ಚಂಡೀಗಢ: ನೀಡಿದ ಭರವಸೆಯನ್ನು ಈಡೇರಿಸದ್ದಕ್ಕೆ ಮ್ಯಾಟ್ರಿಮೋನಿಯಲ್ ಜಾಲತಾಣಕ್ಕೆ ಗ್ರಾಹಕರ ನ್ಯಾಯಾಲಯವು ದಂಡ ವಿಧಿಸಿದ್ದು, ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಸೂಚಿಸಿದೆ.
ಮೊಹಾಲಿಯ ಜಿಲ್ಲಾ ಗ್ರಾಹಕ ನ್ಯಾಯಾಲಯವು ಈ ಆದೇಶ ಹೊರಡಿಸಿದ್ದು, ಮ್ಯಾಟ್ರಿಮೋನಿ ಜಾಲತಾಣ ತನ್ನ ಭರವಸೆಯನ್ನು ಈಡೇರಿಸಿಲ್ಲ ಎಂದು ವೈದ್ಯೆ ಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣ ಆಲಿಸಿದ ನ್ಯಾಯಾಲಯ ಈ ಆದೇಶ ಹೊರಡಿಸಿದೆ. ಸಂತ್ರಸ್ತರು ನೀಡಿದ ನೋಂದಣಿ ಶುಲ್ಕ 50 ಸಾವಿರ ರೂ.ಗೆ ಶೇ.9ರಷ್ಟು ಬಡ್ಡಿ ಸೇರಿಸಿ ನೀಡುವಂತೆ ತಿಳಿಸಿದೆ. ಅಲ್ಲದೆ 12 ಸಾವಿರ ರೂ. ಮಾನಸಿಕ ಕಿರುಕುಳ ಹಾಗೂ ದಾವೆ ವೆಚ್ಚವನ್ನು ನೀಡುವಂತೆ ಕೋರ್ಟ್ ತಿಳಿಸಿದೆ.
Advertisement
Advertisement
ವರದಿಯ ಪ್ರಕಾರ ಸುರಿಂದರ್ ಪಾಲ್ ಸಿಂಗ್ ಚಹಲ್ ಅವರು 2017ರಲ್ಲಿ ತಮ್ಮ ಮಗಳಿಗೆ ವರನನ್ನು ಕೋರಿ ಪತ್ರಿಕೆಯಲ್ಲಿ ಜಾಹೀರಾತು ಪ್ರಕಟಿಸಿದ್ದರು. ನಂತರ ಮ್ಯಾಟ್ರಿಮೋನಿಯಲ್ ಸೈಟ್‍ನವರು ಚಹಲ್ ಅವರನ್ನು ಸಂಪರ್ಕಿಸಿ ಹರ್ಯಾಣ ನಾಗರಿಕ ವೈದ್ಯಕೀಯ ಸೇವೆಯಲ್ಲಿ ಕೆಲಸ ಮಾಡುತ್ತಿರುವ ಯುವತಿಗೆ ಜೋಡಿ ಹುಡುಕಿಕೊಡುವುದಾಗಿ ಭರವಸೆ ನೀಡಿದೆ.
Advertisement
ಏಜೆನ್ಸಿಯ ಭರವಸೆಯಿಂದಾಗಿ ಸಂತ್ರಸ್ತೆ ವೈವಾಹಿಕ ಸೈಟ್‍ನಲ್ಲಿ ನೋಂದಾಯಿಸಲು ನಿರ್ಧರಿಸಿದ್ದಾರೆ. ನಂತರ ರಾಯಲ್ ಮೆಂಬರ್ ಶಿಪ್‍ಗಾಗಿ ನೀವು 50 ಸಾವಿರ ರೂ. ಪಾವತಿಸಬೇಕು ಎಂದು ಏಜೆನ್ಸಿ ಕೇಳಿದೆ. ಆ ಹಣವನ್ನೂ ಪಾವತಿಸಿ ನೋಂದಾಯಿಸಿಕೊಂಡಿದ್ದಾರೆ.
Advertisement
ಯುವತಿಯು ಪಟ್ಟಿಯಲ್ಲಿ ಡಾಕ್ಟರ್ ಗೆ ಆದ್ಯತೆ ನೀಡಿದ್ದಾಳೆ. ಅಲ್ಲದೆ ಜಾಟ್ ಸಮುದಾಯದವರಾಗಿರಬೇಕು ಎಂದು ಸಹ ನೋಂದಣಿ ಸಂದರ್ಭದಲ್ಲಿ ಉಲ್ಲೇಖಿಸಿದ್ದಾಳೆ. ಒಂಬತ್ತು ತಿಂಗಳಲ್ಲಿ ಸೂಕ್ತ ಜೋಡಿಯನ್ನು ಹುಡುಕಿಕೊಡುವುದಾಗಿ ಕಂಪನಿ ಭರವಸೆ ನೀಡಿದೆ.
