Connect with us

ಟ್ರಂಪ್‍ಗೆ ಮಧ್ಯದ ಬೆರಳು ತೋರಿಸಿದ್ದಕ್ಕೆ ಕೆಲ್ಸ ಕಳ್ಕೊಂಡ ಮಹಿಳೆ!

ಟ್ರಂಪ್‍ಗೆ ಮಧ್ಯದ ಬೆರಳು ತೋರಿಸಿದ್ದಕ್ಕೆ ಕೆಲ್ಸ ಕಳ್ಕೊಂಡ ಮಹಿಳೆ!

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ಗೆ ಮಧ್ಯದ ಬೆರಳು ತೋರಿಸಿದ್ದಕ್ಕೆ ಮಹಿಳೆಯೊಬ್ಬರು ಉದ್ಯೋಗವನ್ನು ಕಳೆದುಕೊಂಡಿದ್ದಾರೆ.

50 ವರ್ಷದ ಜೂಲಿ ಬ್ರಿಸ್ಕ್ ಮ್ಯಾನ್ ಎಂಬವರು ಅಕ್ಟೋಬರ್ 28 ರಂದು ಸೈಕಲ್ ತುಳಿಯುತ್ತಾ ಹೋಗುತ್ತಿದ್ದರು. ಈ ಸಮಯದಲ್ಲಿ ಟ್ರಂಪ್ ತಮ್ಮ ಬೆಂಗಾವಲು ವಾಹನದ ಜೊತೆ ಗಾಲ್ಫ್ ಆಡಲು ಹೋಗುತ್ತಿದ್ದರು. ಟ್ರಂಪ್ ಹೋಗುವುದನ್ನು ನೋಡಿದ ಬ್ರಿಸ್ಕ್ ಮ್ಯಾನ್ ಮಧ್ಯದ ಬೆರಳನ್ನು ಎತ್ತಿ ಬೆಂಗಾವಲು ವಾಹನ ಪಡೆಗೆ ತೋರಿಸಿದ್ದಾರೆ.

ಈ ವೇಳೆ ಬೆಂಗಾವಲು ಪಡೆಯ ವಾಹನದಲ್ಲಿದ್ದ ಫೋಟೋ ಗ್ರಾಫರ್ ಒಬ್ಬರು ಬ್ರಿಸ್ಕ್ ಮ್ಯಾನ್ ಅವರ ಫೋಟೋವನ್ನು ಕ್ಲಿಕ್ಕಿಸಿದ್ದರು. ನಂತರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗಿ ವೈರಲ್ ಆಗಿತ್ತು.

ಫೋಟೋದಿಂದಾಗಿ ಮಹಿಳೆಯ ಉದ್ಯೋಗಕ್ಕೆ ಕುತ್ತು ಬಂದಿದ್ದು, ಕೆಲಸ ಮಾಡುತ್ತಿದ್ದ ಸಂಸ್ಥೆ ಈಗ ಆಕೆಯನ್ನು ವಜಾಗೊಳಿಸಿದೆ. ವರ್ಜೀನಿಯಾ ಮೂಲದ ಅಕಿಮಾ ಕಂಪೆನಿಯಲ್ಲಿ ಮಾರ್ಕೆಟಿಂಗ್, ಕಮ್ಯುನಿಕೇಷನ್ ಸ್ಪೆಷಲಿಸ್ಟ್ ಆಗಿ ಬ್ರಿಸ್ಕ್ ಮ್ಯಾನ್ 6 ತಿಂಗಳಿನಿಂದ ಕೆಲಸ ಮಾಡುತ್ತಿದ್ದರು. ಅಧ್ಯಕ್ಷರಿಗೆ ಮಧ್ಯದ ಬೆರಳು ತೋರಿಸಿದ್ದಕ್ಕೆ ಕಂಪೆನಿ, ಸಾಮಾಜಿಕ ಮಾಧ್ಯಮದ ನೀತಿಯನ್ನು ಉಲ್ಲಂಘಿಸಿದ ಪರಿಣಾಮ ನಮ್ಮ ನಮಗೆ ಕೆಟ್ಟ ಹೆಸರು ಬಂದಿದೆ ಎಂದು ಕಾರಣ ನೀಡಿ ಕೆಲಸದಿಂದ ತೆಗೆದುಹಾಕಿದೆ.

ಕೆಲಸದಿಂದ ವಜಾಗೊಳಿಸಿದ ಹಿನ್ನೆಲೆಯಲ್ಲಿ ಮಾಧ್ಯಮಗಳ ಜೊತೆ ಪ್ರತಿಕ್ರಿಯಿಸಿದ ಅವರು, ಈ ಘಟನೆಯಿಂದ ನನಗೆ ಯಾವುದೇ ಬೇಸರವಿಲ್ಲ. ಟ್ರಂಪ್ ಕಾರಿನಲ್ಲಿ ಬರುತ್ತಿದ್ದಂತೆ ನನ್ನ ರಕ್ತ ಕುದಿಯಲು ಆರಂಭವಾಯಿತು. ಟ್ರಂಪ್ ವಿರುದ್ಧ ಈ ರೀತಿ ಪ್ರತಿಭಟಿಸಿದ್ದಕ್ಕೆ ನನಗೆ ಸಂತೋಷವಿದೆ. ನನ್ನ ಈ ಪ್ರತಿಭಟನೆಗೆ ಭಾರೀ ಸಂಖ್ಯೆಯಲ್ಲಿ ಜನರು ಬೆಂಬಲಿಸಿದ್ದು ನನಗೆ ಸಂತೋಷ ನೀಡಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಫೋಟೋವನ್ನು ಫೇಸ್‍ಬುಕ್ ಮತ್ತು ಟ್ಟಿಟ್ಟರ್ ಪ್ರೊಫೈಲ್ ಫೋಟೋವನ್ನಾಗಿ ಬ್ರಿಸ್ಕ್ ಮ್ಯಾನ್ ಬದಲಾಯಿಸಿದ್ದರು.

ಎರಡು ಮಕ್ಕಳ ತಾಯಿಯಾದ ಬ್ರಿಸ್ಕ್ ಮ್ಯಾನ್ ಸದ್ಯಕ್ಕೆ ಹೊಸ ಉದ್ಯೋಗ ಹುಡುಕುವ ಕೆಲಸದಲ್ಲಿ ನಿರತರಾಗಿದ್ದಾರೆ. ಫೋಟೋ ವೈರಲ್ ಆಗಿದ್ದೆ ತಡ ಸಾಮಾಜಿಕ ಜಾಲತಾಣದಲ್ಲಿ ಬ್ರಿಸ್ಕ್ ಮ್ಯಾನ್ ಸಾಹಸಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗಿತ್ತು. ಮುಂದಿನ ಚುನಾವಣೆಗೆ ಸ್ಪರ್ಧಿಸಬೇಕೆಂದು ಜನ ಕಮೆಂಟ್ ಮಾಡಿದ್ದರು.

Advertisement
Advertisement