ಬೆಂಗಳೂರು: ಕಬ್ಬಿಗೆ ಎಫ್.ಆರ್.ಪಿ. ಹಾಗೂ ಎಥನಾಲ್‌ಗೆ ದರ ನಿಗದಿ ಮಾಡುವುದು ಕೇಂದ್ರ ಸರ್ಕಾರ ಹೀಗಾಗಿ ರೈತರು ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕೇ ಹೊರತು ರಾಜ್ಯದ ವಿರುದ್ಧ ಅಲ್ಲ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಬಿ ಖಂಡ್ರೆ (Eshwara Khandre) ಅಭಿಪ್ರಾಯಪಟ್ಟಿದ್ದಾರೆ.
ವಿಧಾನಸೌಧದಲ್ಲಿಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ವನ್ಯಜೀವಿ-ಮಾನವ ಸಂಘರ್ಷ ಕುರಿತ ಉನ್ನತ ಮಟ್ಟದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಕ್ಕರೆಯನ್ನು ಆಮದು ಮಾಡುವುದು, ರಫ್ತು ಮಾಡಲು ಅನುಮತಿ ನೀಡುವುದು ಕೂಡ ಕೇಂದ್ರ ಸರ್ಕಾರವೇ, ಇದರಲ್ಲಿ ರಾಜ್ಯ ಸರ್ಕಾರದ ಪಾತ್ರವಿಲ್ಲ. ವಸ್ತುಸ್ಥಿತಿಯನ್ನು ಮರೆ ಮಾಚಿ ಬಿಜೆಪಿಯವರು (BJP) ಈ ರೀತಿ ಪ್ರಚೋದನೆ ನೀಡುತ್ತಿರುವುದು ಸರಿಯಲ್ಲ ಎಂದು ಖಂಡಿಸಿದರು. ಇದನ್ನೂ ಓದಿ: ಮುಧೋಳ | ಭುಗಿಲೆದ್ದ ರೈತರ ಆಕ್ರೋಶ – 50ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳಿಗೆ ಬೆಂಕಿ, ಸಾವಿರಾರು ಟನ್ ಕಬ್ಬು ಭಸ್ಮ!
ರಾಜ್ಯ ಬಿಜೆಪಿ ನಾಯಕರು ಪ್ರಧಾನಿ ಬಳಿ ಹೋಗಿ ಸಕ್ಕರೆ ರಫ್ತಿಗೆ ಅನುಮತಿ ಪಡೆಯಲಿ ಆಗ ಸಕ್ಕರೆಗೆ ಬೇಡಿಕೆ ಬರುತ್ತದೆ. ಸಹಜವಾಗೇ ಕಬ್ಬಿನ ದರ ಏರಿಕೆ ಆಗುತ್ತದೆ. ಅದೇ ರೀತಿ ಎಥನಾಲ್ ದರವನ್ನೂ ಹೆಚ್ಚಳ ಮಾಡಿದರೆ ರೈತರಿಗೆ ಹೆಚ್ಚಿನ ಲಾಭ ಬರುತ್ತದೆ,ಕೇಂದ್ರ ಸರ್ಕಾರ ಅಬಕಾರಿ ಸುಂಕ ಬಿಟ್ಟರೆ ಸಮಸ್ಯೆ ಪರಿಹಾರವಾಗುತ್ತದೆ. ಬಿಜೆಪಿಯವರು ಈ ಕೆಲಸ ಮಾಡದೆ ರೈತರಿಗೆ ಪ್ರಚೋದನೆ ನೀಡುವ ನಡೆ ಖಂಡನೀಯ ಎಂದರು.
ಮುಖ್ಯಮಂತ್ರಿಯವರು ಈಗಾಗಲೇ ರೈತರ, ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ನಡೆಸಿ ಕಬ್ಬಿನ ದರವನ್ನು ಹೆಚ್ಚಳ ಮಾಡಿದ್ದಾರೆ. ಆದರೆ ಬಿಜೆಪಿಯವರು ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ರಾಜ್ಯಾದ್ಯಂತ ಬಿಜೆಪಿಯ ರೈತ ವಿರೋಧಿ ನೀತಿಯ ವಿರುದ್ಧ ಹೋರಾಟ ನಡೆಸಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಮುಧೋಳದಲ್ಲಿ ಕಬ್ಬು ತುಂಬಿದ್ದ ಟ್ರ್ಯಾಕ್ಟರ್‌ಗಳಿಗೆ ಬೆಂಕಿ: ಹೆಚ್‌ಡಿಕೆ ಆಘಾತ

