ಹೈದರಾಬಾದ್: ನವದಂಪತಿಯನ್ನು ವಧುವಿನ ಚಿಕ್ಕಪ್ಪಂದಿರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿರುವ ಘಟನೆ ತೆಲಂಗಾಣ ರಾಜ್ಯದ ವೇಮುಲವಾಡ ಜಿಲ್ಲೆಯ ಬಲ್‍ರಾಜ್‍ಪಲ್ಲಿ ಗ್ರಾಮದಲ್ಲಿ ನಡೆದಿದೆ. ನವದಂಪತಿ ನಾಲ್ಕು ತಿಂಗಳು ಹಿಂದೆ ಒಬ್ಬರನೊಬ್ಬರನ್ನು ಪ್ರೀತಿಸಿ ಮದುವೆ ಆಗಿದ್ದರು. ಶುಕ್ರವಾರ ವಧುವಿನ ಚಿಕ್ಕಪ್ಪಂದಿರು ಚಾಕು ಮತ್ತು ಡ್ರ್ಯಾಗರ್ ನಿಂದ ಇಬ್ಬರನ್ನೂ ಕೊಚ್ಚಿ ಕೊಲೆ ಮಾಡಿದ್ದಾರೆ.
ನೆದುರೈ ಹರೀಶ್ (22) ಮತ್ತು ಎನ್.ರಚನಾ (21) ಕೊಲೆಯಾದ ನವದಂಪತಿ. ಹರೀಶ್ ಮತ್ತು ರಚನಾ ಬಲ್‍ರಾಜ್‍ಪಲ್ಲಿಯ ನಿವಾಸಿಗಳಾಗಿದ್ದು, ಎರಡು ವರ್ಷಗಳಿಂದ ಪದವಿಧರೆಯಾಗಿರುವ ರಚನಾ ಆಟೋ ಚಾಲಕನಾಗಿರುವ ಹರೀಶ್ ಎಂಬಾತನನ್ನು ಪ್ರೀತಿಸುತ್ತಿದ್ದರು. ರಚನಾ ತನ್ನ ಪೋಷಕರ ನಿಧನವಾದ ಬಳಿಕ ಚಿಕ್ಕಪ್ಪಂದಿರಾದ ಅಶೋಕ್, ಶೇಖರ್ ಮತ್ತು ನಾಗರಾಜು ಅವರೊಂದಿಗೆ ವಾಸವಾಗಿದ್ದರು. ಇಬ್ಬರ ಜಾತಿ ಬೇರೆಯಾಗಿದ್ದರಿಂದ ರಚನಾ ಮನೆಯಲ್ಲಿ ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
Advertisement
Advertisement
ಆದರೆ ರಚನಾ ಮತ್ತು ಹರೀಶ್ ನಾಲ್ಕು ತಿಂಗಳ ಹಿಂದೆ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದರು. ಮದುವೆ ಬಳಿಕ ಮರುಪಾಕ ಎಂಬ ಗ್ರಾಮದಲ್ಲಿ ಹರೀಶ್ ಸಂಬಂಧಿಯೊಬ್ಬರ ಮನೆಯಲ್ಲಿ ಆಶ್ರಯ ಪಡೆದಿದ್ದರು.
Advertisement
ಮದುವೆ ನಂತರ ಹರೀಶ್ ಮತ್ತು ರಚನಾ ತಮಗೆ ಜೀವಬೆದರಿಕೆ ಇದೆ ಎಂದು ವೇಮುಲವಾಡ ಪೊಲೀಸ್ ಠಾಣೆಯಲ್ಲಿ ದೂರನ್ನು ಸಹ ದಾಖಲಿಸಿದ್ದರು. ಈ ಸಂಬಂಧ ಪೊಲೀಸರು ರಚನಾರ ಚಿಕ್ಕಪ್ಪಂದಿರನ್ನು ಕರೆಸಿ ತಿಳಿಹೇಳಿ ಕಳುಹಿಸಿದ್ದರು.
Advertisement
ಗುರುವಾರ ರಚನಾ ಮತ್ತು ಹರೀಶ್ ಸ್ವಂತ ಊರು ಬಲ್‍ರಾಜ್‍ಪಲ್ಲಿ ಗೆ ಬಂದಿದ್ದಾರೆ. ಈ ವಿಷಯ ತಿಳಿದ ರಚನಾ ಚಿಕ್ಕಪ್ಪಂದಿರು ಚಾಕು, ಡ್ರ್ಯಾಗರ್ ಗಳಿಂದ ಇಬ್ಬರನ್ನು ಕೊಲೆ ಮಾಡಿದ್ದಾರೆ. ತೀವ್ರ ರಕ್ತಸ್ರಾವ ಹಿನ್ನೆಲೆಯಲ್ಲಿ ಹರೀಶ್ ಮತ್ತು ರಚನಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆ ಬಳಿಕ ರಚನಾ ಚಿಕ್ಕಪ್ಪಂದಿರು ಗ್ರಾಮದಿಂದ ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ವೇಮುಲವಾಡ ಗ್ರಾಮೀಣ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಮಾಧವಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಪರಾರಿಯಾಗಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.