– ಮುರಸು, ಅರ್ನಬ್ ಬಳಿಕ ಬರ್ತಿದೆ ಅಕ್ವಾನ್ ಆಂಧ್ರ ಪ್ರದೇಶಕ್ಕೆ ಸೈಕ್ಲೋನ್ ಗಂಡಾಂತರ
ಅಮರಾವತಿ: ಬಂಗಾಳಕೊಲ್ಲಿಯಲ್ಲಿ (bangala Kolli) ಉಂಟಾಗಿರುವ ವಾಯುಭಾರ ಕುಸಿತ ಈಗ ‘ಅಕ್ವಾನ್’ (Akwan) ಚಂಡಮಾರುತವಾಗಿ ಬದಲಾಗಿದ್ದು, ಎರಡು ದಿನಗಳಲ್ಲಿ ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸಲಿದೆ.
ಕಳೆದ ಮೂರು ವಾರಗಳಲ್ಲಿ ಆಂಧ್ರಕ್ಕೆ ಎದುರಾಗುತ್ತಿರುವ ಮೂರನೇ ಚಂಡಮಾರುತ ಇದಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ.
ಭಾರತೀಯ ಹವಾಮಾನ ಇಲಾಖೆ (IMD) ಮಾಹಿತಿಯಂತೆ, ನವೆಂಬರ್ 20ರ ಮಧ್ಯಾಹ್ನದ ವೇಳೆಗೆ ಅಕ್ವಾನ್ ಚಂಡಮಾರುತವು ಆಂಧ್ರಪ್ರದೇಶದ ನೆಲ್ಲೂರು ಮತ್ತು ತುನಿ ನಡುವೆ ಕರಾವಳಿ ದಾಟಲಿದೆ. ಈ ವೇಳೆ ಗಂಟೆಗೆ 120 ರಿಂದ 130 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸಲಿದ್ದು, ಗಾಳಿಯ ವೇಗ ಗಂಟೆಗೆ 145 ಕಿ.ಮೀ.ವರೆಗೂ ತಲುಪುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಮತ್ತು ದಕ್ಷಿಣ ಒಡಿಶಾ ಕರಾವಳಿಗೆ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ.
ಚಂಡಮಾರುತದ ಪರಿಣಾಮ ನವೆಂಬರ್ 19 ಮತ್ತು 20 ರಂದು ಕರಾವಳಿ ಆಂಧ್ರಪ್ರದೇಶದ ಕೊನಸೀಮಾ, ಕಾಕಿನಾಡ, ಪೂರ್ವ ಗೋದಾವರಿ, ಪಶ್ಚಿಮ ಗೋದಾವರಿ, ಕೃಷ್ಣ, ಎನ್ಟಿಆರ್ ಮತ್ತು ಗುಂಟೂರು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ. ಇನ್ನು ಒಡಿಶಾದಲ್ಲಿ ನವೆಂಬರ್ 18 ರಿಂದ 21 ರವರೆಗೆ ಮಳೆ ಅಬ್ಬರಿಸಲಿದ್ದು, ಪುರಿ, ಗಂಜಾಂ, ಗಜಪತಿ ಸೇರಿದಂತೆ ಹಲವು ಜಿಲ್ಲೆಗಳಿಗೆ ಅಲರ್ಟ್ ನೀಡಲಾಗಿದೆ. ತಮಿಳುನಾಡು ಮತ್ತು ಪುದುಚೇರಿಯಲ್ಲೂ ನವೆಂಬರ್ 20 ರವರೆಗೆ ಮಳೆಯಾಗಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.ಇದನ್ನೂ ಓದಿ: ಗುರುನಂದನ್ ನಟನೆಯ `Mr. ಜಾಕ್’ ಟ್ರೇಲರ್ ಅನಾವರಣ
ಈಗಾಗಲೇ ‘ಮುರಸು’ ಮತ್ತು ‘ಅರ್ನಾಬ್’ ಚಂಡಮಾರುತಗಳ ಅಬ್ಬರಕ್ಕೆ ಆಂಧ್ರಪ್ರದೇಶದಲ್ಲಿ ಸುಮಾರು 7,000 ಕೋಟಿ ರೂ. ಮೌಲ್ಯದ ಬೆಳೆ ಹಾನಿಯಾಗಿದೆ. ಈಗ ಮೂರನೇ ಸೈಕ್ಲೋನ್ ಎದುರಾಗಿರುವುದರಿಂದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಮುನ್ನಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ (NDRF) ತಂಡಗಳನ್ನು ನಿಯೋಜಿಸಲಾಗಿದೆ. ಒಡಿಶಾ ಸರ್ಕಾರ ಕೂಡ ತಗ್ಗು ಪ್ರದೇಶದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ಸೂಚಿಸಿದೆ.ಇದನ್ನೂ ಓದಿ: ಧರ್ಮದ ಆಧಾರದ ಮೇಲೆ ಯಾವುದೇ ದಾಖಲೆಗಳಿಲ್ಲ – ಹಿಂದೂಗಳು ನಾಪತ್ತೆ ಎಂಬ ಯೋಗಿ ಹೇಳಿಕೆಗೆ ಯುಪಿ ಸಿಇಒ ಕೌಂಟರ್
