ಬೆಂಗಳೂರು: ಶಾಸಕಾಂಗ ಪಕ್ಷದ ನಾಯಕನಾಗಿ ಡಿ.ಕೆ.ಶಿವಕುಮಾರ್ (D.K.Shivakumar) ಆಯ್ಕೆಯಾಗಿದ್ದಾರೆ.
ವಿಧಾನಸೌಧದಲ್ಲಿ ನಡೆದ ಸಿಎಲ್‌ಪಿ ಸಭೆಯಲ್ಲಿ ಸಿದ್ದರಾಮಯ್ಯ ಆರಂಭಿಕ ಮಾತುಗಳನ್ನಾಡಿದರು. ಈ ವೇಳೆ ನಿರ್ಣಯ ಮಂಡಿಸಿದರು. ಸಿಎಲ್‌ಪಿ ನಾಯಕನಾಗಿ ಡಿಕೆಶಿ ಹೆಸರನ್ನು ಸಿದ್ದರಾಮಯ್ಯ ಅವರು ಪ್ರಸ್ತಾಪಿಸಿದರು. ಅದಕ್ಕೆ ಜಿ.ಪರಮೇಶ್ವರ್ ಅವರು ಅನುಮೋದಿಸಿದರು. ಕೊನೆಗೆ ಡಿಕೆಶಿ ಆಯ್ಕೆಗೆ ಶಾಸಕರು ಕೂಡ ಕೈ ಎತ್ತುವ ಮೂಲಕ ಅನುಮೋದನೆ ನೀಡಿದರು. ಇದನ್ನೂ ಓದಿ: ಡಿಕೆಶಿ ಅವಧಿಯಲ್ಲಾದರೂ ರಾಜ್ಯ ಅಭಿವೃದ್ಧಿ ಕಾಣಲಿ: ಅರವಿಂದ್ ಬೆಲ್ಲದ್
ಜೊತೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ಘೋಷಿಸಿದರು. ಸಿದ್ದರಾಮಯ್ಯ ಘೋಷಣೆಗೆ ಪರಮೇಶ್ವರ್ ಅನುಮೋದನೆ ನೀಡಿದರು. ಐದು ನಿಮಿಷದಲ್ಲಿ ಆಯ್ಕೆ ಪ್ರಕ್ರಿಯೆ ಮುಗಿಯಿತು.
ಇದೇ ಹೊತ್ತಲ್ಲಿ ಸಿಎಲ್‌ಪಿ ಸಭೆಗೆ 10 ನಿಮಿಷ ಬ್ರೇಕ್ ತೆಗೆದುಕೊಳ್ಳಲಾಯಿತು. ಈ ವೇಳೆ, ಸಿಎಂ ಕಚೇರಿಗೆ ಕೆ.ಸಿ.ವೇಣುಗೋಪಾಲ್ ಆಗಮಿಸಿದರು. ಡಿಕೆಶಿ ಬಿಟ್ಟು ಸಿಎಂ ಕಚೇರಿಯಲ್ಲಿ ಸಿದ್ದರಾಮಯ್ಯ, ವೇಣುಗೋಪಾಲ್, ಸುರ್ಜೇವಾಲಾ ಪ್ರತ್ಯೇಕವಾಗಿ ಸಭೆ ನಡೆಸಿದರು. ಕೆ.ಸಿ.ವೇಣುಗೋಪಾಲ್ ಅವರು ರಾಹುಲ್ ಗಾಂಧಿಗೆ ಕರೆ ಮಾಡಿ, ಸಿದ್ದರಾಮಯ್ಯ ರಾಜೀನಾಮೆ ಅಧಿಕೃತವಾಗಿ ತಿಳಿಸಿದರು. ಎಐಸಿಸಿ ಆದೇಶದ ಮೇರೆಗೆ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪೂರ್ಣಗೊಂಡಿತು. ಸಭೆ ಬಳಿಕ ಮತ್ತೆ ಸಿಎಲ್‌ಪಿ ಸಭೆಯಲ್ಲಿ ಪಾಲ್ಗೊಂಡರು. ಇದನ್ನೂ ಓದಿ: ಮಾಜಿ ಸಚಿವ ವೆಂಕಟರಮಣಪ್ಪ ಅಂತಿಮ ದರ್ಶನ ಪಡೆದ ಸಿದ್ದರಾಮಯ್ಯ
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ ಡಿಕೆಶಿ ಆಯ್ಕೆ ಸುಸೂತ್ರವಾಗಿ ನಡೆಯಿತು. ಈಗ ಡಿ.ಕೆ.ಶಿವಕುಮಾರ್ 10 ನಾಯಕರ ಜೊತೆಗೂಡಿ ರಾಜಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ. ಬುಧವಾರ ಡಿಕೆಶಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
