಕ್ರಮ ನಡೆಸುತ್ತಿದ್ದಾರೆ. ಇದರಿಂದಾಗಿ ಪ್ರಕರಣದಲ್ಲಿ ಆಧಾರ ರಹಿತ ಆರೋಪ ಮಾಡುವ ಮೂಲಕ ಅಶ್ವತ್ಥ ನಾರಾಯಣ್ ಅವರ ವಿರುದ್ಧ ಷಡ್ಯಂತ್ರ ಮಾಡಲಾಗಿದೆ ಎಂದು ಆಕ್ಷೇಪಿಸಿದರು.

ಅಶ್ವತ್ಥ ನಾರಾಯಣ್ ವಿರುದ್ಧ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪ ಮಾಡುತ್ತಿದ್ದಾರೆ. ಪಿಎಸ್‍ಐ ನೇಮಕಾತಿ ಪ್ರಕರಣದಲ್ಲಿ ನಿರುದ್ಯೋಗಿಗಳ ಭವಿಷ್ಯದ ವಿಚಾರದಲ್ಲಿ ಚೆಲ್ಲಾಟ ಆಡಬಾರದು ಎಂಬ ಉದ್ದೇಶ ನಮ್ಮದು ಎಂದು ತಿಳಿಸಿದರು. ಅಂತೆಕಂತೆಗಳಿಗೆ ಉತ್ತರ ಕೊಡುವುದಿಲ್ಲ. ಪ್ರಾಮಾಣಿಕವಾಗಿ ತನಿಖೆ ಆಗಬೇಕಿದೆ. ಮಾಹಿತಿ ಕೊಟ್ಟರೆ ಸಮರ್ಥವಾಗಿ ತನಿಖೆ ನಡೆಯಲು ಸಹಕಾರಿ ಎಂದು ತಿಳಿಸಿದರು. ಇದನ್ನೂ ಓದಿ: ಕರ್ನಾಟಕ ಮಾಧ್ಯಮ ಅಕಾಡೆಮಿ ನಿಯೋಗದಿಂದ ರಾಜ್ಯಪಾಲರ ಭೇಟಿ – ಪತ್ರಿಕಾ ದಿನಾಚರಣೆಗೆ ಆಹ್ವಾನ 

ASHWATH NARAYAN

ಅಶ್ವತ್ಥ ನಾರಾಯಣ್ ಅವರು ಅನೇಕ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದಾರೆ. ಅಲ್ಲದೆ ಶಿಕ್ಷಣ ಕ್ಷೇತ್ರದಲ್ಲಿ 2 ವರ್ಷಗಳಲ್ಲಿ ಕ್ರಾಂತಿಕಾರಿ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಇದನ್ನು ಸಹಿಸಲಾಗದೆ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಅಸ್ತಿತ್ವಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಇವರು ತಮ್ಮ ಹುದ್ದೆಯ ಘನತೆಗೆ ತಕ್ಕಂತೆ ನಡೆದುಕೊಳ್ಳಬೇಕು. ಅಶ್ವತ್ಥ ನಾರಾಯಣ್ ಅವರ ತೇಜೋವಧೆ ಮಾಡುವುದು ಸರಿಯಲ್ಲ ಎಂದು ಬೆಂಬಲ ಕೊಟ್ಟರು.

SIDDU DKSHI

ಅಪರಾಧಿಗಳಿಗೆ ಶಿಕ್ಷೆ ಆಗಬೇಕು ಎಂದ ಅವರು, ಪ್ರಿಯಾಂಕ್ ಖರ್ಗೆ ಅವರಿಗೆ ನೋಟಿಸ್ ಕೊಡಬಾರದು ಎಂದಿದೆಯೇ? ದಾಖಲಾತಿ ಕೊಡಿ ಎಂದು ಕೇಳಿದ್ದಾರೆ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು. ಕರ್ನಾಟಕ ಪೊಲೀಸ್ ನಂಬರ್ ಒನ್ ಪೊಲೀಸ್. ಪೊಲೀಸರು ಯಾರದೇ ಹಿಡಿತದಲಿಲ್ಲ. ಅವರದೇ ಆದ ತನಿಖೆ ಮಾಡಲಿದ್ದಾರೆ ಎಂದು ಪ್ರಶ್ನೆಗೆ ಉತ್ತರಿಸಿದರು.

Basavaraja Bommai

ನಾಲ್ಕು ವರ್ಷ ಎಲ್ಲ ಮಲಗಿದ್ದರು. ನಾವು ಜೀವಂತವಾಗಿ ಇದ್ದೇವೆಂದು ತೋರಿಸಲು ಈಗ ನಿರಾಧಾರ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ವಿಪಕ್ಷಗಳ ವಿರುದ್ಧ ಆಕ್ರೋಶ ಹೊರಹಾಕಿದರು. ನಮ್ಮ ಸರ್ಕಾರ ಈಗ ಸಮರ್ಥವಾಗಿದೆ. ಸಿಎಂ ಬೊಮ್ಮಾಯಿ ಅವರು ಸಮರ್ಥರಿದ್ದಾರೆ. ‘ಉಪ್ಪು ತಿಂದವರು ನೀರು ಕುಡಿಯಲಿದ್ದಾರೆ’ ಎಂದರು. ಇದನ್ನೂ ಓದಿ:  ಟ್ರಕ್ ಟರ್ಮಿನಲ್ ನಿರ್ಮಾಣ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಗ್ರಾಮಸ್ಥರು 

ಕಾಂಗ್ರೆಸ್ ಪಕ್ಷದ ಡಿ.ಕೆ.ಸುರೇಶ್ ಸಂಸದರಾದ ಬಳಿಕ ಬದಲಾಗುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ, ಅವರು ಗಲಾಟೆ ಮಾಡುವುದನ್ನು ಸಾರ್ವಜನಿಕರೂ ಗಮನಿಸಲಿದ್ದಾರೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *