ಬೆಂಗಳೂರು: ಮೊದಲ ಹಂತದಲ್ಲಿ ರಾಜ್ಯದಲ್ಲಿನ 250 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ದೇಶದಲ್ಲೇ ಮಾದರಿಯಾದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನಾಗಿಸುವ ಯೊಜನೆಯನ್ನು ಸರ್ಕಾರ ಅನುಷ್ಠಾನಗೊಳಿಸಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ತಿಳಿಸಿದ್ದಾರೆ.
Advertisement
ಚಿಕ್ಕಬಳ್ಳಾಪುರ ನಗರದ ಪೆರೇಸಂದ್ರ ಗ್ರಾಮದಲ್ಲಿ ಬುಧವಾರ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಕಾಮಗಾರಿಗೆ ಅವರು ಶಿಲಾನ್ಯಾಸ ಮಾಡುವ ಮೂಲಕ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. 25 ಸಾವಿರ ಚದರ ಅಡಿಯಲ್ಲಿ ತಲಾ ಸುಮಾರು 9 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ದಿನದ 24 ಗಂಟೆಯು ಗುಣಮಟ್ಟದ ಆರೋಗ್ಯ ಸೌಲಭ್ಯ ದೊರಕಲಿದ್ದು, ಈಗಿರುವ 6 ಹಾಸಿಗೆಗಳ ಬದಲಾಗಿ 12 ಹಾಸಿಗೆಗಳ ವ್ಯವಸ್ಥೆ ಇರಲಿದೆ. ಒಬ್ಬ ವೈದ್ಯರ ಬದಲಾಗಗಿ ಮೂವರು ವೈದ್ಯರು ಇರುತ್ತಾರೆ. ದಾದಿಯರು, ತಾಂತ್ರಿಕ ಸಹಾಯಕರು, ಡಿ-ದರ್ಜೆ ನೌಕರರು ಸೇರಿದಂತೆ ಈಗಿರುವ ಎಲ್ಲಾ ಹುದ್ದೆಗಳ ಸಂಖ್ಯೆಗಳು ದ್ವಿಗುಣವಾಗಲಿವೆ ಎಂದರು.
Advertisement
Advertisement
ವೈದ್ಯಾಧಿಕಾರಿಗಳು ಸೇರಿದಂತೆ ಎಲ್ಲಾ ಸಿಬ್ಬಂದಿಯೂ ಕೇಂದ್ರದಲ್ಲಿಯೇ ಉಳಿದುಕೊಳ್ಳಲು ವಸತಿ ಗೃಹಗಳನ್ನು ನಿರ್ಮಿಸಲಾಗುತ್ತದೆ. ಕಡ್ಡಾಯವಾಗಿ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ವಸತಿ ಗೃಹಗಳಲ್ಲೇ ವಾಸವಿದ್ದು ಪಾಳಿ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸಬೇಕಾಗಿರುತ್ತದೆ. ಒಟ್ಟಾರೆ ಸುಸಜ್ಜಿತ ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಿರ್ಮಿಸಿ ದೇಶದಲ್ಲೇ ಮಾದರಿಯಾದ ಗುಣಮಟ್ಟದ ಆರೋಗ್ಯ ಸೇವೆ ನೀಡುವುದು ಸರ್ಕಾರದ ಆಶಯವಾಗಿದೆ ಎಂದು ಹೇಳಿದರು.
Advertisement
ಚಿಕ್ಕಬಳ್ಳಾಪುರದ ಪೆರೇಸಂದ್ರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಾಣ ಕಾಮಗಾರಿಗೆ ಇಂದು ಭೂಮಿ ಪೂಜೆ ನೆರವೇರಿಸಲಾಯಿತು.
ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿರುವ ಈ ಸುಸಜ್ಜಿತ ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಯನ್ನು ಜನರ ಬಳಿ ಕೊಂಡೊಯ್ಯಲಿದೆ.@BSBommai pic.twitter.com/mNR2kLHvf3
— Dr Sudhakar K (@mla_sudhakar) January 26, 2022
ಜಿಲ್ಲೆಯಲ್ಲಿ ಸದ್ಯಕ್ಕೆ ನಿರ್ಮಾಣವಾಗುತ್ತಿರುವ ಈ 3 ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಾಮಗಾರಿಗೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ 30 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿನ 250 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ದೇಶದಲ್ಲೇ ಮಾದರಿಯಾದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನಾಗಿಸಲಾಗುವುದು. ಈ ಮಹತ್ವಾಕಾಂಕ್ಷಿ ಯೊಜನೆಯ ಭಾಗವಾಗಿ ಇಂದು ಜಿಲ್ಲೆಯ ಪೆರೇಸಂದ್ರ, ಮತ್ತು ದಿಬ್ಬೂರು ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಮಾಡಲಾಗಿದ್ದು, ಮುಂದಿನ ಸಂಕ್ರಾಂತಿ ವೇಳೆಗೆ ಈ ಕೇಂದ್ರಗಳ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.
ನಮ್ಮ ಜಿಲ್ಲೆಯ ಜನರ ಆಶೋತ್ತರಗಳಿಗನುಗುಣವಾಗಿ ವೈದ್ಯಕೀಯ ಶಿಕ್ಷಣ ಸಂಸ್ಥೆ ಮತ್ತು 700 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಕನಸು ನನಸಾಗುವ ದಿನಗಳು ಹತ್ತಿರವಾಗಿದ್ದು, 2021-22 ನೇ ಸಾಲಿನಲ್ಲೇ ಸರ್ಕಾರಿ ವೈದ್ಯಕೀಯ ಕಾಲೇಜು ತಾತ್ಕಾಲಿಕ ವ್ಯವಸ್ಥೆಯಲ್ಲಿ ಮೊದಲು ಬಾಡಿಗೆ ಕಟ್ಟಡದಲ್ಲಿ ಜಿಲ್ಲೆಯಲ್ಲಿ ಆರಂಭವಾಗಲಿದೆ. ನಿರ್ಮಾಣ ಹಂತದಲ್ಲಿರುವ ವೈದ್ಯಕೀಯ ಕಾಲೇಜಿನ ಕಟ್ಟಡ ಬಳಕೆಗೆ ಲಭ್ಯವಾದ ಕೂಡಲೆ ಉದ್ಘಾಟನೆಯಾಗಿ ಶಾಶ್ವತವಾಗಿ ಜಿಲ್ಲಾ ಕೇಂದ್ರದಲ್ಲಿ (ಅರೂರು ಗ್ರಾ.ಪಂ ವ್ಯಾಪ್ತಿಯಲ್ಲಿ) ನಡೆಯಲಿದೆ. ಒಟ್ಟಾರೆ 2021-22 ಶೈಕ್ಷಣಿಕ ಸಾಲಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಲಿರುವ ವೈದ್ಯಕೀಯ ಶಿಕ್ಷಣ ಕಲಿಕಾ ವಿದ್ಯಾರ್ಥಿಗಳಿಗೆ ಇದರ ಲಾಭ ಈ ವರ್ಷವೇ ದೊರಕಲಿದೆ. ಈ ವರ್ಷವೇ 100 ವಿದ್ಯಾರ್ಥಿಗಳು ಪ್ರವೇಶ ಪಡೆಯಲಿದ್ದು,ಮುಂದಿನ ದಿನಗಳಲ್ಲಿ 50 ಸೀಟುಗಳು ಮಂಜೂರಾಗಿ ಪ್ರತಿ ವರ್ಷ 150 ವಿದ್ಯಾರ್ಥಿ ಸಾಮಥ್ರ್ಯದ ವೈದ್ಯಕೀಯ ಕಾಲೇಜಾಗಿ ಹೊರಹೊಮ್ಮಲಿದೆ.ಈ ಸಂಸ್ಥೆಯನ್ನು ರಾಷ್ಟ್ರದಲ್ಲೆ ಅತ್ಯುನ್ನತ ದರ್ಜೆಯ ವೈದ್ಯಕೀಯ ಶಿಕ್ಷಣ ಸಂಸ್ಥೆಯನ್ನಾಗಿ ಬೆಳೆಸಲಾಗುವುದು ಎಂದರು. ಇದನ್ನೂ ಓದಿ: ಸತ್ಯ, ಸಮಾನತೆಯ ಮೊದಲ ಹೆಜ್ಜೆಗೆ ನನ್ನ ಪ್ರಣಾಮಗಳು: ರಾಹುಲ್ ಗಾಂಧಿ
ಪ್ರಾಥಮಿಕ ಹಂತದಲ್ಲೇ ರೋಗವನ್ನು ಗುರುತಿಸಿ:
ಸಾರ್ವಜನಿಕ ಆಸ್ಪತ್ರೆ, ಆರೋಗ್ಯ ಕೇಂದ್ರಗಳು ಹಾಗೂ ಚಿಕಿತ್ಸಾ ಕೇಂದ್ರಗಳಲ್ಲಿ ದೊರೆಯುವ ಆರೋಗ್ಯ ಸೌಲಭ್ಯಗಳ ಕುರಿತು ಅರಿವು ಅಗತ್ಯವಾಗಿದ್ದು, ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯಬೇಕು. ಇತ್ತೀಚಿನ ದಿನಗಳಲ್ಲಿ ಸ್ತನ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾಗಲು ಅವಕಾಶವಿದ್ದರೂ ಸಹ ವಿದ್ಯಾವಂತ ಮಹಿಳೆಯರು ಪರೀಕ್ಷೆಗೊಳಪಡಲು ಹಿಂಜರಿಯುತ್ತಿದ್ದಾರೆ. ಆದರೆ ಹಿಂಜರಿಕೆ ಬಿಟ್ಟು ಪ್ರಾರಂಭಿಕ ಹಂತದಲ್ಲೇ ರೋಗವನ್ನು ಗುರುತಿಸಿ ಚಿಕಿತ್ಸೆ ಪಡೆಯಬೇಕು. ಯಾವುದೇ ಕಾಯಿಲೆ ಇರಲಿ ರೋಗ ಬಂದ ನಂತರ ಚಿಕಿತ್ಸೆ ಪಡೆಯುವುದಕ್ಕಿಂತ ರೋಗ ಬರದಂತೆ ಎಚ್ಚರವಹಿಸುವುದು ಅತ್ಯಂತ ಪರಿಣಾಮಕಾರಿಯಾಗಿದ್ದು, ಉತ್ತಮ ಜೀವನ ಕ್ರಮ ಮತ್ತು ಆಹಾರ ಕ್ರಮವನ್ನು ಪಾಲಿಸುವ ಮೂಲಕ ಆರೋಗ್ಯವಂತ ಜೀವನ ನಡೆಸಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರಾಥಮಿಕ ಹಂತದಲ್ಲೇ ರೋಗವನ್ನು ಗುರುತಿಸಲು ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ.ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಉಪವಿಭಾಗಾಧಿಕಾರಿ ಡಾ: ಜಿ.ಸಂತೋಷ್ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದಿರಾ ಆರ್.ಕಬಾಡೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅರ್ಸಲನ್, ಜಿಲ್ಲಾಪಂಚಾಯತ್ ಮಾಜಿ ಅಧ್ಯಕ್ಷ ಕೇಶವರೆಡ್ಡಿ, ತಹಸೀಲ್ದಾರ್ ಗಣಪತಿಶಾಸ್ತ್ರೀ, ಮೆಡಿಕಲ್ ಕಾಲೇಜಿನ ಸಿ. ಇ. ಓ ಸಿದ್ಧೀಕ್, ಕಾರ್ಯಪಾಲಕ ಅಭಿಯಂತರರು ಮಂಜಪ್ಪ, ವೈದ್ಯಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ವಂದಿ ಸೇರಿದಂತೆ ಅರೂರು ಮತ್ತು ಪೆರೇಸಂದ್ರ ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು, ಆಶಾ ಕಾರ್ಯಕರ್ತೆಯರು ಮುಂತಾದವರು ಉಪಸ್ಥಿತರಿದ್ದರು.