ನಂತರ ಮ್ಯಾಟ್ರಿಮೋನಿಯಲ್ ಸೈಟ್‍ನಿಂದ 18 ಪ್ರೊಫೈಲ್‍ಗಳನ್ನು ಅಪ್‍ಲೋಡ್ ಮಾಡಿದ್ದಾರೆ. ಆದರೆ ಹುಡುಗಿಗೆ ಯಾವುದೇ ಹುಡುಗನ ಪ್ರೊಫೈಲ್ ಹೊಂದಿಕೆಯಾಗಿಲ್ಲ. ಏಜೆನ್ಸಿಯ ಅಸಮರ್ಥತೆಯಿಂದ ಬೇಸರಗೊಂಡ ಚಹಲ್ ಒಪ್ಪಂದವನ್ನು ಮುರಿದು ಬಡ್ಡಿಯೊಂದಿಗೆ ತನ್ನ 50 ಸಾವಿರ ರೂ. ನೋಂದಣಿ ಹಣವನ್ನು ಮರುಪಾವತಿ ಮಾಡುವಂತೆ ಒತ್ತಾಯಿಸಿದ್ದಾರೆ.
ಆದರೆ ಏಜೆನ್ಸಿಯು ನಿಮ್ಮ ಅಗತ್ಯಕ್ಕನುಗುಣವಾಗಿ ಪ್ರೊಫೈಲ್ ಕಳುಹಿಸಲಾಗಿದೆ. ನಾವು ಹಣವನ್ನು ಮರುಪಾವತಿಸುವುದಿಲ್ಲ ಎಂದು ವಾದಿಸಿದೆ. ಹೊಂದಾಣಿಕೆ ಇರುವ ಪ್ರೊಫೈಲ್‍ಗಳನ್ನು ಮಾತ್ರ ನಾವು ಕಳುಹಿಸುತ್ತೇವೆ ಶೇ.100ರಷ್ಟು ಹೊಂದುವ ಪ್ರೊಫೈಲ್‍ಗಳು ಸಿಗುವುದಿಲ್ಲ ಎಂದು ಸಹ ಸಂಸ್ಥೆ ತಿಳಿಸಿದೆ.
ನಂತರ ಚಹಲ್ ಅವರು ಗ್ರಾಹಕರ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಎರಡೂ ಕಡೆಯ ವಾದಗಳನ್ನು ಆಲಿಸಿದ ಗ್ರಾಹಕರ ನ್ಯಾಯಾಲಯ, ಇವೆಲ್ಲ ಅಸಂಬದ್ಧ ಪ್ರೊಫೈಲ್‍ಗಳು, ಇವು ದೂರುದಾರರಿಗೆ ವ್ಯರ್ಥ. ದೂರುದಾರರ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿರುವುದು ಮಾತ್ರವಲ್ಲದೆ, ಅವರಿಗೆ ತೀವ್ರ ಮಾನಸಿಕ ಹಾಗೂ ದೈಹಿಕ ಕಿರುಕುಳಕ್ಕೂ ಕಾರಣವಾಗಿದೆ. ಏಜೆನ್ಸಿಯು ತಮ್ಮ ವೃತ್ತಿಪರ ಸೇವೆಯಲ್ಲಿ ವಿಫಲವಾಗಿದೆ. ಹುಡುಗಿಗೆ ಸೂಕ್ತ ಜೋಡಿಯನ್ನು ಹುಡುಕಿಕೊಡದಿರುವುದರಿಂದ ಆಕೆಯ ಮದುವೆಯ ವಿಳಂಬಕ್ಕೆ ಕಾರಣವಾಗಿದೆ ಎಂದು ತರಾಟೆಗೆ ತೆಗೆದುಕೊಂಡಿದೆ.
ನಂತರ ನ್ಯಾಯಾಲಯವು ಸೆಪ್ಟೆಂಬರ್ 26,2017ರಿಂದ ಬಡ್ಡಿ ಸಮೇತ ಗ್ರಾಹಕರ ಹಣವನ್ನು ಮರುಪಾವತಿಸುವಂತೆ ಮ್ಯಾಟ್ರಿಮೋನಿಯಲ್ ಸೈಟ್‍ಗೆ ನಿರ್ದೇಶಿಸಿದೆ. ಮಾನಸಿಕ ಕಿರುಕುಳ ನೀಡಿದ್ದಕ್ಕೆ 7 ಸಾವಿರ ರೂ., ದಾವೆ ವೆಚ್ಚವಾಗಿ 5 ಸಾವಿರ ರೂ. ಪರಿಹಾರ ನೀಡುವಂತೆಯೂ ಇದೇ ವೇಳೆ ಸೂಚಿಸಿದೆ.